ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಮತಾಂತರ ಕಾಯ್ದೆಯನ್ನು ತರುವುದರ ಮೂಲಕ ಕೋಮು ಗಲಭೆಗಳು ನಡೆಯುವುದಕ್ಕೆ ಉತ್ತೇಜನ ನೀಡುತ್ತಿದೆ ಎಂದು ಜನವಾದಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಪಟ್ಟಲದಮ್ಮ ದೇವಸ್ಥಾನ ಆವರಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 6ನೇ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಲಿತರು,ಹಿಂದುಳಿದ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗದಂತಹ ಹೊಸ ಶಿಕ್ಷಣ ನೀತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಪಠ್ಯ ಪರಿಷ್ಕರಣೆ ಸಮಿತಿಗೆ ನಾಲಾಯಕ್ ವ್ಯಕ್ತಿಯನ್ನು ನೇಮಕ ಮಾಡಿ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಲವಾರು ಜನವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಬದುಕುತ್ತಿರುವ ಜನರ ಮೇಲೆ ದಿನಬಳಕೆ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡುವುದರ ಮೂಲಕ ಬಡವರ ಹೊಟ್ಟೆಮೇಲೆ ಹೊಡೆಯುತ್ತಿದೆ ಎಂದು ಕಿಡಿಕಾರಿದರು.
ಬಡವರ ಸಾಲ ಮನ್ನಾ ಮಾಡಿ ಎಂದು ಹೋರಾಟ ಮಾಡಿದರೆ,ಬಿಜೆಪಿ ಸರ್ಕಾರ ಉದ್ಯಮಿಗಳ ಸಾಲ ಮನ್ನಾ ಮಾಡಿದೆ.ಗ್ರಾಮೀಣ ಪ್ರದೇಶದಲ್ಲಿ ತಿನ್ನಲು ಅನ್ನವಿಲ್ಲದೆ ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ.
ನರೇಂದ್ರ ಮೋದಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ದೊಡ್ಡ ನಾಟಕದ ಕಂಪನಿಯೇ ಇದೆ.ಹಲವಾರು ಸೌಲಭ್ಯಗಳನ್ನು ನೀಡುತ್ತೇವೆಂದು ಭರವಸೆಯನ್ನು ನೀಡಲಾಗುತ್ತಿದೆಯೇ ಹೊರತು ಯಾವುದನ್ನು ಜಾರಿಗೆ ತಂದಿಲ್ಲ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಮಹಿಳೆಯರು ಸಂಘಟಿತರಾಗಬೇಕು, ಹೋರಾಟದಿಂದ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ನಮ್ಮ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದ್ದು, ಎಲ್ಲರೂ ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದರು.
ಜನವಾದಿ ಮಹಿಳಾ ಜಿಲ್ಲಾಧ್ಯಕ್ಷೆ ಶೋಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷೆ ದೇವಿ, ರಾಜ್ಯ ಸಹ ಕಾರ್ಯದರ್ಶಿ ಸಿ. ಮೀರಾ, ಜಿಲ್ಲಾ ಉಪಾಧ್ಯಕ್ಷೆ ಲತಾ,ಮಂಡ್ಯ ತಾಲೂಕು ಅಧ್ಯಕ್ಷೆ ಸುನೀತಾ,ನಾಗಮಂಗಲ ಅಧ್ಯಕ್ಷೆ ಪ್ರೇಮಾ, ಶ್ರೀರಂಗಪಟ್ಟಣ ಅಧ್ಯಕ್ಷೆ ಜಯಮ್ಮ,ಮಳವಳ್ಳಿ ತಾಲ್ಲೂಕು ಅಧ್ಯಕ್ಷೆ ಮಂಜುಳ,ವರದೇವಿ, ಚಂದ್ರಮ್ಮ ಸೇರಿದಂತೆ ಇತರರಿದ್ದರು.