ಮೋಸ ಹೋಗೋ ಅಮಾಯಕರ ಸಂಖ್ಯೆ ಹೆಚ್ಚಾಗಿರೋವಾಗ ಮೋಸ ಮಾಡೋರು ಇದ್ದೇ ಇರ್ತಾರೆ. ಕಷ್ಟ ಪಟ್ಟು ದುಡಿಯದೆ ಕಳ್ಳ ಮಾರ್ಗದಲ್ಲಿ ಹಣ ಮಾಡ್ಬೇಕು ಅನ್ನೋ ಮುಠ್ಠಾಳರನ್ನು ನೋಡಿಕೊಂಡು ಹಣ ಮುಂಡಾಯಿಸುವ ವಂಚಕರ ಬಗ್ಗೆ ಆಗಾಗ್ಗೆ ವರದಿಗಳನ್ನ ನೋಡ್ತಾನೆ ಇದ್ರೂ ಕೂಡ ಪದೇ ಪದೇ ಇಂತಹ ಘಟನೆಗಳು ಮರುಕಳಿಸ್ತಾನೇ ಇರ್ತವೆ.
ಏನಪ್ಪ ವಿಷಯ ಅಂದ್ರಾ …. ಇದೋ ಹೇಳ್ತಿವ್ ನೋಡಿ. ಬರೋಬ್ಬರಿ ದೊಡ್ಡ ಮೊತ್ತದ 10 ಲಕ್ಷದ ಆಸೆಗೆ ಬಿದ್ದ ಇಬ್ಬರು ಮುಠ್ಠಾಳರು 5 ಲಕ್ಷ ಅಸಲಿ ನೋಟುಗಳನ್ನ ಕಳ್ಕೊಂಡಿದಾರೆ ಕಣ್ರೀ… ದುರಂತ ಅಲ್ವಾ!!?
ಹೌದು ಇಂದು ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿಯಿರುವ ಶ್ರೀ ಕಬ್ಬಾಳಮ್ಮ ಟೀ ಅಂಗಡಿ ಬಳಿ ಇಂದು ಮಂಗಳವಾರ ಬೆಳಿಗ್ಗೆ ಸುಮಾರು 12 ಗಂಟೆ ವೇಳೆಗೆ ಕುಣಿಗಲ್ ಮೂಲದ ಪುನೀತ್, ಕಿರಣ್ ಎಂಬ ಇಬ್ಬರು ವ್ಯಕ್ತಿಗಳು ( KA – 06 – Y – 8557 ) ಹೋಂಡಾ ಯೂನಿಕಾರ್ನ್ ಬೈಕ್ ನಲ್ಲಿ ಬಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು.
ಸ್ವಲ್ಪ ಸಮಯದ ನಂತರ ಅದೇ ಸ್ಥಳಕ್ಕೆ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು KA – 01 – 1772 ನಂಬರಿನ ಬಿಳಿ ಬಣ್ಣದ ಟೊಯೋಟಾ ಇಟಿಯೋಸ್ ಕಾರಿನಲ್ಲಿ ಬಂದಿದ್ದಾರೆ.
ನಂತರ ನಾಲ್ವರು ಕಾರಿನಲ್ಲಿ ಕುಳಿತು ಅಸಲಿ ನೋಟು ಕೊಟ್ಟು ನಕಲಿ ನೋಟು ಪಡೆಯುವ ಕಳ್ಳ ವ್ಯವಹಾರ ಮಾಡಿದ್ದಾರೆ. ಆದರಂತೆ ಕುಣಿಗಲ್ ನಿಂದ ಬಂದಿದ್ದ ಪುನೀತ್, ಕಿರಣ್ ಎಂಬ ಗಾಂಪರಿಗೆ 10ಲಕ್ಷ ನಕಲಿ ನೋಟುಗಳಿದ್ದ ಬ್ಯಾಗ್ ತೆರೆದು ತೋರಿಸಿದ್ದಾರೆ.
ಹಣ ಕಂಡು ಹಳ್ಳಕ್ಕೆ ಬಿದ್ದ ಗಾಂಪರಿಂದ 5 ಲಕ್ಷ ರೂಪಾಯಿ ಅಸಲಿ ನೋಟುಗಳಿದ್ದ ಬ್ಯಾಗ್ ಅನ್ನು ಪಡೆದ ಆರೋಪಿಗಳು ಇಬ್ಬರನ್ನು ಕೆಳಗಿಳಿಸಿ ಜೂಟ್ ಅಂತ ಶರವೇಗದಲ್ಲಿ ಮಳವಳ್ಳಿ ಕಡೆ ಕಾರು ಓಡಿಸಿದ್ದಾರೆ.
ಇತ್ತ ಪುನೀತ್ ಮತ್ತು ಕಿರಣ ಬ್ಯಾಗ್ ತೆರೆದು ಒಂದು ಬಂಡಲ್ ತೆಗೆದು ನೋಡಿದ್ರೆ ಅಲ್ಲೇನಿದೆ ಮಣ್ಣು… ಮೇಲೊಂದು ಒಂದಷ್ಟು ಬಂಡಲ್ ಮಾತ್ರ ಒರಿಜಿನಲ್ ನೋಟ್. ಅದರ ಕೆಳಗೆ ಇರೋದು ನೋಟ್ ಪುಸ್ತಕ.
ಆಗ ಇವರಿಗೆ ಮೋಸ ಹೋಗಿರೋದು ಗೊತ್ತಾಗಿ ನೋಡೋಷ್ಟರಲ್ಲಿ ವಂಚಕರು ಪರಾರಿಯಾಗಿ ಬಿಟ್ಟಿದ್ದರು.
ವಂಚಕರು ತಂದಿದ್ದ ಬ್ಯಾಗ್ ನಲ್ಲಿ ಕೆಳಗೆ ನೋಟ್ ಬುಕ್ ಗಳನ್ನು ತುಂಬಿ ಮೇಲುಗಡೆ ಮಾತ್ರ 100, 200, 500 ರೂಪಾಯಿಯ ಅಸಲಿ ನೋಟುಗಳನ್ನು ಅಂಟಿಸಿ ಇದರಲ್ಲಿ 10 ಲಕ್ಷ ರೂಪಾಯಿ ಹಣವಿದೆ ಹೊರಗಡೆ ಹೋಗಿ ಎಣಿಸಿಕೊಳ್ಳಿ ಎಂದು ಕಾರಿನಿಂದ ಕೆಳಗಿಳಿಸಿ 5 ಲಕ್ಷ ರೂಪಾಯಿ ಅಸಲಿ ಹಣದೊಂದಿಗೆ ಆರೋಪಿಗಳು ಮಳವಳ್ಳಿ ಕಡೆಗೆ ಎಸ್ಕೇಪ್ ಆಗಿ ಬಿಟ್ಟಿದ್ದರು.
ಕಾರಿನಿಂದ ಕೆಳಗೆ ಇಳಿದು ಹಣ ಎಣಿಸಲು ಮುಂದಾದ ವೇಳೆ ಪುನೀತ್ ಮತ್ತು ಕಿರಣರಿಗೆ ಅಸಲಿ ಸತ್ಯ ಗೊತ್ತಾಗಿದೆ. ಹಣ ಕಳೆದುಕೊಂಡ ವ್ಯಕ್ತಿಗಳು ತಕ್ಷಣವೇ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಬೇರೊಂದು ಕಾರನ್ನು ಅಡ್ಡಗಟ್ಟಿ ಇಟಿಯಾಸ್ ಕಾರನ್ನು ಕಿರಣ್ ಫಾಲೋ ಮಾಡಿದ್ದಾನೆ.
ಆದರೆ ಶರವೇಗದಲ್ಲಿ ಕಾರು ಓಡಿಸಿದ ವಂಚಕರು ಕಣ್ಣಿಗೆ ಕಾಣದಂತೆ ಮಾಯವಾಗಿಬಿಟ್ಟಿದ್ದರು. ಕೊನೆಗೆ ಹಣ ಕಳೆದುಕೊಂಡ ಕಿರಣ್ ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಗೆ ತೆರಳಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾನೆ.
ತಕ್ಷಣವೇ ಘಟನೆ ನಡೆದ ಸ್ಥಳಕ್ಕೆ ಮದ್ದೂರು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಹರೀಶ್, ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹದೇವಪ್ಪ, ಮದ್ದೂರು ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ರವಿ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಣ ಕಳೆದುಕೊಂಡ ಪುನೀತ್, ಕಿರಣ್ ಇಬ್ಬರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 5 ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾಗಿರುವ ಆರೋಪಿಗಳ ಬೇಟೆಗೆ ಪೋಲೀಸರು ಬಲೆ ಬೀಸಿದ್ದಾರೆ.