ವಯನಾಡ್ ಭೂಕುಸಿತದಿಂದ ಸಂತ್ರಸ್ತರಾದ ಜನರ ಪುನರ್ವಸತಿಗಾಗಿ ಕಾಂಗ್ರೆಸ್ ಕುಟುಂಬವು 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ವಯನಾಡ್‌ನ ಮಾಜಿ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ವಯನಾಡ್ ಜಿಲ್ಲಾಡಳಿತ ಮತ್ತು ಪಂಚಾಯತ್‌ನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಭೆಯಲ್ಲಿ ಸಾವಿನ ಸಂಖ್ಯೆ, ನಾಶವಾದ ಮನೆಗಳು ಮತ್ತು ಜನರನ್ನು ಹುಡುಕಲು ಮತ್ತು ರಕ್ಷಿಸಲು ಕೈಗೊಂಡ ಕಾರ್ಯತಂತ್ರಗಳ ಬಗ್ಗೆ ಅಧಿಕಾರಿಗಳು ರಾಹುಲ್ ಗಾಂಧಿಗೆ ವಿವರಿಸಿದರು.
ನಂತರ ಮಾತನಾಡಿದ ರಾಹುಲ್ ಗಾಂಧಿ, “ಭೂಕುಸಿತವು ಕೇರಳ ಹಿಂದೆಂದೂ ಕಂಡಿರದ ಭೀಕರ ದುರಂತ. ಆದ್ದರಿಂದ ಇದನ್ನು ವಿಭಿನ್ನ ರೀತಿಯ ದುರಂತವೆಂದು ಪರಿಗಣಿಸಬೇಕಾಗಿದೆ. ಈ ವಿಚಾರವನ್ನು ಕೇಂದ್ರ ಹಾಗೂ ಕೇರಳ ಸರ್ಕಾರದೊಂದಿಗೆ ಪ್ರಸ್ತಾಪಿಸಲಾಗುವುದು” ಎಂದರು.
“ಬದುಕುಳಿದವರಲ್ಲಿ ಹೆಚ್ಚಿನವರು ಭೂಕುಸಿತ ಪೀಡಿತ ಪ್ರದೇಶಗಳಿಗೆ ಮರಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಅವರಿಗೆ ಸುರಕ್ಷಿತ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಬೇಕು” ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭೂಕುಸಿತ ದುರಂತ ಸಂಭವಿಸಿದ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿದ್ದರು. ಇಂದು ಕೂಡ ಅವರು ದುರಂತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ವೀಕ್ಷಿಸಿದರು ಮತ್ತು ಪರಿಹಾರ ಶಿಬಿರಗಳಲ್ಲಿ ಬದುಕುಳಿದವರೊಂದಿಗೆ ಸಂವಾದ ನಡೆಸಿದರು.