ಜನಸಾಮಾನ್ಯರು ತಮಗಿರುವ ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡರೆ,ಸಮಾಜದಲ್ಲಿ ಬದುಕಲು ಸಹಾಯವಾಗುತ್ತದೆ.ಆದ್ದರಿಂದ ಜನಸಾಮಾನ್ಯರಿಗೆ ಕಾನೂನು ಅರಿವು ಬಹಳ ಮುಖ್ಯ ಎಂದು ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೀರಪ್ಪ ತಿಳಿಸಿದರು.
ಮಂಡ್ಯ ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಾರತ ಅಮೃತ ಮಹೋತ್ಸವ-2021 ಅಂಗವಾಗಿ “ಜಾಥಾ ಹಾಗೂ ಕಾನೂನು ಅರಿವು”ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಅಂಗನವಾಡಿ ಕಾರ್ಯಕರ್ತರು ಜನಸಾಮಾನ್ಯರಿಗಿರುವ ಹಕ್ಕುಗಳ ಬಗ್ಗೆ ಹಾಗೂ ಮನೆಯಲ್ಲಿರುವ ವೃದ್ಧರನ್ನು ಯಾವ ರೀತಿಯಾಗಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸ ಬೇಕು ಎಂದರು.
ಕೋವಿಡ್ 19 ರ ಕಾಲಘಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾದುದು.ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಕಾನೂನನ್ನು ಕುರಿತು ಅರಿವು ಮೂಡಿಸಲು ಕೈಗೊಂಡಂತಹ ಜಾಥಾ ಯಶಸ್ವಿಯಾಗಲಿ ಎಂದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜ್ಞೇಶ್, ಮಂಡ್ಯಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎ.ಎಂ ನಳಿನಿಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.