ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ನಾನು ಪ್ರಥಮ ಆದ್ಯತೆ ನೀಡಿದ್ದು, ಸಚಿವನಾಗಿ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣಗೌಡ ತಿಳಿಸಿದರು.
ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಹೋಬಳಿ ಮಟ್ಟದ ನೇತ್ರ ತಪಾಸಣೆ ಹಾಗೂ ಕಂದಾಯ ಇಲಾಖೆ ವತಿಯಿಂದ ನಡೆದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟೋದು ಒಂದಿನ, ಸಾಯೋದು ಒಂದಿನ, ಆದರೆ,ಈ ಎರಡರ ನಡುವೆ ನಾವು ಏನ್ ಮಾಡಿದ್ವಿ ಅನ್ನೋದೇ ಮುಖ್ಯ. ನಮ್ಮ ಜನ್ಮ ಭೂಮಿಯಲ್ಲಿ ಏನಾದ್ರೂ ಸಾಧನೆ, ಸೇವೆ ಮಾಡಬೇಕು. ಮಂಡ್ಯದ ಹೆಸರಿನಲ್ಲಿ ಮುಂಬೈನಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ತಾಯಿಯ ಕೊನೆಯಾಸೆಯಂತೆ ತಾಲ್ಲೂಕಿನ ಸೇವೆ ಮಾಡುತ್ತಿದ್ದೇನೆ. ಎಲ್ಲಾ ಹೋಬಳಿಗಳಲ್ಲೂ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಏತ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಸಿಕ್ಕಿದ್ದು, ನನ್ನ ಪುಣ್ಯ. ಯಡಿಯೂರಪ್ಪನವರ ಆಶೀರ್ವಾದ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಕಾರದಿಂದ 1,700 ಕೋಟಿ ರೂ.ಅನುದಾನ ಸಿಕ್ಕಿದೆ. ಜುಲೈ 21 ರಂದು ತಾಲೂಕಿಗೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಬರ್ತಿದ್ದಾರೆ. ರಾಜಕೀಯ ಅನ್ನೋದು ನೀರಿನ ಮೇಲಿನ ಗುಳ್ಳೆಯ ರೀತಿ.ಅಭಿವೃದ್ಧಿಯೇ ಶಾಶ್ವತ. ಹಾಗಾಗಿ, ಎಲ್ಲರೂ ಸೇರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣ ಎಂದು ಹೇಳಿದರು.
ಇದೇ ವೇಳೆ ಬೂಕನಕೆರೆ ವ್ಯಾಪ್ತಿಯಲ್ಲಿ ಪಿಂಚಣಿ, ಜಾಬ್ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸಚಿವ ಡಾ.ನಾರಾಯಣಗೌಡ ಅವರು ವಿತರಿಸಿದರು.
ಜಿಲ್ಲಾಧಿಕಾರಿ ಎಸ್ ಅಶ್ವಥಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶೀಳನೆರೆ ಅಂಬರೀಶ್, ಜವರಾಯಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್, ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ, ತಹಶೀಲ್ದಾರ್ ರೂಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.