ಇತ್ತೀಚಿನ ದಿನಗಳಲ್ಲಿ ರಾಗಿ ಬೆಳೆಯು ದಕ್ಷಿಣದಿಂದ ಉತ್ತರ ಭಾರತಕ್ಕೂ ವಿಸ್ತರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ವಿ.ಸಿ.ಫಾರಂ ಕೃಷಿ ಕಾಲೇಜಿನ ಡೀನ್ ಡಾ.ಎಸ್.ಎಸ್.ಪ್ರಕಾಶ್ ಹೇಳಿದರು.
ಮಂಡ್ಯ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಎಸ್ಸಿ-ಎಸ್ಟಿ ನೌಕರರು ಮತ್ತು ನಿವೃತ್ತ ನೌಕರರ ಭವನದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ರಾಗಿ ಲಕ್ಷ್ಮಣಯ್ಯ ಶತಮಾನೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2003ರಲ್ಲಿ ನಾವು ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ರಾಗಿ ಬೆಳೆಗೆ ಒಂದು ಕ್ವಿಂಟಲ್‌ಗೆ 300 ರಿಂದ 350 ರೂ, ಭತ್ತಕ್ಕೆ 600-700ರೂ ಇತ್ತು. ಈಗ ಉಲ್ಟಾ ಆಗಿದೆ. ರಾಗಿಗೆ 3000ರೂ ಆಗಿದೆ. ಹಳೇ ರಾಗಿ 4000 ರೂ. ಗೆ ಮಾರಾಟವಾಗುತ್ತಿದೆ. ರಾಗಿ ಬೆಳೆ ಸಂಶೋಧನೆಯಲ್ಲಿ ರಾಗಿ ಲಕ್ಷ್ಮಣಯ್ಯ ಅವರ ಕೊಡುಗೆ ಅಪಾರ ಎಂದು ನುಡಿದರು.
ರಾಗಿ ಬೆಳೆಯಲ್ಲಿ ಲಾಭ ಇಲ್ಲ ಎನ್ನುತ್ತಿದ್ದವರು ಈಗ ರಾಗಿ ಬೆಳೆದು ಲಾಭಕಾಣಲು ರಾಗಿ ಲಕ್ಷ್ಮಣಯ್ಯ ಅವರ ಸಾಧನೆಯನ್ನು ಸ್ಮರಿಸಬೇಕಿದೆ. ರಾಗಿ ದಕ್ಷಿಣ ಕರ್ನಾಟಕದ ಬೆಳೆಯಾಗಿದ್ದು, ಇಂದು ಉತ್ತರ ಭಾರತಕ್ಕೆ ಸರಬರಾಜು ಆಗುತ್ತಿರುವುದು ಉತ್ತಮ ಬೆಳೆವಣಿಗೆ ಎಂದರು.
ರಾಗಿ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ, ಕಾಯಿಲೆ ಇದ್ದವರು ಮತ್ತು ಕಾಯಿಲೆ ಬೇಡ ಎನ್ನುವವರು ರಾಗಿ ಸೇವನೆ ಮಾಡಿತ್ತಿದ್ದಾರೆ. ರಾಗಿಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸಬೇಕಿದೆ, ಬೆಂಗಳೂರಿನಲ್ಲಿ ರಾಗಿ ಹಿಟ್ಟು ಪ್ಯಾಕೇಟ್‌ಗಳಲ್ಲಿ ಸಿಗುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಕಾರ್ಯ ಪ್ರವೃತ್ತವಾಗಬೇಕು ಎಂದರು.
ರೈತ ನಾಯಕಿ ಸುನಂದಜಯರಾಂ ಅವರು, ಮೇ 27-28ರಂದು ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ವತಿಯಿಂದ ರಾಗಿ ಲಕ್ಷ್ಮಣಯ್ಯ ಶತಮಾನೋತ್ಸವದ ಅಂಗವಾಗಿ ಸಮಾರಂಭ ಆಯೋಜಿಸಲಾಗಿದೆ. ಸಂಸ್ಮರಣ ಗ್ರಂಥ ಬಿಡುಗಡೆ, ಸ್ಮಾರಕ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಇಂತಹ ಕೃಷಿ ಸಂಶೋಧನೆಯ ಸಾಧಕರ ಸಭೆಗೆ ಕೃಷಿ ವಿಜ್ಞಾನಿಗಳು, ಕೃಷಿಕರು, ಕೃಷಿ ವಿದ್ಯಾರ್ಥಿಗಳು, ರೈತರು ಪಾಲ್ಗೊಳ್ಳಲಿದ್ದಾರೆ. ಆಸಕ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಕರೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ರಾಗಿ ಲಕ್ಷ್ಮಣಯ್ಯ ಅವರ ಮಗ ನಿವೃತ್ತ ಕೃಷಿ ಸಹ ಪ್ರಾಧ್ಯಾಪಕ ಎಚ್.ಎಲ್.ವಸಂತಕುಮಾರ್, ಕೃಷಿ ಅಧಿಕಾರಿ ಡಾ.ಸೋಮಶೇಖರ್, ವಿಚಾರವಾದಿ ಡಾ.ಎಸ್.ತುಕಾರಾಮ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಕೆ.ಬೋರಯ್ಯ, ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವಲಿಂಗಯ್ಯ, ಉಪಾಧ್ಯಕ್ಷ ಗುರುಮೂರ್ತಿ, ಪುಷ್ಪಲತಾ, ವೆಂಕಟಾಚಲ, ದುಂಡಲಿಂಗಯ್ಯ, ಜಯರಾಮು, ತೂಬಿನಕೆರೆ ಲಿಂಗರಾಜು ಮತ್ತಿತರರಿದ್ದರು.