Friday, September 27, 2024

ಪ್ರಾಯೋಗಿಕ ಆವೃತ್ತಿ

ಭತ್ತದ ಬೆಳೆಗೆ ರೋಗಬಾಧೆ | ಕೃಷಿ ವಿಜ್ಞಾನಿಗಳು ಸೂಚಿಸಿದ ಪರಿಹಾರಗಳೇನು…? ಇಲ್ಲಿ ಸಂಪೂರ್ಣ ಮಾಹಿತಿ…..

ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ನಾಟಿ ಮಾಡಿರುವ ಭತ್ತದ ಪೈರುಗಳಲ್ಲಿ ಕಂಡು ಬಂದಿರುವ ರೋಗಬಾಧೆಯನ್ನು ಅಧ್ಯಯನ ಮಾಡಿರುವ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು, ವಲಯ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳನ್ನೊಳಗೊಂಡ ತಂಡವು ಸೆ.25ರಂದು ವಿವಿಧೆಡೆ ಅಧ್ಯಯನ ನಡೆಸಿ ಹಲವು ಪರಿಹಾರಗಳನ್ನು ಸೂಚಿಸಿದೆ.

ಮಂಡ್ಯ ತಾಲ್ಲೂಕಿನ ಮನುಗನಹಳ್ಳಿ, ಬೇವಿನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ, ಹಾರೋಹಳ್ಳಿ, ಹೊಸಕೊಪ್ಪಲು, ಎಲೆಕೆರೆ ಗ್ರಾಮ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿ “ಬೆಳೆ ಉತ್ಪಾದನೆ ಆಧಾರಿತ ಸಮೀಕ್ಷೆ” ಕೈಗೊಂಡು ಭತ್ತ ಹಾಗೂ ಕಬ್ಬು ಬೆಳೆಗಳಲ್ಲಿ ಕಂಡು ಬಂದಿರುವ ಪೋಷಕಾಂಶಗಳ ಕೊರತೆ ಮತ್ತು ಕೀಟ, ರೋಗಬಾಧೆಗಳ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡಿರುತ್ತಾರೆ.

ಭತ್ತದ ಬೆಳೆಯಲ್ಲಿ ಕಂಡುಬಂದ ಸಮಸ್ಯೆಗಳು: ಅಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಅತಿ ಹೆಚ್ಚಿನ ಯೂರಿಯಾ ರಸಗೊಬ್ಬರ ಬಳಕೆಯಿಂದ ಕೃಷಿ ಬೆಳೆಗಳಲ್ಲಿ ಪ್ರಧಾನ ಪೋಷಕಾಂಶ (ಪೊಟ್ಯಾಷ್) ಹಾಗೂ ಲಘುಪೋಷಕಾಂಶಗಳ (ಜಿಂಕ್) ಕೊರತೆ ಹಾಗೂ ಹೆಚ್ಚಿನ ಪ್ರಮಾಣದ ರೋಗ ಕೀಟ ಬಾಧೆ ಕಂಡುಬರುತ್ತಿದೆ.

ಪೋಷಕಾಂಶಗಳ ಕೊರತೆ: ಬಹುತೇಕ ರೈತರು ಪೊಟ್ಯಾಷ್ ಮತ್ತು ಜಿಂಕ್ ಸಲ್ಫೇಟ್ ಬಳಕೆ ಮಾಡದಿರುವುರಿಂದ ಭತ್ತದ ಬೆಳೆಯಲ್ಲಿ ಪ್ರಸ್ತುತ ಪೊಟ್ಯಾಷ್ ಮತ್ತು ಜಿಂಕ್ ಪೋಷಕಾಂಶಗಳ ಕೊರತೆ ಹೆಚ್ಚಿನ ತಾಕುಗಳಲ್ಲಿ ಕಂಡು ಬಂದಿರುತ್ತದೆ

1. ಪೊಟ್ಯಾಷ್ ಕೊರತೆ: ಹಳೆಯ ಎಲೆಗಳ ತುದಿ ಹಾಗೂ ಅಂಚು ಹಳದಿ ಬಣ್ಣಕ್ಕೆ ತಿರುಗುತ್ತದೆ. ಪೊಟ್ಯಾಷ್ ಅಂಶವು ಸಸ್ಯಗಳಿಗೆ ರೋಗ ಕೀಟ ನಿರೋಧಕ ಶಕ್ತಿ ಒದಗಿಸುವುದು ಹಾಗೂ ಕಾಳುಗಳ ಕಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಕೊರತೆಯಿರುವ ಕಡೆ ಪ್ರತಿ ಎಕರೆಗೆ ಪ್ರಸ್ತುತ 17 ಕೆ.ಜಿ. ಪೊಟ್ಯಾಷ್ ಬಳಕೆ ಮಾಡುವುದು ಹಾಗೂ 2ನೇ ಬಾರಿ ಕಳೆ ತೆಗೆದಾಗ ಯೂರಿಯಾ ಜೊತೆ ಮತ್ತೊಮ್ಮೆ 17 ಕೆ.ಜಿ. ಬಳಕೆ ಮಾಡುವುದು

2. ಜಿಂಕ್ ಕೊರತೆ: ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಹಾಗೂ ಗೆರೆಗಳು ಕಾಣಿಸಿಕೊಳ್ಳುತ್ತವೆ. ಆನಂತರ ಕಂದು ಬಣ್ಣದ ಚುಕ್ಕೆಗಳು ಹಾಗೂ ಗೆರೆಗಳು ಗಾತ್ರದಲ್ಲಿ ಹಿಗ್ಗಿ ಎಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. 8 ಕಿ.ಗ್ರಾಂ ಸತುವಿನ ಸಲ್ಫೇಟ್ (ಪ್ರತಿ ಎರಡು ಬೆಳೆಗೆ ಒಂದು ಬಾರಿ) ಬಳಕೆ ಮಾಡುವುದು.

ಪೊಟ್ಯಾಷ್ ಕೊರತೆ ಜಿಂಕ್ ಕೊರತೆ

ಕೀಟ ಬಾಧೆ: ಪ್ರಮುಖವಾಗಿ ಗರಿ ಮಡಿಸುವ ಹುಳು, ಕೊಳವೆ ಹುಳುಗಳ ಹಾವಳಿ ಕಂಡು ಬಂದಿರುತ್ತದೆ

1. ಗರಿ ಮಡಿಸುವ ಹುಳು: ಗರಿಗಳ ಅಂಚು ಒಳಭಾಗಕ್ಕೆ ಸುರುಳಿ ಸುತ್ತಿಕೊಂಡಿರುತ್ತದೆ. ಇಂತಹ ಗರಿಗಳೊಳಗೆ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಬಿಳಿಯ ಹಾಳೆಯಂತೆ ಕಾಣಿಸಿ ಒಣಗುತ್ತದೆ.

2. ಕೊಳವೆ ಹುಳು: ಮರಿಗಳು ಗರಿಗಳ ತುದಿಯನ್ನು ಕತ್ತರಿಸಿ ಕೊಳವೆಯನ್ನು ನಿರ್ಮಿಸಿಕೊಳ್ಳುತ್ತದೆ. ಹುಳು ಕೊಳವೆಯ ಸಮೇತ ಗರಿಗಳ ತಳಭಾಗಕ್ಕೆ ಅಂಟಿಕೊಂಡು ಏಣಿಯಾಕಾರದಲ್ಲಿ ಗರಿಗಳನ್ನು ಕೆರೆದು ತಿನ್ನುತ್ತದೆ.
ಮೇಲ್ಕಂಡ ಕೀಟಗಳ ನಿರ್ವಹಣೆಗಾಗಿ 2 ಮಿ.ಲೀ. ಕ್ಲೋರೋಫೈರಿಫಾಸ್ (20 ಇ.ಸಿ.) ಅಥವಾ 1.5 ಮಿ.ಲೀ. ಫಿಪ್ರೋನಿಲ್ (5 ಎಸ್.ಸಿ.) ಅಥವಾ 0.1 ಮಿ.ಲೀ. ಪ್ಲೂಬೆಂಡಿಅಮೈಡ್ (480 ಎಸ್.ಸಿ.) ಅಥವಾ 0.2 ಗ್ರಾಂ ಪ್ಲೂಬೆಂಡಿಅಮೈಡ್ (20 ಡಬ್ಲು.ಜಿ.) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ).

ಗರಿ ಮಡಿಸುವ ಹುಳು ಕೊಳವೆ ಹುಳು

ರೋಗ ಭಾದೆ: ಭತ್ತದಲ್ಲಿ ಪ್ರಮುಖವಾಗಿ ಕಂದು ಚುಕ್ಕೆ ರೋಗ ಮತ್ತು ದುಂಡಾಣು ಅಂಗಮಾರಿ (ಪಾಂಡವಪುರ ತಾಲ್ಲೂಕು ಅರಳಕುಪ್ಪೆ ಭಾಗದಲ್ಲಿ ಮಾತ್ರ) ರೋಗ ಕಂಡು ಬಂದಿರುತ್ತದೆ. ಮೋಡ ಕವಿದ ವಾತಾವರಣ ಇದ್ದಲ್ಲಿ ಬೆಂಕಿ ರೋಗದ ಬಾಧೆ ಜಿಲ್ಲೆಯಾದ್ಯಂತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.

1. ಕಂದು ಚುಕ್ಕೆ ರೋಗ: ಎಲೆಗಳ ಮೇಲೆ ಮೊಟ್ಟೆಯಾಕಾರದ ಕಂದು ಚುಕ್ಕೆಗಳು ಕಂಡುಬರುವುದು

2. ಬೆಂಕಿ ರೋಗ: ಎಲೆಗಳ ಮೇಲೆ ವಜ್ರಾಕಾರದ ಕಂದು ಚುಕ್ಕೆಗಳು ಉಂಟಾಗಿ ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣ ಹೊಂದಿರುತ್ತದೆ. ಇವುಗಳ ನಿರ್ವಹಣೆಗಾಗಿ 1 ಗ್ರಾಂ ಕಾರ್ಬೆಂಡೈಜಿA 50 ಡಬ್ಲು.ಪಿ. ಅಥವಾ 2 ಮಿ.ಲೀ. ಹೆಕ್ಸಾಕೋನಝೋಲ್ (5 ಎಸ್.ಸಿ.) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು (ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ).

3. ದುಂಡಾಣು ಅಂಗಮಾರಿ ರೋಗ (ಪಾಂಡವಪುರ ತಾಲ್ಲೂಕು ಅರಳಕುಪ್ಪೆ ಭಾಗದಲ್ಲಿ ಮಾತ್ರ): ತೆನೆ ಅಂಚಿನ ಗರಿಗಳು ಒಣಗಿದಂತಾಗಿ ತುದಿ ಹೆಡೆಯಂತೆ ಬಾಗಿರುತ್ತದೆ ಮತ್ತು ಎಲೆಗಳ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡುಬರುತ್ತದೆ. ಇದರ ನಿರ್ವಹಣೆಗಾಗಿ 0.2 ಗ್ರಾಂ ಸ್ಟೆçಪ್ಟೋಸೈಕ್ಲಿನ್ ಮತ್ತು 1 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು

ಕಂದು ಚುಕ್ಕೆ ರೋಗ ಬೆಂಕಿ ರೋಗ ದುಂಡಾಣು ಅಂಗಮಾರಿ ರೋಗ

ಕಬ್ಬು ಬೆಳೆಯಲ್ಲಿ ಕಂಡುಬಂದ ಸಮಸ್ಯೆಗಳು: ಕಬ್ಬು ಬೆಳೆಯಲ್ಲಿ ಪ್ರಮುಖವಾಗಿ ಗೊಣ್ಣೆ ಹುಳು ಮತ್ತು ಆದಿ ಸುಳಿ ಕೊರಕ ಕೀಟಗಳ ಬಾಧೆ ಕಂಡು ಬಂದಿರುತ್ತದೆ

1. ಗೊಣ್ಣೆ ಹುಳು: ಗೊಣ್ಣೆಹುಳು ಬಿತ್ತನೆಯ ಕಬ್ಬಿನ ತುಂಡನ್ನು ಕೊರೆಯುವುದರಿಂದ, ಬೇರನ್ನು ಮತ್ತು ಬೇರಿನ ಇತರೆ ಭಾಗಗಳನ್ನು ತಿನ್ನುವುದರಿಂದ ಎಲೆಗಳು ಒಣಗಿದಂತೆ ಕಂಡುಬರುತ್ತದೆ

2. ಆದಿಸುಳಿ ಕೊರಕ: ಮರಿಹುಳುಗಳು ಬುಡಭಾಗದಲ್ಲಿ ಕೊರೆದು ಸುಳಿಯಲ್ಲಿ ಏರಿ ಕಾಂಡವನ್ನು ತಿನ್ನುವುದರಿಂದ ಸುಳಿ ಒಣಗುತ್ತದೆ. ಕೈಯಿಂದ ಎಳೆದರೆ ಸುಲಭವಾಗಿ ಸುಳಿ ಹೊರಬರುತ್ತದೆ

ಮೇಲ್ಕಂಡ ಕೀಟಗಳ ನಿರ್ವಹಣೆಗಾಗಿ 2-5 ಮಿ.ಲೀ. ಕ್ಲೋರೋಫೈರಿಫಾಸ್ (20 ಇ.ಸಿ.) (ಕೀಟಗಳ ಸಾಂಧ್ರತೆಗೆ ಅನುಗುಣವಾಗಿ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು/ ಬುಡಕ್ಕೆ ಹಾಕುವುದು (ಎಕರೆಗೆ 300 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ) ಅಥವಾ 9 ಕೆ.ಜಿ. ಕ್ಲೋರಂಟ್ರಾನಿಲಿಪ್ರೋಲ್ (0.4 ಜಿ) ಮರಳಿನೊಂದಿಗೆ ಮಿಶ್ರಣ ಮಾಡಿ ಗಿಡದ ಬುಡಕ್ಕೆ ಹಾಕಿ ನಂತರ ಮಣ್ಣು ಏರು ಹಾಕುವುದು ಸೂಕ್ತ ಪರಿಹಾರವೆಂದು ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ. ರೈತ ಬಾಂಧವರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೋರಿದೆ

ಅಧ್ಯಯನ ತಂಡದಲ್ಲಿ ಭಾಗವಹಿಸಿದ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ವಿವರ

ಡಾ. ಕೇಶವಯ್ಯ, ಪ್ರಾಧ್ಯಾಪಕರು, ಬೇಸಾಯಶಾಸ್ತ್ರ -ಕಬ್ಬು ವಿಭಾಗ, ಡಾ. ವಿ.ಬಿ.ಸನತ್ ಕುಮಾರ್, ವಿಜ್ಞಾನಿಗಳು, ಸಸ್ಯರೋಗಶಾಸ್ತç-ಭತ್ತ ವಿಭಾಗ, ಡಾ. ಎನ್.ಎಸ್.ಕಿತ್ತೂರಮಠ, ವಿಜ್ಞಾನಿಗಳು, ಕೀಟಶಾಸ್ತç ವಿಭಾಗ

ಭಾಗವಹಿಸಿದ ಅಧಿಕಾರಿಗಳ ವಿವರ

ಅಶೋಕ.ವಿ.ಎಸ್ (ಜಂಟಿ ಕೃಷಿ ನಿರ್ದೇಶಕರು),  ಜಿ. ಶ್ರೀಹರ್ಷ ( ಸಹಾಯಕ ಕೃಷಿ ನಿರ್ದೇಶಕರು),
ಸುನಿತ (ಸಹಾಯಕ ಕೃಷಿ ನಿರ್ದೇಶಕರು), ಮಂಜುನಾಥ( ಸಹಾಯಕ ಕೃಷಿ ನಿರ್ದೇಶಕರು)  ಪಾಂಡವಪುರ ತಾಲ್ಲೂಕು, ಪ್ರಿಯದರ್ಶಿನಿ (ಸಹಾಯಕ ಕೃಷಿ ನಿರ್ದೇಶಕರು) ಶ್ರೀರಂಗಪಟ್ಟಣ ತಾಲ್ಲೂಕು, ಕೃಷಿ ಅಧಿಕಾರಿಗಳು ಮತ್ತು ಆತ್ಮ ಯೋಜನೆ ಸಿಬ್ಬಂದಿಗಳು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!