Friday, June 21, 2024

ಪ್ರಾಯೋಗಿಕ ಆವೃತ್ತಿ

ಡಾ.ಬಿ.ಆರ್. ಅಂಬೇಡ್ಕರ್ ಸರ್ವ ಜನಾಂಗದ ನಾಯಕ : ಲಂಕೇಶ್

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೇ ಸರ್ವ ಧರ್ಮದ ನಾಯಕರಾಗಿ ಶೂದ್ರ, ದಲಿತ, ಕೆಳಹಂತದ ಎಲ್ಲಾ ವರ್ಗಗಳ ಪರವಾಗಿ ಹೋರಾಟ ನಡೆಸಿದರು ಎಂದು ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ಹೇಳಿದರು.

ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಸಂಘದ ವತಿಯಿಂದ ನಡೆ  ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ 133ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

1930ರ ದಶಕದಲ್ಲೇ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು ಅಂಬೇಡ್ಕರ್ ಅವರು, ಬ್ರಿಟೀಷ್ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ ಮಾಡಿ, ಕೆಲಸ ಅವಧಿಯನ್ನು 8 ಗಂಟೆಗೆ ನಿಗದಿಗೊಳಿಸಿದರು. ಅದಲ್ಲದೇ ಪಿಎಫ್, ಇಎಸ್’ಐ, ವಾರದ ರಜೆ, ಹೆರಿಗೆ ರಜೆ ಮತ್ತು ಭತ್ಯೆಗಳು ದೊರೆಯುವಂತೆ ಹೋರಾಟ ನಡೆಸಿ, ಕಾಯ್ದೆಗಳನ್ನು ಜಾರಿಗೆ ತಂದರು. ಅಂತಹ ಮಹಾನ್ ನಾಯಕನಂತಹವರು ಮನೆ ಮನೆಗಳಲ್ಲಿ ಜನಿಸಬೇಕೆಂದರು.

ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಅಂಬೇಡ್ಕರ್ ಅವರನ್ನು ಇಂದಿನ ಜನ ಸಮುದಾಯ ಒಂದು ಜಾತಿಗೆ ಸೀಮಿತಗೊಳಿಸಿ ಅವರನ್ನು ದಲಿತ ನಾಯಕರ ಎಂದು ಕರೆಯುತ್ತಿರುವುದು ವಿಷಾದನೀಯ. ಆದರೆ ಅವರ ಹೋರಾಟ ಭಾರತದ ಎಲ್ಲ ಶೋಷಿತ ದೀನ, ಶೂದ್ರ ವರ್ಗದ ಜನರ ಪರವಾಗಿತ್ತು, ಅಂದು ಕೇವಲ ಪದವಿ ಪಡೆದವರಿಗೆ ಆದಾಯ ಕಟ್ಟುವವರಿಗೆ, ಆದಾಯ ಕಟ್ಟುವವರಿಗೆ, ಶ್ಯಾನುಬೋಗ ಮತ್ತು ಪಟೇಲರಿಗೆ ಮಾತ್ರ ಇದ್ದ ಮತದಾನ ಮಾಡುವ ಹಕ್ಕನ್ನು, ಎಲ್ಲ ವಯಸ್ಕ ಭಾರತೀಯರಿಗೆ ಕಡ್ಡಾಯವಾಗಿ ಸಿಗುವಂತೆ ಮಾಡಿದ್ದು, ಅಂಬೇಡ್ಕರ್ ಅವರು ಎಂದು ತಿಳಿಸಿದರು.

ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ವಿಶ್ವಜ್ಞಾನ ದಿನವೆಂದು ಘೋಷಿಸಿ, ಆಚರಣೆ ಮಾಡುತ್ತಿರುವುದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಚಾರವೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪೂರ್ಣಿಮಾ ಎಂ, ಅನುಷಾ ಎಚ್.ಎಂ, ಭುವನೇಶ್ವರಿ, ರಕ್ಷಿತಾ, ಮನೀತ್ ಹಾಗೂ ದಾಕ್ಷಾಯಿಣಿ ಅವರನ್ನು ನಿವೃತ್ತ ಅಧೀಕ್ಷಕ ಅಭಿಯಂತರ ಚಂದ್ರಹಾಸ, ಅಂಬೇಡ್ಕರ್ ವಿಚಾರವಾದಿ ಅಶೋಕ್ ಮೌರ್ಯ, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಗ್ರಾ.ಪಂ.ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ವೃಂದಾ, ಸದಸ್ಯರಾದ ಕುಮಾರಗೌಡ, ಮಹದೇವಸ್ವಾಮಿ, ಕೆಂಪಮ್ಮ, ಪ್ರತಿಭಾ ಅವರು ಅಭಿನಂದಿಸಿದರು. ಗಾನಸುಮ ಹಾಗೂ ಮೀನಾಕ್ಷಿ  ಮತ್ತು ತಂಡದವರು ಅಂಬೇಡ್ಕರ್ ಗೀತೆಗಳನ್ನು ಹಾಡಿ ರಂಜಿಸಿದರು.

ವೇದಿಕೆಯಲ್ಲಿ ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ಸಂಘ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ದೇವರಾಜು,  ಕಾರ್ಯದರ್ಶಿ ಶಿವಲಿಂಗು, ಗೌರವಾಧ್ಯಕ್ಷ ಮಲ್ಲೇಶ್ ಎಂ, ಖಜಾಂಚಿ ಶಿವರಾಮು, ಪದಾಧಿಕಾರಿಗಳಾದ ಮಧು ಎಂ.ಎಸ್, ಸುನೀಲ್ ಹೆಚ್.ಎಸ್. ಸನತ್ ಕುಮಾರ್, ಕೀರ್ತಿ ಕುಮಾರ್, ರಾಜೇಶ್, ವರಲಕ್ಷ್ಮಿ ಹಾಗೂ ಡಿ.ಉಮಾಪತಿ, ವಜ್ರಮುನಿ ಮತ್ತಿತರರು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!