Friday, April 19, 2024

ಪ್ರಾಯೋಗಿಕ ಆವೃತ್ತಿ

ದೇಶದಲ್ಲಿ 4 ಕೋಟಿ ಬಾಲಕಾರ್ಮಿಕರಿದ್ದಾರೆ : ಡಾ. ಎಚ್. ಎಸ್. ಅನುಪಮ

ಭಾರತ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ರದ್ದು ಮಾಡಿದ್ದರೂ 4 ಕೋಟಿ ಬಾಲಕಾರ್ಮಿಕರು ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವುದು ದುರಂತದ ವಿಷಯ ಎಂದು ಹಿರಿಯ ಸಾಹಿತಿ ಡಾ. ಎಚ್. ಎಸ್. ಅನುಪಮ ಬೇಸರ ವ್ಯಕ್ತಪಡಿಸಿದರು.

ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಏರ್ಪಡಿಸಿದ್ದ ರಾಜ್ಯ ಮಟ್ಟದ ಯುವ ವೈಜ್ಞಾನಿಕ ಸಂಸತ್ ಅಧಿವೇಶನದಲ್ಲಿ ಯುವಜನತೆ ಮತ್ತು ಪ್ರಸ್ತುತ ಸವಾಲುಗಳು ವಿಷಯ ಮಂಡಿಸಿದರು.

ಭಾರತ ದೇಶದಲ್ಲಿ ಊಟ,ವಸತಿಯ ಕಾರಣಕ್ಕಾಗಿ ನಾಲ್ಕು ಕೋಟಿಯಷ್ಟು ಮಕ್ಕಳು ಬಾಲಕಾರ್ಮಿಕರಾಗಿ ಇದ್ದಾರೆ. ಹಣೆಬಟ್ಟು,ಬಳೆ ತಯಾರಿಕೆ, ಕಲ್ಲಿದ್ದಲು ಗಣಿಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಶಿವಕಾಶಿ ಪಟಾಕಿ ಫ್ಯಾಕ್ಟರಿಯಲ್ಲಿ ಸಾವಿರಾರು ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.ಇದು ಗೊತ್ತಿಲ್ಲದ ನಮ್ಮ ಮಕ್ಕಳು ಖುಷಿಯಿಂದ ಪಟಾಕಿ ಹೊಡೆಯುತ್ತಾರೆ ಎಂದರು.

ನಮ್ಮ ದೇಶದಲ್ಲಿ 15ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳು ವೇಶ್ಯೆಯರಾಗಿದ್ದಾರೆ.2011ರ ಅಂಕಿಅಂಶದ ಪ್ರಕಾರ 33,000 ಮಕ್ಕಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ರಿಮ್ಯಾಂಡ್ ಹೋಂ ಸೇರಿದ್ದರು ಎಂಬಿ ಬೆಚ್ಚಿ ಬೀಳಿಸುತ್ತದೆ.ಬಡತನ ಹಸಿವಿನ ಕಾರಣಕ್ಕಾಗಿ ಅಪರಾಧ ನಡೆಯುತ್ತಿದೆ ಎಂದರು.

ಇಂದು ಯುವಜನರಲ್ಲಿ ಬೌದ್ಧಿಕ ದಾರಿದ್ರ್ಯ ದೊಡ್ಡ ಸವಾಲಾಗಿದೆ. ಮುಟ್ಟಾದಾಗ ದೇವಸ್ಥಾನಕ್ಕೆ ಹೋಗಬಾರದು, ಮದುವೆಯಾದವರು ಕಾಲುಂಗುರ ಧರಿಸಬೇಕು, ನೀವು ಹಿಂಗೆ ಇರಬೇಕು,ನೀವು ಹಂಗೆ ಇರಬೇಕು ಮದುವೆಯಾದ ಮೇಲೆ ಹೀಗೆ ಇರಬೇಕು ಎಂದೆಲ್ಲ ಹೇಳಲಾಗುತ್ತಿದೆ. ಇದನ್ನು ಯುವಜನತೆ ವಿರೋಧಿಸಬೇಕು ಎಂದರು.

ಯುವಜನರನ್ನು ಕಾಡುತ್ತಿರುವುದು ಪ್ರೇಮ ಮತ್ತು ಕಾಮ. ಇಂದು ಪ್ರೀತಿಸುವ ಹುಡುಗ ಹುಡುಗಿಯನ್ನು ಮೊದಲು ಕೇಳುವುದು ನಿನ್ನ ಜಾತಿ, ಧರ್ಮ ಯಾವುದು ಅಂತ. ಕೆಲವರಿಗೆ ಜಾತಿಯೇ ಮುಖ್ಯ.ವರದಕ್ಷಿಣೆ ತೆಗೆದುಕೊಳ್ಳಬಾರದೆಂದು ಕಾನೂನು ಇದ್ದರೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ. ಯುವತಿಯರು ವರದಕ್ಷಿಣೆ ಪದ್ಧತಿಯನ್ನು ವಿರೋಧಿಸಬೇಕು ಎಂದರು.

ವೀರ್ಯ ನಾಶ ಮರಣ ಎಂದು ಹೇಳಲಾಗುತ್ತಿದೆ. ಹಸ್ತಮೈಥುನ ಯಾವುದು ತಪ್ಪಲ್ಲ. ಇದರ ಬಗ್ಗೆ ಅಪರಾಧಿ ಪ್ರಜ್ಞೆಯನ್ನು ಯುವಜನರಲ್ಲಿ ಬಿತ್ತಲಾಗುತ್ತಿದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದು ಜಾತಿ,ಧರ್ಮ, ಸಿದ್ಧಾಂತ,ಪಕ್ಷದ ಹೆಸರಿನಲ್ಲಿ ಗೋಡೆ ಕಟ್ಟಲಾಗುತ್ತಿದೆ. ನಮ್ಮ ಮಧ್ಯೆ ಯಾವ ಗೋಡೆಯನ್ನು ಕಟ್ಟಬೇಡಿ‌ ನಮಗೆ ಯಾವ ಗೋಡೆಯು ಬೇಕಾಗಿಲ್ಲ ಎಂದು ಗಟ್ಟಿದನಿಯಲ್ಲಿ ಯುವಜನತೆ ತಿಳಿಸಬೇಕು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!