ದಲಿತರು ತಮ್ಮ ಹಕ್ಕುಗಳಿಗಾಗಿ ಎಷ್ಟು ಹೋರಾಟ ಮಾಡಿದರೂ ಸಾಲುವುದಿಲ್ಲ, ಭಾರತ ಸಂವಿಧಾನದಲ್ಲಿ ಮೀಸಲಾತಿ ಇದೆ, ಆದರೂ ಅವರನ್ನು ಹಕ್ಕುಗಳಿಂದ ದೂರು ಇಡಬೇಕು ಎಂಬುವ ಉದ್ದೇಶದಿಂದ ಹುನ್ನಾರ ನಡೆಸಲಾಗುತ್ತಿದೆ ಎಂದು ನಿವೃತ್ತ ಇಂಜಿನಿಯರ್ ಚಂದ್ರಹಾಸ್ ತಿಳಿಸಿದರು.
ಮಂಡ್ಯದ ಅಶೋಕ ನಗರದಲ್ಲಿ ದಲಿತ ಹಕ್ಕುಗಳ ಸಮಿತಿ–ಕರ್ನಾಟಕ(ಡಿಎಚ್‌ಎಸ್) ನೂತನ ಕಚೇರಿ ಶಾಖಾ ಕಚೇರಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹೋರಾಟ ನಿರಂತರವಾಗಿರಬೇಕು. ಆ ನಿಟ್ಟಿನಲ್ಲಿ ದಲಿತ ಹಕ್ಕುಗಳ ಸಮಿತಿ– ಕರ್ನಾಟಕದ ಸಂಘಟನೆ ಸಾಗಲಿ ಎಂದು ಹಾರೈಸಿದರು.
ಕೆ.ಪಿ.ಆರ್.ಎಸ್ ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ ಮತಾನಾಡಿ, ದಲಿತರ ಹಕ್ಕುಗಳಿಗೆ ಹೋರಾಟ ಮಾಡಲು ಒಂದು ಕಚೇರಿ ಮಾಡಿಕೊಂಡಿದ್ದಿರೋ ಅದೇ ರೀತಿ ಮನೆ ಇಲ್ಲದ ದಲಿತರಿಗೆ ಮನೆ ಸಿಗುವಂತೆ ಒಂದು ಹೋರಾಟ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಿವೇಶನ ಇಲ್ಲದಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ದಲಿತರಿಗೆ ಭೂಮಿಯನ್ನು ನೀಡಬೇಕಿದೆ ಎಂದು ಒತ್ತಾಯಿಸಿದರು.
ದಲಿತರ ಹಕ್ಕಿಗಾಗಿ ಹೋರಾಟ ಮಾಡದಿದ್ದರೆ ಪ್ರಯೋಜನವಿಲ್ಲ, ದಲಿತರಿಗೆ ಈಗಲೂ ಸಹ ಲೇಔಟ್‌ಗಳಲ್ಲಿ ನಿವೇಶನ ನೀಡುತ್ತಿಲ್ಲ, ಒಬ್ಬ ರಾಜ್ಯ ಮಟ್ಟದ ಅಧಿಕಾರಿಯು ಸಹ ಜಮೀನು ಕೊಂಡುಕೊಳ್ಳಲು ಸಾಧ್ಯವಿಲ್ಲ, ಇಂತಹ ಸಮಸ್ಯೆಗಳನ್ನು ಗುರುತಿಸಿ ಹೋರಾಟ ಮಾಡಿ ಹಕ್ಕು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾನ ಮನಸ್ಕ ವೇದಿಕೆಯ ಮುಕುಂದ, ಅಹಿಂದ ಶಿವರುದ್ರಯ್ಯ, ಡಿಎಚ್ಎಸ್‌ನ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷ ಕೆ.ಎಸ್.ಶಿವಲಿಂಗಯ್ಯ, ರಾಜ್ಯ ಸಮಿತಿ ಸದಸ್ಯೆ ಗಿರಿಜಮ್ಮ, ಕಾರ್ಯದರ್ಶಿ ಅಂಬೂಜಿ ಮತ್ತಿತರರು ಭಾಗವಹಿಸಿದ್ದರು.