ರಾಜ್ಯದಲ್ಲಿ ಮಳೆಹಾನಿ ಪರಿಹಾರಕ್ಕೆ ₹746 ಕೋಟಿ ಹಣವನ್ನು ಮೀಸಲಿಡಲಾಗಿದೆ, ಮಡಿಕೇರಿ ಜಿಲ್ಲಾ ಪಿಡಿ ಖಾತೆಯಲ್ಲಿ 46 ಕೋಟಿ ಹಣ ಇದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಭೂ ಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಬೀಳುತ್ತಲೇ ಇರುವುದರಿಂದ ಭೂ ಕುಸಿತದ ಪ್ರದೇಶವನ್ನು ಸರಿ ಪಡಿಸಲು ಕಷ್ಟ ಆಗುತ್ತಿದೆ. 20 ಕಡೆ ಭೂ ಕುಸಿತ ಆಗಿದ್ದರೆ, ಸಣ್ಣ ಪ್ರಮಾಣದಲ್ಲಿ ಭೂಮಿ ಜಾರಿರುವುದು ಹೆಚ್ಚು ಕಡೆ ಆಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಹಲವರು ಗಾಯಗೊಂಡಿದ್ದಾರೆ ಎಂದರು.
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ತೀರ್ಮಾನವಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.
67 ಮನೆಗಳು ಪೂರ್ಣಹಾನಿ ಆಗಿವೆ. 176 ಮನೆಗಳು ಭಾಗಶಃ ಹಾನಿ ಆಗಿವೆ. 24 ಗಂಟೆಗಳ ಒಳಗೆ ಪೂರ್ಣ ಮತ್ತು ಭಾಗಶಃ ಹಾನಿ ಆಗಿರುವ ಘಟನೆಗಳೂ ನಡೆದಿವೆ. ಒಂದು ಲಕ್ಷದ 20 ಸಾವಿರ ರೂಪಾಯಿ ಜೊತೆಗೆ ಮನೆ ಕಟ್ಟಿ ಕೊಡಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದರಲ್ಲಿ 43 ಸಾವಿರ ರಾಜ್ಯ ಸರ್ಕಾರದ ಹಣ. ಈಗಾಗಲೇ ನೇರ ಸಂತ್ರಸ್ಥರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದರು.
16 ಜಾನುವಾರು ಸತ್ತಿವೆ. ತಲಾ 35 ಸಾವಿರ ಪರಿಹಾರ ನೀಡಿದ್ದೇನೆ. 14 ಪರಿಹಾರ ಕ್ಯಾಂಪ್ ಗಳನ್ನು ತೆರೆಯಲಾಗಿದೆ. 10 ಕ್ಯಾಂಪ್ ಗಳಲ್ಲಿ 186 ಮಂದಿ ಇದ್ದಾರೆ. ತೋರಾ ಕ್ಯಾಂಪ್ ನಲ್ಲಿ ಇರುವವರ ಜೊತೆ ನಾನೇ ನೇರವಾಗಿ ಮಾತನಾಡಿದ್ದೇನೆ ಎಂದರು.
28 ಹೆಕ್ಟೇರ್ ನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಕಾಫಿ ಬೋರ್ಡ್ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. 2708 ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. 150 ಬಿಟ್ಟು ಉಳಿದೆಲ್ಲಾವನ್ನೂ ಮತ್ತೆ ಅಳವಡಿಸಲಾಗಿದೆ. ಹಾಳಾಗಿದ್ದ 47 ಟ್ರಾನ್ಸ್ ಫಾರ್ಮರ್ ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ.
344 ಕಿಮಿ ಉದ್ದದ ಲೋಕೋಪಯೋಗಿ, ಜಿಲ್ಲಾ ಪಂಚಾಯ್ತಿ ರಸ್ತೆಗಳು ಹಾನಿ ಆಗಿವೆ. ಇವೆಲ್ಲವನ್ನೂ ಆಧ್ಯತೆ ಮೇಲೆ ಸರಿ ಪಡಿಸಲು ಸೂಚಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಶೇ50 ರಷ್ಟು ಹೆಚ್ಚು ಮಳೆಯಾಗಿದೆ. ನಾವು ಮುಂಜಾಗ್ರತಾ ಕ್ರಮಗಳ ಜೊತೆಗೆ ಅನಾಹುತ ಬಳಿಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಭೂ ಕುಸಿತದ ದುರಸ್ತಿ ಕಾರ್ಯವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.ಇ
ಶಿರಾಡಿ ಘಾಟಿಗೆ ಭೇಟಿ ನೀಡಿ ಅನಾಹುತಗಳನ್ನು ಪರಿಶೀಲನೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು.
ಭೂಕುಸಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರಕ್ಕೆ ಜಿಎಸ್ ಐ ವರದಿ ನೋಡಿ ನಂತರ ತೀರ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಮಾಜಿ ಸಚಿವ ನಾಣಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.