ವಿಶ್ವ ಪ್ರಸಿದ್ದ ಕೆಆರ್‌ಎಸ್ ಅಣೆಕಟ್ಟೆಗೆ ಸರ್.ಎಂ.ವಿಶ್ವೇಶ್ವರಯ್ಯ ರವರ ಮರಿ ಮೊಮ್ಮಗ ಸತೀಶ್ ಮೋಕ್ಷಗುಡಂ ಹಾಗೂ ಅವರ ಕುಟುಂಬ ಸದಸ್ಯರು ಭೇಟಿ ಮಾಡಿ ವೀಕ್ಷಣೆ ನಡೆಸಿದರು.
ಸರ್.ಎಂ.ವಿ.ರವರ ಸಹೋದರನ ಪುತ್ರ ಸತೀಶ್ ಮೋಕ್ಷ ಗುಂಡಂ ತಮ್ಮ ಪತ್ನಿ ಲಕ್ಷ್ಮಿ, ಮಗಳು ದಿವ್ಯಾ ಜೊತೆ ಅಣೆಕಟ್ಟೆ ಗೇಟುಗಳು, ಸರ್.ಎಂ.ವಿ ನಾಲೆ, ಹಿನ್ನೀರು, ಬೃಂದಾವನ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಅಣೆಕಟ್ಟೆ ಮತ್ತು ಗೇಟುಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದ ಅವರು, ಸರ್.ಎಂ.ವಿ ಹೆಸರಿನ ಹಾಗೂ ಅವರು ನಿರ್ಮಿಸಿದ ನಾಲೆಯನ್ನು ಖುದ್ದು ನೋಡಿದರು. ಕಾವೇರಿ ನೀರಾವರಿ ನಿಗಮ ಸಹಾಯಕ ಅಭಿಯಂತರ ಮಾನಸ ಸರ್.ಎಂ.ವಿ ಕುಟುಂಬಸ್ಥರಿಗೆ ಪ್ರಸ್ತುತ ಅಣೆಕಟ್ಟೆ ಕುರಿತು ಮಾಹಿತಿ ನೀಡಿದರು.
ಸತೀಶ್ ಮೋಕ್ಷಗುಡಂ ಈ ವೇಳೆ ಮಾತನಾಡಿ, ಅಣೆಕಟ್ಟೆ ಕಟ್ಟಲು ಮೈಸೂರು ಮಹಾರಾಜರ ಕೊಡುಗೆ ಅನನ್ಯ. ಅವರ ಅನೇಕ ಜನೋಪಯೋಗಿ ಯೋಜನೆಗಳಿಂದ ಇಂದಿನ ಕರ್ನಾಟಕ ಅವಿಸ್ಮರಣೀಯವಾಗಿದೆ ಎಂದರು.
ಕೆಆರ್‌ಎಸ್ ಅಣೆಕಟ್ಟೆ ನಿರ್ಮಿಸಿದ್ದರಿಂದ ಕೋಟ್ಯಾಂತರ ರೈತರಿಗೆ ಅನುಕೂಲವಾಗಿದೆ. ಅಣೆಕಟ್ಟೆ ನಿರ್ಮಾಣಕ್ಕೆ ನಮ್ಮ ಮುತ್ತಾತ ಸರ್.ಎಂ.ವಿಯವರ ತಂತ್ರಜ್ಙಾನದ ಕೊಡುಗೆ ಕೂಡ ಅವಿಸ್ಮರಣೀಯವಾಗಿದೆ. ಆದ್ದರಿಂದ ಲಕ್ಷಾಂತರ ಜನರು ಇಂದಿಗೂ ನಮ್ಮ ಮುತ್ತಾತ ಅವರನ್ನು ಸ್ಮರಿಸುತ್ತಾರೆ. ಅವರ ಶ್ರಮ ಮತ್ತು ಅವರು ಬಳಸಿದ ತಂತ್ರಜ್ಙಾನ ದಿಂದ ಈ ಅಣೆಕಟ್ಟು ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದ ಇಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದರು.
ಪ್ರತಿಮೆ ಬಗ್ಗೆ ಸರ್ಕಾರ ಕಠಿಣ ನಿಲವು ತೆಗೆದುಕೊಳ್ಳಬೇಕು. ನಮ್ಮ ಮುಖ್ಯಮಂತ್ರಿಗಳು ಸ್ವತಃ ಇಂಜಿನಿಯರ್ ಆಗಿದ್ದು, ಅವರು ಸಹ ಸರ್.ಎಂ.ವಿ ಬಗ್ಗೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಶೀಘ್ರ ಪ್ರತಿಮೆ ಸ್ಥಾಪನೆಗೆ ಮನವಿ ಮಾಡುತ್ತೇವೆ ಎಂದರು.
ಈ ವೇಳೆ ಕಾ.ನೀ.ನಿಗಮದ ಸಹಾಯಕ ಅಭಿಯಂತರ ಮಾನಸ, ಕಿರಿಯ ಅಭಿಯಂತರರಾದ ಗಣೇಶ್, ಅಭಿಲಾಷ್, ಸರ್ಕಾರಿ ನೌಕರರ ಸಂಘದ ಕೆಆರ್‌ಎಸ್ ಯೋಜನಾ ಘಟಕದ ಅಧ್ಯಕ್ಷ ಶಿವಪ್ಪ ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.