ಮಹಾತ್ಮ ಗಾಂಧೀಜಿಯವರ ವ್ಯಕ್ತಿ ವಿಚಾರ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳನ್ನು ನಿರ್ಮಾಣ ಮಾಡುವ ಶಿಬಿರವನ್ನು ಮಂಡ್ಯ ತಾಲ್ಲೂಕಿನ ‘ಗಾಂಧಿ ಗ್ರಾಮ’ದಲ್ಲಿ ಏರ್ಪಡಿಸಲಾಗಿದೆ. ಶಿಬಿರವು ಇದೇ 16 ರಿಂದ ಆರಂಭವಾಗಲಿದ್ದು ಒಟ್ಟು 15 ದಿನಗಳ ಕಾಲ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಮಂಡ್ಯ ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದ್ದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸುವರು. ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ) ಅಧ್ಯಕ್ಷರೂ ಆದ ಶಾಸಕ ಮಧು ಜಿ.ಮಾದೇಗೌಡ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನ ಬೆಂಗಳೂರಿನ ನಿರ್ದೇಶಕರಾದ ಪ್ರೊ.ಜಿ.ಬಿ.ಶಿವರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ, ಶಿಲ್ಪಿ ಎಂ.ಸಿ.ರಮೇಶ್ ಆಶಯ ನುಡಿಯನ್ನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಚ್.ಮಲ್ಲಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಕೆ.ವಿನಯ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಪಾಲ್ಗೊಳ್ಳುವರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೆ.ನಾರಾಯಣರಾವ್ ನಿರ್ದೇಶನದಲ್ಲಿ ಶಿಬಿರ ನಡೆಯಲಿದೆ. ಶಿವಮೊಗ್ಗ, ಧಾರವಾಡ, ಕೊಪ್ಪಳ, ಮೈಸೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬೀದರ್, ರಾಯಚೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 15 ಮಂದಿ ಹಿರಿಯ ಶಿಲ್ಪಿಗಳು ಮತ್ತು 15 ಮಂದಿ ಸಹಾಯಕ ಶಿಲ್ಪಿಗಳು ಭಾಗವಹಿಸಲಿದ್ದಾರೆ. ಶಿಬಿರದ ಸಂಚಾಲಕರಾಗಿ ಅಕಾಡೆಮಿ ಸದಸ್ಯ ವೈ.ಕುಮಾರ್ ಅವರನ್ನು ನೇಮಿಸಲಾಗಿದೆ.
ಗಾಂಧೀಜಿ ಮತ್ತು ಮಗುವಿನ ಶಿಲ್ಪ, ಧ್ಯಾನಸ್ಥ ಗಾಂಧಿ, ಚರಕದೊಂದಿಗೆ ಗಾಂಧೀಜಿ, ಪುಸ್ತಕದೊಂದಿಗೆ ಗಾಂಧೀಜಿ, ದಂಡಿ ಸತ್ಯಾಗ್ರಹ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಶಿಲ್ಪಗಳು ಅರಳಲಿವೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.