ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಏಕಾಗ್ರತೆ ಬರುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಹೆಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಂದೀಶ್ ತಿಳಿಸಿದರು.
ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ತಾಲೂಕು ಪಂಚಾಯಿತಿ,ಅನನ್ಯ ಸಂಸ್ಥೆ,ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಏರ್ಪಡಿಸಿದ್ದ ಯೋಗ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಾತ್ರ ಯೋಗ ಶಿಬಿರಗಳನ್ನು ಏರ್ಪಡಿಸಬಾರದು. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿ ದಿನ ಒಂದು ಗಂಟೆಗಳ ಕಾಲ ಯೋಗಾಭ್ಯಾಸವನ್ನು ಇಟ್ಟುಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು.
ಮಕ್ಕಳಿಗೆ ಏಕಾಗ್ರತೆ ಬರುವುದು,ಎಷ್ಟೇ ಒತ್ತಡವಿದ್ದರೂ ಒತ್ತಡದಿಂದ ದೂರ ಇರಬಹುದು ಹಾಗೂ ತಾವು ಅಂದುಕೊಂಡ ಹಾಗೆ ಸಾಧನೆ ಮಾಡಲು ಯೋಗ ಅವಶ್ಯಕವಾಗಿದೆ.ಆದ್ದರಿಂದ ಯೋಗಾಭ್ಯಾಸವನ್ನು ಪ್ರತಿನಿತ್ಯ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯೋಗ ಗುರುಗಳಾದ ವಿಜಿಯಮ್ಮ, ಪ್ರಸನ್ನ, ಮಂಜು ಅವರುಗಳು ಮಕ್ಕಳಿಗೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಯೋಗಾಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾದೇವಮ್ಮ,ಜ್ಯೋತಿ, ಸೌಭಾಗ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೀಲಾವತಿ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ತಿಮ್ಮರಾಜು, ಅನನ್ಯ,ಅನುಪಮ,ಜಯ ಶಂಕರ,ಶಾಲಾ ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.