ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಕೇಂದ್ರಗಳನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಿ ಕಳಪೆ ಮಾರಾಟ ಕಂಡು ಬಂದಲ್ಲಿ ತಮಗೂ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳು ಚುರುಕಾಗಿ ಕೆಲಸ ನಿರ್ವಹಿಸಬೇಕು. ಪ್ರತಿ ತಿಂಗಳು ಗುರಿ ನಿಗದಿ ಮಾಡಿಕೊಂಡು ಮಾರಾಟ ಕೇಂದ್ರಗಳ ಪರಿಶೀಲನೆ ನಡೆಸಬೇಕು. ಯಾವುದೇ ರೀತಿಯ ಅಕ್ರಮ ಕಂಡು ಬಂದರೆ ತಕ್ಷಣ ಎಫ್.ಐ.ಆರ್. ದಾಖಲು ಮಾಡಿ ಎಂದರು.
ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬಿತ್ತನೆ ಬೀಜದ ಅಗತ್ಯ ದಾಸ್ತಾನು ಮಾಡಿ ಸರಿಯಾದ ಸಮಯಕ್ಕೆ ರೈತರಿಗೆ ದೊರೆಯಬೇಕು. ವಿವಿಧ ರೀತಿಯ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬೇಡಿಕೆ, ಬಫರ್ ನಲ್ಲಿರುವ ದಾಸ್ತಾನು ಹಾಗೂ ವಿವಿಧ ಮಾರಾಟದ ಹಂತದಲ್ಲಿರುವ ರಸಗೊಬ್ಬರದ ದಾಸ್ತಾನಿನ ವಿವರವನ್ನು ನಿಗದಿತವಾಗಿ ಪರಿಶೀಲಿಸಿಕೊಳ್ಳಬೇಕು ಎಂದರು.
ರಸಗೊಬ್ಬರ, ಬಿತ್ತನೆ ಬೀಜ, ಬಯೋ ಪೆಸ್ಟಿಸೈಡ್, ಸಾವಯವ ಗೊಬ್ಬರ ಸೇರಿದಂತೆ ಅವುಗಳ ಗುಣಮಟ್ಟವನ್ನು ಪರಿಶೀಲಿಸಲು ಗುರಿ ನಿಗದಿಮಾಡಿದೆ. ಗುರಿಗೆ ಮಾತ್ರ ಸೀಮಿತ ಮಾಡಿಕೊಳ್ಳದೇ ಹೆಚ್ಚು ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಗುಣಮಟ್ಟದ ಪರೀಕ್ಷೆ ಮಾಡಿಸಿದರೆ ಇದರಿಂದ ಬಹಳಷ್ಟು ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿ ಪರಿಹರಿಸಬಹುದು ಎಂದು ಸಲಹೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಅಧಿಸೂಚನೆ ಘಟಕಗಳಲ್ಲಿ ಬೆಳೆ ವಿಮೆ ನೋಂದಾಯಿಸಲು ಅವಕಾಶವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೊಂದಾಯಿಸಿ ನೈಸರ್ಗಿಕ ವೈಪರೀತ್ಯಗಳ ವಿರುದ್ಧ ತಮ್ಮ ಕೃಷಿಯನ್ನು ಸುರಕ್ಷಿತ ಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹ ಕಾಧಿಕಾರಿ ದಿವ್ಯ ಪ್ರಭು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಡಿಡಿಪಿಐ ಜವರೇಗೌಡ, ಲೀಡ್ ಬ್ಯಾಂಕ್ ಮ್ಯನೇಜರ್ ದೀಪಕ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಸೌಮ್ಯಶ್ರೀ, ಮಾಲತಿ , ಪ್ರಿಯದರ್ಶಿನಿ, ಮಮತಾ ಸೇರಿದಂತೆ ಇತರರಿದ್ದರು.