Sunday, September 24, 2023

ಪ್ರಾಯೋಗಿಕ ಆವೃತ್ತಿ

ಭೂವರಾಹನಾಥ ಮೂರ್ತಿಗೆ ಅಭಿಷೇಕ

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಭೂವರಹನಾಥ ಕಲ್ಲಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ಸಮೇತನಾಗಿ ನೆಲೆಸಿರುವ ಭೂವರಾಹನಾಥ ಮೂರ್ತಿಗೆ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಅಭಿಷೇಕ ನೆರವೇರಿತು.

ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತಸಾಗರದ ಮುಗಿಲು ಮುಟ್ಟಿದ ಸಂಭ್ರಮದ ನಡುವೆ ಭೂವರಹನಾಥನಿಗೆ ಪಟ್ಟಾಭಿಷೇಕ ಮಾಡಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಿದ ಭಕ್ತರು ಶ್ರೀನಿವಾಸ, ಗೋವಿಂದ,
ವೆಂಕಟರಮಣ ಎಂದು ಜಯಘೋಷ ಮೊಳಗಿಸಿದರು.

ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಜೇನುತುಪ್ಪ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯಗಳು, ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಸುಗಂಧರಾಜ, ಗುಲಾಬಿ, ಪವಿತ್ರ ಪತ್ರೆಗಳು, ತುಳಸಿ, ಜವನ, ತಾವರೆ, ಕನಕಾಂಬರ ಸೇರಿದಂತೆ 58 ವಿವಿಧ ಬಗೆಯ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಿ ಸ್ವಾಮಿಗೆ ಭಕ್ತಿನಮನ ಸಲ್ಲಿಸಲಾಯಿತು.

ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ್ ರಾಘವನ್ ಅವರ ನೇತೃತ್ವದಲ್ಲಿ ಶಾಸ್ತ್ರಬದ್ಧವಾಗಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.ಎರಡೂವರೆ ಗಂಟೆಗಳ ಕಾಲ ನಡೆದ ರೇವತಿ ನಕ್ಷತ್ರದ ಅಭಿಷೇಕವನ್ನು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಕಣ್ತುಂಬಿಕೊಂಡರು.

ಭೂವರಹನಾಥ ದೇವಾಲಯವನ್ನು ದೊಡ್ಡಬಳ್ಳಾಪುರದ ಸಮೀಪದ ಗಣಿಯಿಂದ ಸಾವಿರಾರು ಲೋಡ್ ಗ್ರಾನೈಟ್ ಕಲ್ಲಿನ ಬಂಡೆಗಳನ್ನು ತಂದು ಹೊಯ್ಸಳ ವಾಸ್ತುಶೈಲಿಯಲ್ಲಿ ಮೂರು ಪ್ರಾಕಾರಗಳ ದೇವಾಲಯ, 21 ಕಾಲುಗಳ ಮುಖಮಂಟಪ ಹಾಗೂ 172 ಎತ್ತರದ ಬೃಹತ್ ರಾಜಗೋಪುರವನ್ನು ನಿರ್ಮಿಸಲಾಗುತ್ತಿದೆ.

ರಾಜ್ಯ ಸರ್ಕಾರವು 03 ಕೋಟಿ ರೂ ವಿಶೇಷ ಅನುದಾನವನ್ನು ದೇವಾಲಯ ಪುನರ್ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದು ದಾನಿಗಳು ಹಾಗೂ ಭಕ್ತರ ನೆರವಿನಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶ್ರೀನಿವಾಸ ರಾಘವನ್ ತಿಳಿಸಿದರು.

ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ಕೇಂದ್ರೀಯ ಮಾದರಿಯ ಶಿಕ್ಷಣ ಸಂಸ್ಥೆಯನ್ನು ಪರಕಾಲ ಮಠದ ನೇತೃತ್ವದಲ್ಲಿ ಆರಂಭಿಸಲಾಗುತ್ತಿದೆ. ಭಕ್ತರು ತನು, ಮನ, ಧನ ಸಹಾಯ ಮಾಡಿ ಭೂವರಹನಾಥ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಇಂದಿನ ರೇವತಿ ನಕ್ಷತ್ರದ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್ ದಂಪತಿಗಳು, ಚಲನಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮಾಜಿಸಚಿವ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಚಂದ್ರನ್, ಜೆಡಿಎಸ್ ಮುಖಂಡ ನಂದೀಶ್, ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿ ಕುಮಾರ್ ಹಾಗೂ ಸಿಬ್ಬಂಧಿಗಳು ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!