ಇಂದು ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನಾಂಗೀಯವಾದ ಮತ್ತು ಧರ್ಮದ ಹೆಸರಿನಲ್ಲಿ ಘರ್ಷಣೆ ಶುರುವಾದರೆ ಬಹಳ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಆತಂಕ ವ್ಯಕ್ತಪಡಿಸಿದರು.
ಮಂಡ್ಯದ ಗಾಂಧಿ ಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಏರ್ಪಡಿಸಿದ್ದ ಸಮನ್ವಯ ವಿಚಾರ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇಂದು ಪ್ರಚಾರಕ್ಕಾಗಿ ಧರ್ಮಗಳ ವಿರುದ್ಧ ಮಾತನಾಡುತ್ತಿದ್ದಾರೆ. ಸರ್ಕಾರ ಇಂತಹವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇಂದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳಲ್ಲಿ ಕೂತರೆ ನಿಂತರೆ ಜಾತಿ ಹಣ ಅಧಿಕಾರದ ಬಗ್ಗೆ ಮಾತನಾಡುತ್ತಾ, ಪ್ರತಿಭೆಯನ್ನು ಮರೆಯುತ್ತಿದ್ದಾರೆ. ದಿನದ 24 ಗಂಟೆಯೂ ಜಾತಿ,ಧರ್ಮ ಹಣದ ಬಗ್ಗೆ, ಮಾತನಾಡುತ್ತಿದ್ದೇವೆ. ಜಾತಿರಹಿತ ವ್ಯವಸ್ಥೆ ನಿರ್ಮಾಣ ಆಗಬೇಕೆಂಬುದು ಸಂವಿಧಾನದ ಆಶಯವಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳುವಳಿ, ಹೋರಾಟ ನಿರಂತರವಾಗಿರಬೇಕು. ಆಗ ಸರ್ಕಾರ ಮತ್ತು ಆಡಳಿತ ಎಚ್ಚರವಾಗಿರಲು ಸಾಧ್ಯ. ಮೈಸೂರ ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಗತಿಪರ ಆಲೋಚನೆ, ಜನರ ಆಡಳಿತ ತರುವ ಮೂಲಕ ಅಗಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ್ದರು. ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ, ಬೇರೆ ಬೇರೆ ದೇಶಗಳ ಸಂವಿಧಾನವನ್ನು ಓದಿ ಇಲ್ಲಿಯ ಮಣ್ಣಿಗೆ ಯಾವ ರೀತಿ ವ್ಯವಸ್ಥೆ ಇರಬೇಕು, ನ್ಯಾಯಾಂಗ, ಕಾರ್ಯಾಂಗ ಶಾಸಕಾಂಗ ಯಾವ ರೀತಿ ಇರಬೇಕು, ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ಹೇಗಿರಬೇಕು .ಪ್ರಗತಿ ಸಾಧಿಸಲು ಹೇಗೆ ಸಾಧ್ಯ ಎಂದೆಲ್ಲ ಯೋಚಿಸಿ ಸಂವಿಧಾನ ಜಾರಿಗೆ ತಂದರು ಎಂದರು.
ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಗರಣ ನಡೆದಿರುವುದು ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ ಕೆಲವೊಂದು ದೃಶ್ಯ ಮಾಧ್ಯಮಗಳು ಅವರೇ ವಾದ, ವಿಚಾರಣೆ ಮಾಡಿ ಜಡ್ಜ್ ಮೆಂಟ್ ಕೊಡುತ್ತಿವೆ. ಹಾಗಾದರೆ ನ್ಯಾಯಾಂಗದ ಜವಾಬ್ದಾರಿ ಏಕಿರಬೇಕು ಎಂದು ಪ್ರಶ್ನಿಸಿದರು.
ಇಂದು ಸಂವಿಧಾನಕ್ಕೆ ಚ್ಯುತಿ ತರುವ ಘಟನೆಗಳು ನಡೆಯುತ್ತಿವೆ. ವಿಧಾನಸಭೆ ಸ್ಪೀಕರ್ ಅವರು ನನ್ನ ನಿಷ್ಠೆ ಸಂವಿಧಾನಕ್ಕೆ ಎಂದು ಹೇಳದೆ ತಮ್ಮ ಸಂಘಟನೆಗೆ ನಿಷ್ಟೆ ಎನ್ನುತ್ತಾರೆ.ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಅವರು ಜವಾಬ್ದಾರಿತವಾಗಿ ಮಾತನಾಡಬೇಕು. ದೇವರಾಜ್ ಅರಸು ಅವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೂ ಎಲ್ಲಾ ವರ್ಗದ ಜನರ ಕಲ್ಯಾಣವನ್ನು ಮಾಡಿದ್ದರು. ಅವರ ಆಡಳಿತ ಜನಪರವಾಗಿತ್ತು ಎಂದರು.
ದೇವರಾಜ ಅರಸು ವೇದಿಕೆ ಅಧ್ಯಕ್ಷ ಸಂದೇಶ್ ಮಾತನಾಡಿ, ಇಂದು ವಿಧಾನ ಪರಿಷತ್ತಿಗೆ ಹೋರಾಟಗಾರರು, ಬುದ್ಧಿಜೀವಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಬರಬೇಕು. ಆದರೆ ಇಂದು ವಿಧಾನ ಪರಿಷತ್ತಿಗೆ ಕುದುರೆ ವ್ಯಾಪಾರಿಗಳು, ಹಣವಂತರಿಗೆ, ಸೋತು ಸುಣ್ಣವಾಗಿರುವ ರಾಜಕಾರಣಿಗಳಿಗೆ ನೀಡುತ್ತಿರುವುದು ಸರಿಯಲ್ಲ. ಮತ್ತೆ ಇದು ಚಿಂತಕರ ಚಾವಡಿ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಡಾ. ಕೃಷ್ಣ, ಜಿ. ಟಿ. ವೀರಪ್ಪ,ಕರವೇ ಜಯರಾಮ್,ಶಂಭೂನಹಳ್ಳಿ ಸುರೇಶ್,ದಸಂಸ ನಾಯಕ ಕೃಷ್ಣ, ಪ್ರೊಫೆಸರ್ ಹುಲ್ಕೆರೆ ಮಹದೇವ್, ಸಾಹಿತಿ ಧರಣೇಂದ್ರಯ್ಯ, ಹಳುವಾಡಿ ನಾಗರಾಜ್
ಸೇರಿದಂತೆ ಮತ್ತಿತರರಿದ್ದರು