ಮಂಡ್ಯ ರೈತರ ಗೃಹ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ಆದೇಶ ನೀಡಬೇಕೆಂದು ಇಂಧನ ಸಚಿವ ಸುನಿಲ್ ಕುಮಾರ್ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಇಬ್ಬರೂ ಸಚಿವರಿಗೆ ಪತ್ರ ಬರೆದಿರುವ ಅವರು, 2014-15ನೇ ಸಾಲಿನಲ್ಲಿ ಮಾಜಿ ಶಾಸಕರು, ರೈತ ನಾಯಕರಾಗಿದ್ದ ದಿವಂಗತ ಶ್ರೀ ಕೆ.ಎಸ್. ಪುಟ್ಟಣ್ಣಯ್ಯರವರ ಜೊತೆ ನಡೆದ ಮಾತುಕತೆಯ ಸಂದರ್ಭದಲ್ಲಿ ರೈತರ ಹಳೆ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಲು ಅಂದಿನ ಸರ್ಕಾರ ತೀರ್ಮಾನಿಸಿ, ರೈತರು ತಮ್ಮ ಗೃಹ ಬಳಕೆಗೆ ಹೊಸ ವಿದ್ಯುತ್ ಮೀಟರ್ ಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿಸಿಕೊಂಡು ಹೋಗುವಂತೆ ಒಪ್ಪಂದಕ್ಕೆ ಬರಲಾಗಿತ್ತು. ಸರ್ಕಾರದ ಈ ಒಪ್ಪಂದದಂತೆ, ರೈತರು ಅಂದಿನಿಂದ ಗೃಹ ಬಳಕೆಯ ವಿದ್ಯುತ್ ಬಿಲ್ಲನ್ನು ಪಾವತಿಸಿಕೊಂಡು ಬರುತ್ತಿದ್ದಾರೆ.
ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮವು ರೈತರ ಗೃಹ ಬಳಕೆಯ ಹಳೇ ಬಾಕಿ ಮೊತ್ತವನ್ನು ವಸೂಲಿ ಮಾಡಲು ಬಲತ್ಕಾರದ ಕ್ರಮಗಳನ್ನು ಅನುಸರಿಸುತ್ತಾ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದೆ. ಅದರಲ್ಲೂ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ ಇನ್ನು ಮುಂತಾದ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ.
ಆದುದರಿಂದ, ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಈ ಹಿಂದಿನ ಸರ್ಕಾರದ ಒಪ್ಪಂದದಂತೆ ರೈತರ ಹಳೇ ವಿದ್ಯುತ್ ಬಾಕಿಯನ್ನು ವಸೂಲಿ ಮಾಡದಂತೆ ಸಂಬಂಧಪಟ್ಟವರಿಗೆ ಆದೇಶ ನೀಡಬೇಕೆಂದು ಇಬ್ಬರು ಸಚಿವರನ್ನು ಒತ್ತಾಯಿಸಿದ್ದಾರೆ.