Wednesday, June 12, 2024

ಪ್ರಾಯೋಗಿಕ ಆವೃತ್ತಿ

ಕ್ರಿಕೆಟ್ | ಲಗಾನ್ ಮತ್ತು ಅಸ್ಪೃಶ್ಯತೆ

-ಹರೀಶ್ ಗಂಗಾಧರ್

ಭಾರತ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ಲಗಾನ್ ಚಿತ್ರದಲ್ಲಿನ ತಂಡವನ್ನು ಮಾದರಿಯಾಗಿಟ್ಟುಕೊಂಡು ತಂಡ ಕಟ್ಟಬೇಕು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಲಗಾನ್ ಚಿತ್ರದ ಕಚ್ರ ಪಾತ್ರ ಎಷ್ಟು ಸಮಸ್ಯಾತ್ಮಕವಾಗಿದೆ ಎಂಬುದರ ಕುರಿತು ಈ ಲೇಖನ.

ಲಗಾನ್ ಮತ್ತು ಅಸ್ಪೃಶ್ಯತೆ

2001ರಲ್ಲಿ ತರೆಕಂಡ ಅಶುತೋಷ್ ಗೌವರಿಕರ್ ನಿರ್ದೇಶನದ ಬಾಲಿವುಡ್ ಚಿತ್ರ ಲಗಾನ್. ಆ ವರ್ಷ ಅಮೆರಿಕನ್ ಅಕಾಡೆಮಿಯ ಶ್ರೇಷ್ಠ ವಿದೇಶಿ ಭಾಷಾ ಪುರಸ್ಕಾರಕ್ಕೆ (ಆಸ್ಕರ್) ಈ ಚಿತ್ರ ನಾಮಿನೇಟ್ ಕೂಡ ಆಗಿ ಕೊನೆಯ ಟಾಪ್ 5 ನಲ್ಲಿತ್ತು. ಆದರೆ ಪ್ರಶಸ್ತಿ ಬೋಸ್ನಿಯ ಯುದ್ಧ ಚಿತ್ರ “ನೊ ಮ್ಯಾನ್ಸ್ ಲ್ಯಾಂಡ್” ಪಾಲಾಗಿತ್ತು. ವಸಾಹತುಗಾರ ಮತ್ತು ವಸಾಹತುಶಾಹಿಗೆ ಒಳಪಟ್ಟವರ ನಡುವೆ ನಡೆಯುವ ಒಂದು ಕ್ರಿಕೆಟ್ ಪಂದ್ಯದ ಮೂಲಕ “ಲಗಾನ್” ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅವನತಿಯ ಪತನದ ದೃಷ್ಟಾಂತ ಹೇಳಿತ್ತು. ಬೆಂಗಳೂರಿನ ಅಭಿಮಾನ ಚಿತ್ರಮಂದಿರದಲ್ಲಿ ನಾನು ಈ ಚಿತ್ರ ನೋಡುವಾಗ ಜನ ಹುಚ್ಚೆದ್ದು ಕುಣಿದದ್ದು ನೆನಪಿದೆ.

ಭಾರತೀಯರಿಗಿರುವ ಬಹುದೊಡ್ಡ ಚಟಗಳಾದ- ಕ್ರಿಕೆಟ್ ಮತ್ತು ಸಿನಿಮಾದ ಸರಿಯಾದ ಮಿಶ್ರಣ ಈ ಚಿತ್ರದಲ್ಲಿತ್ತು. ಧರ್ಮ, ಜಾತಿ, ಭಾಷಾ ಕಲಹಗಳಿಂದ ಹರಿದು ಹಂಚಿ ಹೋಗಿರುವ ಭಾರತೀಯರು ಎಲ್ಲಾ ಭೇದಗಳನ್ನು ಮರೆತು ಮುಕ್ತ ಮನಸ್ಸಿನಿಂದ ಒಟ್ಟಿಗೆ ಸೇರುವುದು ಕ್ರಿಕೆಟ್ ಕ್ರೀಡಾಂಗಣ ಮತ್ತು ಸಿನಿಮಾ ಥೀಯೇಟರ್ಗಳಲ್ಲಿ ಮಾತ್ರ. ದೇಶ ವಿಭಜನೆಯಾದ ನಂತರ ಧರ್ಮಾಧಾರಿತವಾಗಿ ಹೊಡೆದುಹೋಗಿ ಘಾಸಿಗೊಂಡ ಮನಸ್ಸುಗಳಿಗೆ ಮುಲಾಮು ಹಚ್ಚಿದ್ದು ಬಹುಶಃ ಕ್ರಿಕೆಟ್ ಮತ್ತು ಸಿನಿಮಾ ಮಾತ್ರವಿರಬೇಕು. ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮವೇ ಆಗಿಹೋದರೆ, ಸಿನಿಮಾ ತನ್ನ ವಾಸ್ತವಲ್ಲದ ಐಡಿಯಲ್, ಓವರ್ ದ ಟಾಪ್ ನಾಯಕ/ನಾಯಕಿಯರ ಮೂಲಕ, ವರ್ಣರಂಜಿತ ಪ್ರೇಮ ಕಥನಗಳ ಮೂಲಕ ಭಾರತೀಯರ ಮೇಲೆ ಅಪಾರ ಮೋಡಿಯನ್ನೇ ಮಾಡಿದೆ.

ಇಡಿಯ ಲಗಾನ್ ಚಿತ್ರ ಕ್ರಿಕೆಟ್ ಪಂದ್ಯವೊಂದರ ಸುತ್ತಾ ಸುತ್ತುತ್ತದೆ. 19ನೆ ಶತಮಾನದ ಅಂತ್ಯಕ್ಕೆ ಸಾಮ್ರಾಜ್ಯಶಾಹಿಗಳಾದ ಬ್ರಿಟಿಷರು ಮತ್ತು ಕ್ರಿಕೆಟಿನ ಗಂಧಗಾಳಿಯಿಲ್ಲದ ಹಳ್ಳಿ ಹೈಕಳುಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯವೇ ಚಿತ್ರದ ಕಥಾವಸ್ತು. ಬ್ರಿಟಿಷ್ ಕಂಟೋನ್ಮೆಂಟ್ ಪಕ್ಕದ ಒಂದು ಕಾಲ್ಪನಿಕ ಪುಟ್ಟ ಹಳ್ಳಿ ಚಂಪಾನೇರ್. ಚಿತ್ರದ ಕೇಂದ್ರ ಬಿಂದು ಕೂಡ ಈ ಹಳ್ಳಿಯೇ. ಚಂಪಾನೇರ್ ಬ್ರಿಟಿಷ್ ಆಕ್ರಮಿತ ಮತ್ತು ಅವರ ಆಳ್ವಿಕೆಗೊಳಗಾಪಟ್ಟ ಭಾರತದ ಯಾವುದೇ ಹಳ್ಳಿಯಾಗಿರಲುಬಹುದು. 1893 ಆ ವರ್ಷ ಮಳೆ ಕೈಕೊಟ್ಟಿದೆ, ಎಲ್ಲವೂ ಬರಡು. ಊರಿನ ಜನ ಬೆಳೆ ಬೆಳೆದು ಪ್ರಾಂತ್ಯದ ರಾಜನಿಗೆ ಮತ್ತು ಆತನಿಗೆ ಶ್ರೀರಕ್ಷೆ ನೀಡಿರುವ ಬ್ರಿಟಿಷರಿಗೆ ತೆರಿಗೆ ಕಟ್ಟಬೇಕು. ಲಗಾನ್ ಎಂದರೆ ತೆರಿಗೆ ಅಂತಲೇ ಅರ್ಥ.

ಬರಗಾಲದಿಂದ ಬೇಸತ್ತ ಜನ ರಾಜನ ಮೊರೆಹೋಗುತ್ತಾರೆ. ಕಟ್ಟಬೇಕಾದ ತೆರಿಗೆಯನ್ನ ಮಾಫಿಮಾಡಬೇಕೆಂದು ಬ್ರಿಟಿಷರಲ್ಲಿ ಮನವಿ ಮಾಡಿಕೊಳ್ಳುವಂತೆ ರಾಜನನ್ನ ವಿನಂತಿಸಿಕೊಳ್ಳುತ್ತಾರೆ. ನಿರ್ದೇಶನಾಧಿಕಾರಿ, ನಿಷ್ಕರುಣಿಯು, ದಾರ್ಷ್ಟ್ಯನು ಆದ ಕ್ಯಾಪ್ಟನ್ ರಸೆಲ್, ಹಳ್ಳಿಗರ ಈ ಶೋಚನೀಯ ಸ್ಥಿತಿಗೆ ಮರುಗದೆ ಸವಾಲೊಂದೊನ್ನ ಅವರ ಮುಂದಿಡುತ್ತಾನೆ. ಹಳ್ಳಿಯ ಹೈಕಳು ಬ್ರಿಟಿಷ ತಂಡದ ವಿರುದ್ದ ಕ್ರಿಕೆಟ್ ಪಂದ್ಯವೊಂದೊನ್ನು ಆಡಬೇಕು. ಅದರಲ್ಲಿ ಗೆದ್ದರೆ ಮೂರು ವರ್ಷಗಳ ಕಾಲ ತೆರಿಗೆ ಮಾಫಿಯಾಗುತ್ತೆ ಸೋತರೆ ಮೂರು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕೆಂದು ಷರತ್ತಿಡುತ್ತಾನೆ. ದುಡುಕಿನ ಪ್ರವೃತ್ತಿಯವನಾದ ಭುವನ್ ಈ ಸವಾಲನ್ನ ಸ್ವೀಕರಿಸಿಯೇ ಬಿಡುತ್ತಾನೆ!!!

ಮೊದಲಿಗೆ ಊರಿನ ಜನರೆಲ್ಲಾ ಅಸಮಾಧಾನಗೊಂಡರು, ಮುನಿಸಿಕೊಂಡರು ನಂತರದಲ್ಲಿ ಕ್ರಿಕೆಟ್ ಗಿಲ್ಲಿ ದಾಂಡಿನಂತಹ ಸುಲಭವಾದ ಕ್ರೀಡೆ ಮಾತ್ರವೆಂದು ಭುವನ್ ನೀಡುವ ಸಮಜಾಯಿಷಿಗೆ ಒಪ್ಪಿ ಹಳ್ಳಿಯ ಸಾಧಾರಣ ತಂಡ ಕಟ್ಟಲು ಅವನಿಗೆ ಸಹಕರಿಸುತ್ತಾರೆ. ಹೀಗೆ ಹಳ್ಳಿಯ ದೇವಸ್ಥಾನದ ಡೋಲು ಬಾರಿಸುವ ಕಿವುಡ ಭಾಘ, ಎಲ್ಲರ ಭವಿಷ್ಯ ಹೇಳುವ ಗೂರನ್, ಕುಂಬಾರ ಇಸ್ಮಾಯಿಲ್, ಸಿಖ್ ಸಿಪಾಯಿ ದೇವನ್ ಹಾಗು ಊರಿನ ಅಸ್ಪೃಶ್ಯ ಕಚ್ರ (ಕೊಳಕು) ಮತ್ತಿತರರು ತಂಡದೊಳಗೆ ಸೇರಿಕೊಳ್ಳುತ್ತಾರೆ. ಇದಕ್ಕಾಗಿ ಲಗಾನ್ ಚಿತ್ರದ ಭುವನ್ನನ್ನು ಜಾತಿ, ಧರ್ಮ, ಭಾಷೆಗಳ ಮೇಲೆ ಹರಿದು ಹಂಚಿ ಹೋಗಿದ್ದ ಭಾರತದಲ್ಲಿ ಎಲ್ಲರಲ್ಲೂ ಸೌಹಾರ್ದತೆ ಮೂಡಿಸಿ, ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಅಹಿಂಸ ಮಾರ್ಗದಲ್ಲಿ ಹೋರಾಟ ನಡೆಸಿದ ಗಾಂಧಿಗೆ ಹೋಲಿಕೆ ಮಾಡಿದರೆ ತಪ್ಪಾಗಲಾರದು.

ಬಹುಶಃ ಭುವನ್ ಮತ್ತು ಗಾಂಧಿಗಿದ್ದ ಕನಸು ಒಂದೆಯಾಗಿತ್ತು- ಬ್ರಿಟಿಷ್ ಮುಕ್ತ ವಸಹತೋತ್ತರ ಸಮೃದ್ದ ಸೌಹಾರ್ದ ಭಾರತ. ದೇಶ ವಿಭಜನೆ, ಹಿಂದೂ ಮುಸ್ಲಿಂ ದಂಗೆಗಳು, 1984ರ ಸಿಖ್ ಹತ್ಯಾಕಾಂಡ, ಬಾಬ್ರಿ ಮಸೀದಿ ವಿವಾದ, ಗಾಂಧಿಯ ಕಂಡ ಕನಸುಗಳನ್ನು ಭಗ್ನಗೊಳಿಸಿದರು 2001ರ ಲಗಾನ್ ಚಿತ್ರ ಆ ಸತ್ತ ಕನಸುಗಳಿಗೆ ಮರು ಜೀವ ಕೊಡಲು ಪ್ರಯತ್ನಿಸುತ್ತದೆ. ಚಿತ್ರದ ಚಂಪಾನೇರ್ ಭಾರತ ಮೈಕ್ರೋಕಾಸ್ಮ್ ಅಂತಲೇ ನಾವು ನೋಡಬೇಕು. ಚಿತ್ರದ ಚಂಪಾನೇರ್ನ ಬೆಟ್ಟದ ಮೇಲೆ ರಾಧಾ ಕೃಷ್ಣ ದೇವಸ್ತಾನವಿದೆ ಅಲ್ಲಿ ಜನ ಪ್ರಾರ್ಥನೆ ಸಲ್ಲಿಸುತ್ತಾರೆ, ಆದರೆ ಚಿತ್ರದ ಯಾವ ಸೀನ್ನಲ್ಲೂ ಮಸೀದಿಯಿಲ್ಲದಿದ್ದರು ಆ ಹಳ್ಳಿಯಲ್ಲಿ ಸೌಹಾರ್ದತೆಗೇನು ಕಮ್ಮಿಯಿಲ್ಲ. ಹಳ್ಳಿ ಭಾರತದ ಡೆಮೋಗ್ರಫಿಯನ್ನು ಸೂಚಿಸುತ್ತದೆ. ಹಿಂದೂ ಧರ್ಮದೊಳಗಿನ ಆಂತರಿಕ ಕಿತ್ತಾಟಗಳ ಸೂಚಕವಾಗಿ ಗೋಲಿ ಮತ್ತು ಭೂರನ ಜಗಳವನ್ನು ತೋರಿಸಲಾಗಿದೆ. ಇಸ್ಮಾಯಿಲ್ ಭುವನ್ ಕಟ್ಟಲು ಹೊರಟಿರುವ ಕ್ರಿಕೆಟ್ ತಂಡಕ್ಕೆ ಮೊದಲು ಸೇರಿಕೊಳ್ಳುತ್ತಾನೆ. ಪಂದ್ಯದ ವೇಳೆ ಭುವನ್ ಮತ್ತು ಇಸ್ಮಾಯಿಲ್ ಜೊತೆಯಾಟ ಬಹುಮುಖ್ಯವಾಗುತ್ತದೆ. ಪಂದ್ಯದ ವೇಳೆಯಲ್ಲಿ ಗಾಯಳುವಾದರು ಆತ ಕೆಚ್ಚೆದೆಯಿಂದ ಹೋರಾಟ ಮಾಡಿ ಬ್ರಿಟಿಷರ ವಿರುದ್ದ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಾನೆ. ಹಿಂದೂ ಬಹುಸಂಖ್ಯಾತ ಭಾರತದಲ್ಲಿ/ಚಂಪಾನೇರ್ನಲ್ಲಿ ಇಸ್ಮಾಯಿಲ್ನಂತಹ ಅಲ್ಪಸಂಖ್ಯಾತ ಮುಸ್ಲಿಮ್ಗಿರುವ ದೇಶಪ್ರೇಮ, ಬದ್ದತೆಯನ್ನ ಯಾರು ಪ್ರಶ್ನಿಸಲು ಸಾಧ್ಯವಿಲ್ಲವೆಂದು ಸಾರುತ್ತದೆ.

ಆದರೆ ಈ ಚಿತ್ರದಲ್ಲಿ ತುಂಬ ಸಮಸ್ಯಾತ್ಮಕವಾಗಿ ಕಂಡದ್ದು ಕಚ್ರನೆಂಬ ಅಸ್ಪೃಶ್ಯನ ಪಾತ್ರ. ಭಾರತದಲ್ಲಿ ಮುಸ್ಲಿಮರಿಗಿಂತ ಹೆಚ್ಚಾಗಿ ತುಳಿತಕ್ಕೆ ಒಳಗಾದವರು ಅಸ್ಪೃಶ್ಯರು. ಮೇಲ್ಜಾತಿಯವರ ಕೋಪ, ಕ್ರೌರ್ಯ, ದಬ್ಬಾಳಿಕೆ, ಅವಮಾನಗಳಿಗೆ ಇಂದಿಗೂ ಅವರು ಬಲಿಯಾಗುತ್ತಿದ್ದಾರೆ. ಒಬ್ಬ ಮೇಲ್ಜಾತಿಯ ಹಿಂದೂ ಗಟ್ಟಿ ಮನಸ್ಸು ಮಾಡಿ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಸಿಖ್ನನ್ನು ಒಪ್ಪಿಕೊಂಡಾನು ಆದರೆ ಕೆಳಜಾತಿಯ ಅಸ್ಪೃಶ್ಯನನ್ನು ಒಪ್ಪಿಕೊಳ್ಳಲಾರ. ಜೊತೆಗೆ ಕೂತು ಕಸಿವಿಸಿಯಿಲ್ಲದೆ ತಿನ್ನಲಾರ, ಅಂತರಜಾತಿ ವಿವಾಹವನ್ನು ಒಪ್ಪಲಾರ, ಮುಕ್ತ ಮನಸ್ಸಿನಿಂದ ತನ್ನ ದೇವಸ್ಥಾನ ಬಿಟ್ಟುಕೊಳ್ಳಲಾರ. ಆತನ ಸ್ಪರ್ಶ ಮಾತ್ರವಲ್ಲದೆ ಆತನ ಇರುವಿಕೆಯೇ ಮೇಲ್ಜಾತಿಯವರಲ್ಲಿ ಮೈಲಿಗೆ ಹುಟ್ಟಿಸಬಹುದು.

ಸ್ವಾತಂತ್ರ್ಯನಂತರದ ಭಾರತದಲ್ಲಿ ಅಸ್ಪೃಶ್ಯತೆಯಂತಹ ನೀಚ ಪದ್ಧತಿ ಇನ್ನು ಉಳಿದುಕೊಂಡರೆ, ಬ್ರಿಟಿಷರ ವಿರುದ್ದದ ಹೋರಾಟ, ವಾದಗಳಿಗೆ ಯಾವ ಉನ್ನತ ನೈತಿಕ ನೆಲೆಯು ಇರಲಾರದೆಂದು ಗಾಂಧಿ ಅಭಿಪ್ರಾಯಪಟ್ಟಿದ್ದರು. ಬ್ರಿಟಿಷರು ನಮ್ಮ ಮೇಲೆ ಇಷ್ಟು ವರ್ಷಗಳ ಕಾಲ ದಬ್ಬಾಳಿಕೆ ನಡೆಸಲು ಮೇಲ್ಜಾತಿಯವರು ತಮ್ಮವರೇ ಆದ ಕೆಳಜಾತಿಯವರ ಮೇಲೆ ಯುಗಯುಗಗಳಿಂದ ನಡೆಸಿಕೊಂಡು ಬಂದ ದಬ್ಬಾಳಿಕೆಯ ಕರ್ಮಫಲವೆಂದ ಗಾಂಧಿ ನಂಬಿದ್ದರು ಕೂಡ!!! (ರಾಮಚಂದ್ರ ಗುಹ) ಗಾಂಧಿಯ ಸುದೀರ್ಘ ಹೋರಾಟ ಅಸ್ಪೃಶ್ಯತೆ ಕುರಿತಾದ ಕಾನೂನು ಕಾಯಿದೆಗಳಲ್ಲಿ ಗಮನಾರ್ಹ ಬದಲಾವಣೆಯನ್ನೇನೊ ತಂದಿತು ಆದರೆ ನಮ್ಮ ದೇಶದ ಜನಗಳ ಹೃದಯದಾಳದಲ್ಲಿ ಯಾವುದೇ ಬದಲಾವಣೆಯನ್ನ ತರಲಿಲ್ಲ. ಭಾರತೀಯ ಸಂವಿಧಾನ ನಿಷೇಧ ಹೇರಿದ್ದರು, ಗಾಂಧಿಯನ್ನ ಗೋಡ್ಸೆ ಕೊಂದು ಏಳೆಂಟು ದಶಕಗಳೇ ಕಳೆದಿದ್ದರು ಅಸ್ಪೃಶ್ಯತೆಯಂತಹ “ಗುಪ್ತ ವರ್ಣಬೇಧ” (Hidden Apartheid) ನೀತಿಗೆ ಕೊನೆಬಿದ್ದಿಲ್ಲ. ದಲಿತರ ಮೇಲಿನ ಅಸಾಧಾರಣ ಕ್ರೌರ್ಯ, ಹಿಂಸೆಯೆಲ್ಲವೂ ದಿನಪತ್ರಿಕೆಗಳ ಒಂದು ಸಣ್ಣ ಬದಿಯಲ್ಲಿ ಪ್ರಕಟವಾಗುವ ಸುದ್ದಿ ಮಾತ್ರ.

ಲಗಾನ್ ಚಿತ್ರದಲ್ಲಿ ಒಮ್ಮೆ ದೇವನ್ ಚೆಂಡನ್ನು ಸಾಕಷ್ಟು ದೂರಕ್ಕೆ ಹೊಡೆಯುತ್ತಾನೆ. ಆ ಚೆಂಡು ಊರಿನ ಕಸ ಗುಡಿಸುವ ಅಸ್ಪೃಶ್ಯನಾದ ಕಚ್ರನ ಕಾಲುಗಳ ಬಳಿ ಬಿಳತ್ತೆ. ಭುವನ್ ಚೆಂಡನ್ನು ಎಸೆಯಲು ಹೇಳುತ್ತಾನೆ. ತನ್ನ ಊನಾದ (crippled) ಕೈಗಳಿಂದ ಚೆಂಡನ್ನು ಭುವನತ್ತ ಕಚ್ರ ಎಸೆಯುತ್ತಾನೆ. ಹಾಗೆ ಬಿದ್ದ ಚೆಂಡು ಸ್ಪಿನ್ ಆಗುತ್ತೆ. ಆಕಸ್ಮಿಕವಾಗಿ ಅದ್ಭುತ ಪ್ರತಿಭೆಯೊಂದು ಭುವನ್ ಕಣ್ಣಿಗೆ ಬಿಳತ್ತೆ. ಅತ್ಯಂತ ಸಂತಸದಿಂದ ಸ್ಪಿನ್ ಮಾಂತ್ರಿಕ ಕಚ್ರನನ್ನು ಟೀಮ್ಗೆ ಸೇರಿಸಿಕೊಳ್ಳುವುದಾಗಿ ಭುವನ್ ಘೋಷಿಸುತ್ತಾನೆ. ಆ ಘಟನಾಸ್ಥಳದಲ್ಲಿದ್ದವರೆಲ್ಲ ಒಂದು ಕ್ಷಣ ದಂಗಾಗಿ ಹೋಗುತ್ತಾರೆ. ಊರಿನ ಪ್ರಮುಖನಾದ ಬ್ರಾಹ್ಮಣ ಅಸಹ್ಯ, ಅಸಹನೆ ವ್ಯಕ್ತಪಡಿಸುತ್ತಾ ಹೇಳುತ್ತಾನೆ- “ ಬ್ರಿಟಿಷರನ್ನು ಸದೆ ಬಡಿಯುವುದು ನಮ್ಮ ಕರ್ತವ್ಯ ಆದರೆ ಅದಕೊಸ್ಕರ ಈ ಕೆಳಜಾತಿಯವರ ಜೊತೆ ಸೇರುವುದು ಹಾಲಿನ ಜೊತೆ ವಿಷ ಸೇರಿಕೊಂಡಂತೆ. ನಾನದಕ್ಕೆ ಎಂದು ಅವಕಾಶಕೊಡುವುದಿಲ್ಲ.” ಎನ್ನುತ್ತಾನೆ.

ಭುವನ್ ತಕ್ಷಣಕ್ಕೆ ಕಸಿವಿಸಿಗೊಂಡರು ಕಚ್ರನನ್ನು ಮುಟ್ಟಿ ನೆರೆದಿರುವ ಜನರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ನಡೆದ ಪ್ರಮಾದವನ್ನ ಅರಗಿಸಿಕೊಳ್ಳಲಾಗದೆ ಜನ ಹೌಹಾರುತ್ತಾರೆ. ಉಸಿರು ಬಿಗಿ ಹಿಡಿದು ನಿಲ್ಲುತ್ತಾರೆ. ಆದರೆ ಭುವನ್ ಈ ಎಲ್ಲ ತಂತ್ರಗಳಿಗೆ, ಧಮಕಿಗಳಿಗೆ ಬಗ್ಗುವುದಿಲ್ಲ. ಹೆದರದೆ ನಿಂತು, ಗಾಂಧಿಯಂತೆ ಎಲ್ಲರನ್ನು ಚಾಲೆಂಜ್ ಮಾಡುತ್ತಾನೆ. “ಅಸ್ಪೃಶ್ಯರು ಎಂಬ ಹಣೆಪಟ್ಟಿ ತೊಡಿಸಿ ಇಡಿಯ ಮನುಷ್ಯಕುಲವನ್ನೇ ಕಲುಷಿತಗೊಳಿಸುತ್ತಿದ್ದೀರಿ. ಈ ಜಾತಿ ಪದ್ಧತಿಯಿಂದ ಹಳ್ಳಿಯ ವಾತಾವರಣವನ್ನೇ ಹಾಳು ಮಾಡುತ್ತಿದ್ದೀರಿ. ಅದರ ಉಸಿರುಗಟ್ಟಿಸುತ್ತಿದ್ದೀರಿ. ಜಾತಿ, ಮೈಬಣ್ಣದ ಹೆಸರಲ್ಲಿ ಎಲ್ಲರ ಮನಸ್ಸುಗಳನ್ನ ಹೊಡೆಯತ್ತಿದ್ದೀರಿ.” ಎನ್ನುತ್ತಾನೆ. ಅಸ್ಪೃಶ್ಯರನ್ನು ಉಪಯೋಗಕ್ಕೆ ಬಾರದವರೆನ್ನುವ ಲಾಖನನ್ನು ಕುರಿತು “ ನೋಡಿ ನೀವು ಹೆಳವನೆಂದು ಕರೆಯುವ ಕಚ್ರ ನಮ್ಮೆಲರ ಶಕ್ತಿಯಾಗುತ್ತಾನೆ. ಆತನೇ ಪಂದ್ಯವನ್ನ ಗೆಲ್ಲಿಸಿಕೊಡುತ್ತಾನೆಂದು” ಹೇಳುತ್ತಾನೆ. ಅದೇ ರೀತಿ ಕಚ್ರ ಕ್ಯಾಪ್ಟನ್ ರಸೆಲ್ ನಾಯಕತ್ವದ ಬ್ರಿಟಿಷ ತಂಡದ ವಿರುದ್ದ ಹ್ಯಾಟ್ರಿಕ್ ಪಡೆಯುತ್ತಾನೆ. ಕೊನೆವರೆಗೂ ಬ್ಯಾಟಿಂಗ್ನಲ್ಲಿ ಭುವನ್ಗೆ ಸಾತ್ ನೀಡಿ ಪಂದ್ಯ ಗೆಲ್ಲಿಸುವಲ್ಲಿ ವಿಶೇಷ ಪಾತ್ರವಹಿಸುತ್ತಾನೆ.

(ಕಚ್ರನನ್ನು ಎಡಗೈ ಸ್ಪಿನ್ ಬೌಲರ್- ದಲಿತ ಕಾರ್ಯಕರ್ತ ಪಲ್ವಂಕರ್ ಬಾಲೂಗೆ (1876-1955) ಹೋಲಿಸಬಹುದು. ಈತ ಭಾರತ ಕ್ರಿಕೆಟ್ ಇತಿಹಾಸದ ಆರಂಭಿಕ ದಿನಗಳ ಬಹುದೊಡ್ಡ ಸ್ಟಾರ್ ಅಂತಲೇ ಗುರುತಿಸಬಹುದು. ಮೈದಾನದಲ್ಲಿ ಬೇರೆಯವರೊಡಗೂಡಿ ಒಟ್ಟಿಗೆ ಆಡಿ ಪಂದ್ಯಗಳನ್ನ ಗೆಲ್ಲಿಸಿಕೊಡುತ್ತಿದ್ದ. ಆದರೆ ಡ್ರೆಸ್ಸಿಂಗ್ ರೂಮ್ನಲ್ಲಿ ಯಾರು ಈತನನ್ನು ಮುಟ್ಟುತ್ತಿರಲಿಲ್ಲ. ಪೆವಿಲಿಯನ್ನಲ್ಲಿ ಈತನಿಗೆ ಪ್ರತ್ಯೇಕ ತಟ್ಟೆಗಳನ್ನ ಹಿಡಲಾಗುತ್ತಿತ್ತು, ಬೇರೆ ಆಟಗಾರರ ಜೊತೆ ಕೂತು ಊಟಮಾಡಲು ಅನುಮತಿಯಿರಲಿಲ್ಲ. ಈ ಅವಮಾನವನ್ನ ಸಹಿಸಲಾಗದೆ ಆತ ಮೈದಾನಹೊರಗೆ ತಿಂದುಬರುತ್ತಿದ್ದ. ಕೆಳಜಾತಿಯವನಾದುದರಿಂದ ಪ್ರತಿಭೆ ಕ್ಷಮತೆ ಅನುಭವವಿದ್ದರು ಈತನಿಗೆ ತಂಡದ ನಾಯಕತ್ವ ಸಿಗಲೇ ಇಲ್ಲ.)

ಭುವನ್ ಈ ರೀತಿ ಊರಿನ ಜನರಿಗೆಲ್ಲ ಪಾಠ ಹೇಳಿ ಕಚ್ರನನ್ನು ತಂಡಗೊಳಗೆ ಸೇರಿಸಿಕೊಳ್ಳುವ ದೃಶ್ಯ ಚಿತ್ರದ ಅತ್ಯಂತ ಭಾವುಕ ದೃಶ್ಯವೆಂದರೆ ತಪ್ಪಾಗಲಾರದು. ಭುವನ್-ಗಾಂಧಿ ಇಬ್ಬರೂ ಒಂದೇ ಎಂದು ಅ ಕ್ಷಣ ಅನ್ನಿಸಿಬಿಡತ್ತೆ. ಆದರೆ ಈ ದೃಶ್ಯವನ್ನ ಆಳವಾಗಿ ವಿಶ್ಲೇಷಿಸಿದರೆ ಅದು ತೀವ್ರ ಕ್ಷೋಭೆಗೊಳಪಡಿಸುತ್ತೆ ಕೂಡ.

ದಲಿತ ಕಾರ್ಯಕರ್ತ ಸಿರಿಯವನ್ ಆನಂದ್ ಪ್ರಕಾರ ಕಚ್ರ ಅತ್ಯತ್ತಮವಾಗಿ ಆಡಿ ಪಂದ್ಯ ಗೆಲ್ಲಿಸಿಕೊಟ್ಟರು ಪಂದ್ಯದ ನಂತರ ಆತನ ಪರಿಸ್ಥಿತಿಯೇನು ಬದಲಾಗದು. ಆತ ಮತ್ತದೇ ಮಲ ಹೊರುವ, ಕಸ ಗುಡಿಸುವ ಕಾರ್ಯಕ್ಕೆ ಮರಳಬೇಕು. ಆತ ಅಸ್ಪೃಶ್ಯನಾಗಿಯೇ ಉಳಿದುಕೊಳ್ಳುಬೇಕು. ಇನ್ನೆರಡು ಗಮನಿಸಬೇಕಾದ ವಿಚಾರಗಳಿವೆ. ಈ ವಿಚಾರಗಳು ಅಸಹ್ಯಕರ ಹಾಗು ಆಕ್ಷೇಪಣೀಯವಾದವು ಕೂಡ. ಭುವನ್ ಕಚ್ರನನ್ನು ತಂಡದೊಳಗೆ ಸೇರಿಸಿಕೊಳ್ಳುವುದು ಆಕಸ್ಮಿಕವಾಗಿಯೇ ಹೊರತು ಸ್ವಯಿಚ್ಚೆಯಿಂದ ನೀಡಿದ ಅವಕಾಶದಿಂದಲ್ಲ. ಕಚ್ರನ ಪ್ರತಿಭೆ, ಕ್ಷಮತೆ ಇರುವುದು ಆತನ ಅಂಗವೈಕಲ್ಯದಲ್ಲಿ! ಶೋಷಿತ ದಲಿತನನ್ನು ಈ ರೀತಿ ತೋರಿಸಿರುವುದರಿಂದ ಅವರನ್ನು ಮತ್ತಷ್ಟು ಶೋಷಣೆಗೊಳಪಡಿಸಲಾಗಿದೆ. The token Dalit is further Dalitised.

ಚಿತ್ರದಲ್ಲಿ ಕಚ್ರ ತನ್ನ ಬಳಸುವ ಸಶಕ್ತ ಕೈಗಳಿಂದ ಚೆಂಡನ್ನು ಎಸೆದಾಗ ಭುವನ್ ಆ ಕೈಯಿಂದ ಅಲ್ಲ, ಇನ್ನೊಂದು ಊನಾದ (disabled) ಕೈಯಿಂದ ಚೆಂಡನ್ನು ಎಸೆಯಲು ಒತ್ತಾಯಿಸುತ್ತಾನೆ!!!! ಇಲ್ಲಿ ಅಸ್ಪೃಶ್ಯ ಕಚ್ರ ಮುಖ್ಯವಾಗದೆ ಆತನ ಅಂಗವೈಕಲ್ಯ ಮುಖ್ಯವಾಗುತ್ತದೆ. ಕಚ್ರನ ಅರ್ಹತೆ ಆತನ ಪ್ರತಿಭೆ, ವೈರಿಗಳನ್ನು ಸೋಲಿಸಬೇಕೆಂಬ ಛಲ, ಗೆಲ್ಲಲ್ಲೇಬೇಕೆಂಬ ದೃಢ ಮನಸ್ಸಿನ ಮೇಲೆ ಅವಲಂಬಿತವಾಗದೆ ಹುಟ್ಟಿನಿಂದಲೆ ಬಂದ ಅಸ್ಪೃಶ್ಯತೆಯಂತೆ ಆತನ ಅಂಗವೈಕಲ್ಯದಲ್ಲಿದೆ. ಭುವನ್ ಆ “ಸ್ವಾಭಾವಿಕ ಒಳ” ಪ್ರತಿಭೆಗೆ ಹೊರಗೆಡಹುತ್ತಾನೆಯಷ್ಟೇ. ಕಚ್ರನಿಗೆ ತನ್ನ ಪ್ರತಿಭೆಯ ಅರಿವಿಲ್ಲ ಕೂಡ.

ಚಿತ್ರದುದ್ದಕ್ಕೂ ಅತಿ ಅಂಜಿಕೆಯಿಂದ ತಪ್ಪೋಪ್ಪಿಕೊಳ್ಳುವವನಂತೆ ಚಿತ್ರಿತನಾದ ಕಚ್ರನಿಗೆ ಒಂದು ಡೈಲಾಗ್ ಕೂಡ ಇಲ್ಲ. He is stripped of ಸ್ಪೀಚ್ and ಏಜನ್ಸಿ. ಭುವನ್ ಕಚ್ರನನ್ನು ತಂಡದೊಳಗೆ ಸೇರಿಕೊಳ್ಳುವ ಆಸೆಯಿದೆಯೇ ಎಂದು ಒಂದು ಮಾತು ಕೇಳುವುದಿಲ್ಲ. ಕಚ್ರ ಪಂದ್ಯದಲ್ಲಿ ಆಡುತ್ತಾನೆಂದು “offcamera” ತಿಳಿಸಲಾಗುತ್ತೆ. ನಮ್ಮ ದೇಶದ ಹಳ್ಳಿಯ ಅಸ್ಪೃಶ್ಯರ ಧಾರುಣ ಬದುಕು ಕೂಡ offcamera ಅಲ್ಲವೆ? ತಂಡಕ್ಕೆ ಸೇರಿಸಿಕೊಂಡಂತೆಯೆ ಮಲ ಹೊರಲು,ಸತ್ತ ದನಗಳನ್ನು ಹೊತ್ತೊಯ್ಯಲು ಕಚ್ರನಿಗೆ ಹೇಳಬಹುದು… ಆತ ವಿನಮ್ರವಾಗಿಯೇ ಹೇಳಿದೆಲ್ಲವನ್ನು ಮಾಡುತ್ತಾನೆ.

ಕಚ್ರನ ಅಂಗವೈಕಲ್ಯ ಏನೇ ಇರಲಿ ತಂಡಕ್ಕೆ ಆತನ ಕೊಡುಗೆ ಪ್ರಶಂಸನೀಯ. ಭಾರತೀಯ ಸಮಾಜಕ್ಕೆ ದಲಿತರು, ಅಸ್ಪೃಶ್ಯರು ನೀಡಿದ ಮತ್ತು ನಾವು ಗುರುತಿಸದ ಕೊಡುಗೆಗಳ ರೂಪಕ ಕೂಡ ಇದಾಗಿದೆ. ಮೇಲ್ಜಾತಿಯ ಜನರು ಎಷ್ಟೇ ಬೆಂಕಿಯುಗುಳಿದರು ಭಾರತೀಯ ಸಮಾಜಕ್ಕೆ ಆರ್ಥಿಕತೆಗೆ ದಲಿತರ ಕೊಡುಗೆ ಗಮನಾರ್ಹ. ದಲಿತರ ಸೇವೆ ಭಾಗವಹಿಸುವಿಕೆ ಕೊಡುಗೆಯಿಲ್ಲದೆ ನಮ್ಮ ಸಮಾಜದ ಅಭಿವೃದ್ದಿ ಸಾಧ್ಯವೆ?

ಗಾಂಧಿಯಂತೆ ಭುವನ್ ಕೂಡ ಮೇಲ್ಜಾತಿ ಜನರ ಯೋಚನಾಕ್ರಮಗಳಲ್ಲಿ ಯಾವುದೇ ಬದಲಾವಣೆ ತರಲಾಗಲಿಲ್ಲ ಎಂಬುದಂತೂ ಸತ್ಯ. ಪಂದ್ಯ ಮುಗಿದ ಮೇಲೆ, ಮಳೆಯಲ್ಲಿ ಭುವನ್ ಮತ್ತು ಗೌರಿ ಕುಣಿದು ಮದುವೆಯಾದ ನಂತರ ಕಚ್ರನನ್ನು ಹಳ್ಳಿಯ ಜನರು ಅಪ್ಪಿಕೊಂಡರೆ? ಅವರ ಸಮಾಜದಲ್ಲಿ ಸೇರಿಸಿಕೊಂಡರೆ? ಜೊತೆಗೆ ಕೂತು ಉಂಡರೆ? ಮೇಲು-ಕೀಳೆಂಬ ಮನಸ್ಥಿತಿ ಮರೆತರೆ? ಇಲ್ಲ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿಯೇ ಇದೆ. ಸಮರಗಳಲ್ಲಿ, ವೋಟಿಗಾಗಿ, ಅಧಿಕಾರಕ್ಕಾಗಿ ದಲಿತರನ್ನು ಬಳಸಿಕೊಂಡು ಅವರ ಸಬಲೀಕರಣಕ್ಕೆ ಯಾವ ಆದ್ಯತೆಯನ್ನೂ ನೀಡದೆ ಹಾಗೆ ಉಳಿಸಿದ್ದೇವೆ. ಕಚ್ರ ಎಂಬ ಕೊಳಕ ಅವರ ಪ್ರತಿನಿಧಿ.

ಚಿತ್ರದ detail ವಿಶ್ಲೇಷಣೆಗೆ ರಾಬರ್ಟ್ ಕ್ರಾಸ್ ಬರೆದ- A Postcolonial Reading of Lagaan ಓದಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!