ಹಾಲು ಉತ್ಪಾದಕ ಸಂಘದ ಕೆಲ ಸಿಬ್ಬಂದಿಗಳು,ಒಕ್ಕೂಟದ ಅಧಿಕಾರಿಗಳು ಹಣದಾಸೆಗೆ ಹಾಲಿನ ಕಳ್ಳರ ಜೊತೆ ಜೈ ಜೋಡಿಸಿದ ಪರಿಣಾಮ ಒಕ್ಕೂಟಕ್ಕೆ ಕೋಟ್ಯಾಂತರ ರೂ.ನಷ್ಷವಾಗುತ್ತಿತ್ತು.ಇದನ್ನು ಕಂಡ ಅಧ್ಯಕ್ಷ ರಾಮಚಂದ್ರು ಹಾಗೂ ನಿರ್ದೇಶಕರು ತಮ್ಮ ಪ್ರಾಣದ ಹಂಗು ತೊರೆದು ಒಕ್ಕೂಟಕ್ಕೆ ನಷ್ಟವನ್ನು ತಪ್ಪಿಸಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ನೂತನ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿದರು.
ಹಾಲಿಗೆ ನೀರು ಬೆರಸುವ ಗ್ಯಾಂಗ್ ಜೊತೆ ಕೆಲವು ಸಿಬ್ಬಂದಿ,ಅಧಿಕಾರಿಗಳು ಕೈ ಜೋಡಿಸಿದ್ದರಿಂದ ಒಕ್ಕೂಟಕ್ಕೆ ಸಾಕಷ್ಟು ನಷ್ಟವಾಗುತ್ತಿತ್ತು.ಪ್ರತಿದಿನ ಸಾಕಷ್ಟು ಪ್ರಮಾಣದ ಹಾಲು ಕಳ್ಳರ ಗ್ಯಾಂಗಿನ ಪಾಲಾಗುತ್ತಿತ್ತು.ಜಿಲ್ಲೆಯ ರೈತರ ಬೆನ್ನೆಲುಬಾಗಿರುವ ಒಕ್ಕೂಟವನ್ನು ಕಳೆದುಕೊಂಡರೆ ಜಿಲ್ಲೆಯ ಅನ್ನದಾತರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿದ ರಾಮಚಂದ್ರು,ನಿರ್ದೇಶಕರ ಜೊತೆ ಹೋಗಿ ರೈತರ ಪ್ರಾಣ ಪಣವಾಗಿಟ್ಟು ಹಾಲಿನ ಕಲಬೆರಕೆ ಜಾಲವನ್ನು ಬಯಲು ಮಾಡಿ ಸಂಸ್ಥೆಗೆ ಆಗುತ್ತಿದ್ದ ಹಾನಿ ತಪ್ಪಿಸಿದ್ದಾರೆ.
ರೈತರ ವರವಾಗಿರುವ ಹಾಲು ಒಕ್ಕೂಟವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ಹಾಲು ಉತ್ಪಾದಕರು,ಒಕ್ಕೂಟದ ಅಧಿಕಾರಿಗಳು ರೈತರ ಜೊತೆ ಕೈ ಜೋಡಿಸಿ ನಿಲ್ಲಬೇಕು ಎಂದರು.
ಹೊಳಲು ಗ್ರಾಮದಲ್ಲಿ ಉದ್ಘಾಟನೆಯಾಗಿರುವ ಬಿಎಂಸಿ ಘಟಕ ಸ್ಥಾಪನೆಗೆ ಮಾಜಿ ಶಾಸಕರಾದ ಹೆಚ್.ಡಿ.ಚೌಡಯ್ಯನವರ ಶ್ರಮ ದೊಡ್ಡದು.ಹೊಳಲು ಗ್ರಾಮಸ್ಥರು ಕಲಬೆರಕೆ ಹಾಲು ಪೂರೈಕೆದಾರರ ಜೊತೆಗೆ ಎಂದಿಗೂ ಕೈ ಜೋಡಿಸಲ್ಲ ಎಂಬ ನಂಬಿಕೆಯಿದೆ ಎಂದರು.ಮಾಜಿ ಶಾಸಕ ಹೆಚ್.ಬಿ.ರಾಮು,ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರು,ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ,ಗುತ್ತಿಗೆದಾರ ಬಾಲರಾಜ್,ಹೊಳಲು ಗ್ರಾ.ಪಂ.ಅಧ್ಯಕ್ಷ ರವಿ,ಉಪಾಧ್ಯಕ್ಷೆ ಪಲ್ಲವಿ,ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಿಮ್ಮೇಗೌಡ ಮತ್ತಿತರಿದ್ದರು.