ಮಂಡ್ಯ ಜಿಲ್ಲೆಯಲ್ಲಿ ಬರದ ಹಿನ್ನಲೆ ಬೆಳೆಹಾನಿ ಪರಿಹಾರ ಬಾಬ್ತು 34,94,97,157 ರೂ ಹಣವನ್ನು 79,839 ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ತಹಶೀಲ್ದಾರ್ ಗಳೊಂದಿಗೆ ಮಾತನಾಡಿದ ಅವರು, ಬರದ ಹಿನ್ನಲೆ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರದ ಹಣವನ್ನು ಜಮೆ ಮಾಡಲಾಗಿದ್ದು, ಬಹಳಷ್ಟು ರೈತರು ತಮಗೆ ಹಣ ಬಂದಿರುವುದಿಲ್ಲ ಎಂದು ಮೌಖಿಕವಾಗಿ ಕರೆ ಮಾಡಿ ದೂರು ಸಲ್ಲಿಸುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ಅಥವಾ ಸಹಾಯವಾಣಿ ಪ್ರಾರಂಭಿಸಿ ರೈತರ ಸಮಸ್ಯೆ ಪರಿಹರಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆ ಹಿನ್ನಲೆ ಬೆಳೆ ನಷ್ಟ ಕುರಿತಂತೆ ಸಮೀಕ್ಷೆ ನಡೆಸಿ ಸುಮಾರು 79,839 ರೈತರ 39,812 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವುದಾಗಿ ವರದಿ ಸಲ್ಲಿಸಲಾಗಿತ್ತು. ಎಸ್.ಡಿ.ಆರ್.ಎಫ್ ನಿಯಮದ ಅನುಸಾರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿರುತ್ತದೆ. ರೈತರ ಖಾತೆಗೆ ಜಮೆ ಮಾಡಿರುವ ಪರಿಹಾರ ಹಣ ಹಾಗೂ ಫಲಾನುಭವಿಗಳ ವಿವರವನ್ನು ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಪ್ರಕಟಿಸುವಂತೆ ತಿಳಿಸಿದರು.
ಹೆಲ್ಪ್ ಡೆಸ್ಕ್
ಬೆಳೆಹಾನಿ ರೈತರ ಖಾತೆಗೆ ಜಮೆ ಮಾಡಿರುವ ವಿವರವನ್ನು ಗ್ರಾಮ ಪಂಚಾಯಿತಿಗಳ ವೆಬ್ ಸೈಟ್ ಗಳಲ್ಲೂ ಸಹ ಪ್ರಕಟಿಸಲಾಗುವುದು ಎಂದರು.
ರೈತರ ಜಮೀನಿನ ಸರ್ವೆ ಸಂಖ್ಯೆ, ರೈತರ ಹೆಸರು ಮೊಬೈಲ್ ಸಂಖ್ಯೆ ಹಾಗೂ ಇನ್ನಿತರೆ ವಿವರಗಳು ಹೆಲ್ಪ್ ಡೆಸ್ಕ್ ನಲ್ಲಿ ಲಭ್ಯವಿರಬೇಕು. ರೈತರು ಸಂಪರ್ಕಿಸಿದ ತಕ್ಷಣ ಅವರಿಗೆ ಮಂಜೂರಾಗಿರುವ ಪರಿಹಾರದ ವಿವರ, ಮಂಜೂರಾಗಿಲ್ಲದಿದ್ದಾರೆ ನಿಖರ ಮಾಹಿತಿ ನೀಡಬೇಕು ಪರಿಹಾರ ಬಂದಿಲ್ಲ ಎಂದ ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಎಂದು ಅವರನ್ನು ಅಲೆದಾಡುವಂತೆ ಮಾಡಬೇಡಿ ಎಂದರು.
ಪರಿಹಾರ ಹಣ ಪಾವತಿಗೆ ಸಂಬಂಧಿಸಿದಂತೆ ಸುಮಾರು 1000 ರೈತರಿಗೆ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆಯಾಗದೆ, ಖಾತೆ ನಿಷ್ಕ್ರಿಯೆ ಹಾಗೂ ಸರಿಯಾದ ಐ.ಎಫ್.ಎಸ್.ಸಿ ಕೋಡ್ ಇಲ್ಲ ಎಂದು ಪಾವತಿಯಾಗಿರುವುದಿಲ್ಲ. ಇವುಗಳನ್ನು 24 ಗಂಟೆಯೊಳಗೆ ತಹಶೀಲ್ದಾರ್ ವಿಶೇಷ ಕಾಳಜಿ ವಹಿಸಿ ಪರಿಹಾರ ಹಣ ಪಾವತಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದಾರೆ ಕಡ್ಡಾಯವಾಗಿ ಟ್ಯಾಂಕರ್ ಮ್ಯಾನೆಜ್‌ಮೆಂಟ್ ಆ್ಯಪ್ ನ ಮೂಲಕ ನಿರ್ವಹಿಸಬೇಕು. ಇಲ್ಲಾವದಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
- ಕೆ.ಆರ್.ಪೇಟೆಯಲ್ಲಿ 17298 ರೈತರ ಒಟ್ಟು 9322.06 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 7,70,60,982 ರೂ ಪರಿಹಾರದ ಹಣ ಪಾವತಿಸಲಾಗಿದೆ.
- ಮದ್ದೂರಿನಲ್ಲಿ 12499 ರೈತರ ಒಟ್ಟು 3050.20 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 3,62,56,911/- ರೂ ಪರಿಹಾರದ ಹಣ ಪಾವತಿಸಲಾಗಿದೆ.
- ಮಳವಳ್ಳಿ ಯಲ್ಲಿ 11599 ರೈತರ ಒಟ್ಟು 4240.50 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 4,63,86,485/- ರೂ ಪರಿಹಾರದ ಹಣ ಪಾವತಿಸಲಾಗಿದೆ.
- ಮಂಡ್ಯ ತಾಲ್ಲೂಕಿನಲ್ಲಿ 4408 ರೈತರ ಒಟ್ಟು 2078.04 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 1,74,35,984/- ರೂ ಪರಿಹಾರದ ಹಣ ಪಾವತಿಸಲಾಗಿದೆ.
- ನಾಗಮಂಗಲ ತಾಲ್ಲೂಕಿನಲ್ಲಿ 28926 ರೈತರ ಒಟ್ಟು 18646.80 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 15,15,74,633/- ರೂ ಪರಿಹಾರದ ಹಣ ಪಾವತಿಸಲಾಗಿದೆ.
- ಪಾಂಡವಪುರ ತಾಲ್ಲೂಕಿನಲ್ಲಿ 4700 ರೈತರ ಒಟ್ಟು 2323.86 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 1,94,82,867/- ರೂ ಪರಿಹಾರದ ಹಣ ಪಾವತಿಸಲಾಗಿದೆ.
- ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 409 ರೈತರ ಒಟ್ಟು 150.66 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ಒಟ್ಟು 12,99,295/- ರೂ ಪರಿಹಾರದ ಹಣ ಪಾವತಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಉಪವಿಭಾಗಾಧಿಕಾರಿ ಮಹೇಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ: ಸುರೇಶ್, ಜಂಟಿ ಕೃಷಿ ನಿರ್ದೆಶಕ ಅಶೋಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾ ಮಣಿ ಉಪಸ್ಥಿತರಿದ್ದರು.