ಬಿಜೆಪಿ ಸರ್ಕಾರ ಜೆಡಿಎಸ್ ಎಂಎಲ್ಎಗಳ ಕ್ಷೇತ್ರಕ್ಕೆ 25 ಕೋಟಿ ಹಣ ಬಿಡುಗಡೆ ಮಾಡಿರುವುದರ ಹಿಂದೆ ಒಳ ಒಪ್ಪಂದದ ಕರಾಮತ್ತಿದೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕುಟುಕಿದರು.
ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಕ್ಷೇತ್ರಗಳಿಗೆ ಅನುದಾನ ನೀಡದೆ ಕೇವಲ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಿದ್ದು ಏಕೆ ಮುಖ್ಯಮಂತ್ರಿಗಳೇ?ಇದು ನಿಮಗೆ ಸರಿಯೆನಿಸುತ್ತದೆಯೇ?
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ನಡುವೆ ಯಾವಾಗ ಒಪ್ಪಂದ ನಡೆಯಿತು. ಏಕೆ ನಡೆಯಿತು ಎಂಬುದು ಜಗಜ್ಜಾಹೀರಾಗಿದೆ.
ನಮಗೆ ಬಡವರ ಕಲ್ಯಾಣ, ಜವಾಬ್ದಾರಿಯುತ ಸರ್ಕಾರ ಬೇಕೆ ವಿನಃ ಕಂಟ್ರಾಕ್ಟರ್‌ಗಳಿಂದ 40% ಕಮಿಷನ್ ಪಡೆಯುವ ಸರ್ಕಾರ ನಮಗೆ ಬೇಕಿಲ್ಲ ಎಂದು ಕಿಡಿಕಾರಿದರು.
ಕಮಿಷನ್ ಪಡೆಯುವುದರಲ್ಲಿ ಕಾಂಗ್ರೆಸ್‌ನ ಮುಂದುವರೆದ ಭಾಗ ಬಿಜೆಪಿ ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ಪರ ಏಕೆ ಪದೇ ಪದೇ ವಕಾಲತ್ತು ವಹಿಸಿಕೊಂಡು ಬರುತ್ತಾರೆ.
ವಿಧಾನಸಭೆಯಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ, ಜನರ ಹಿತದ ಬಗ್ಗೆ,ಸರ್ಕಾರದ ಅನೀತಿಗಳ ಬಗ್ಗೆ ಮಾತನಾಡಿ ಎಂದರೆ ಸಿದ್ದರಾಮಯ್ಯನವರನ್ನು ಕಾಳೆಲೆಯಲು ಹೋಗುತ್ತಾರೆ.
ಅವರಿಗೆ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿಲ್ಲವೆಂದರೆ ನಿದ್ದೆ ಬರಲ್ಲ ಎಂದು ಲೇವಡಿಯಾಡಿದರು.
ಜಿಲ್ಲೆಯಲ್ಲಿ ನಾವು ತಿರುಗಾಡಬೇಕಾದರೆ ನಮಗೆ ಬೇಸರವಾಗುತ್ತದೆ. ನಮ್ಮ ಸಿದ್ಧಾಂತಗಳಿಗೆ ನಮ್ಮ ಜನ ಯಾಕೆ ಬೆಲೆ ಕೊಡಲಿಲ್ಲ ಎಂದು ನೋವಾಗುತ್ತದೆ.
ಕುಮಾರಸ್ವಾಮಿ ಅವರ ದಲಿತ ಮುಖ್ಯಮಂತ್ರಿ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಎಂದರೆ, ಅವರ ಅಧಿಕಾರದ ಅವಧಿಯಲ್ಲಿ ದಲಿತರಿಗೆ, ಅಲ್ಪಸಂಖ್ಯಾತರರಿಗೆ ಯಾವ ಮಟ್ಟಿಗೆ ಮಂತ್ರಿಗಿರಿ ನೀಡಿದ್ದರು ಎಂದು ಜನರಿಗೆ ಗೊತ್ತಿದೆ.
ನಿಮ್ಮ ಮನೆಯನ್ನು ಕಾದ ಎನ್.ಚಲುವರಾಯಸ್ವಾಮಿ, ಬಾಬಣ್ಣನಿಗೆ ನೀವು ಯಾವ ರೀತಿ ಕಿರುಕುಳ ಕೊಟ್ಟು ಕಳುಹಿಸಿದ್ರಿ ಎಂದು ತಿಳಿದಿದೆ.ನಿಮ್ಮ ನಾಟಕಗಳನ್ನು ಕೇಳಿ ಕೇಳಿ ಮಂಡ್ಯ ಜನ ಬೇಸತ್ತು ಹೋಗಿದ್ದಾರೆ ಎಂದ ಅವರು, ಮುಂದಾದರೂ ಸತ್ಯ ಮಾತನಾಡಿ ಎಂದು ಕಿಡಿಕಾರಿದರು.