ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ರದ್ದು ಮಾಡಿ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ನೇರಪಾವತಿ ವ್ಯವಸ್ಥೆಯಡಿ ವೇತನ ನೀಡಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಸರ್ಕಾರವನ್ನು ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯದ ಹಲವು ಪಾಲಿಕೆ,ನಗರಸಭೆ, ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ.ಗಳಲ್ಲಿ ಇನ್ನೂ ಗುತ್ತಿಗೆ ಪದ್ಧತಿಯಡಿ ಪೌರಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತದೆ. ಕೆಲವೆಡೆ ಒಂದಷ್ಟು ಪೌರಕಾರ್ಮಿಕರಿಗೆ ನೇರ ಪಾವತಿಯಡಿ ವೇತನ ನೀಡಲಾಗುತ್ತದೆ. ಇದೇ ವ್ಯವಸ್ಥೆ ಎಲ್ಲಡೆಯೂ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.
ಮಂಡ್ಯ ನಗರಸಭೆಯಲ್ಲಿ 80 ಮಂದಿಯಷ್ಟೇ ಕಾಯಂ ಪೌರಕಾರ್ಮಿಕರಿದ್ದಾರೆ. 130 ಮಂದಿಗೆ ನೇರಪಾವತಿ ಮಾಡಲಾಗುತ್ತದೆ. ಉಳಿದ 50 ಮಂದಿ ಇನ್ನು ಗುತ್ತಿಗೆ ಪೌರಕಾರ್ಮಿಕರಾಗಿಯೇ ದುಡಿಯುತ್ತಿದ್ದಾರೆ. ಇವರಿಗೂ ನೇರಪಾವತಿ ಮೂಲಕ ವೇತನ ನೀಡಬೇಕು ಎಂದರು.
ಹಾಗೆಯೇ ಲೋಡರ್ಸ್ ಮತ್ತು ಚಾಲಕರ ನೇಮಕಾತಿಗೆ ಮಂಡ್ಯ ನಗರಸಭೆ ಪ್ರಕಟಣೆ ಹೊರಡಿಸಿದೆ. ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಬದಲಿಗೆ ಹಾಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನೇ ಈ ಹುದ್ದೆಗಳಿಗೆ ಪರಿಗಣಿಸಬೇಕೆಂದು ಒತ್ತಾಯಿಸಿದರು.
ನಗರದಲ್ಲಿ ಘೋಷಿತ ಸ್ಲಂಗಳಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರಿಗೆ ಈ ಹಿಂದೆ ಹಂಚಿಕೆಯಾದ ನಿವೇಶನ/ಮನೆಗಳ ಹಕ್ಕುಪತ್ರ ವಿತರಿಸಬೇಕು. ಆ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ನಗರದ ಸಂತೆಮೈದಾನ ಬಳಿ ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ 98 ಮನೆಗಳನ್ನು ಪೌರಕಾರ್ಮಿಕರಿಗೆ ತ್ವರಿತವಾಗಿ ಹಂಚಿಕೆ ಮಾಡಬೇಕು. ರಾಜಕೀಯ ನೆಪದಲ್ಲಿ ಮನೆ ಹಂಚಿಕೆ ಪ್ರಕ್ರಿಯೆಯನ್ನು ವಿಳಂಬ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿದರು.
ಕರ್ನಾಟಕ ರಾಜ್ಯ ಪೌರಕರ್ಮಿಕರ ಸಂಘದ ಮಂಡ್ಯ ನಗರ ಘಟಕವನ್ನು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜತೆಗೆ, ರಾಜ್ಯ ಘಟಕಕ್ಕೂ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯ ಕಾರ‌್ಯದರ್ಶಿಯಾಗಿ ಎಚ್.ಪಿ.ಸಂತೋಷ್, ರಾಜ್ಯ ನಿರ್ದೇಶಕರಾಗಿ ಎಂ.ಗಣೇಶ್ ಹಾಗೂ ಮಂಡ್ಯ ನಗರ ಘಟಕದ ಅಧ್ಯಕ್ಷರಾಗಿ ಕೆ.ಮಹದೇವ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.
ಉಳಿದಂತೆ ಪದಾಧಿಕಾರಿಗಳಾಗಿ ತಂಗ ಗಣೇಶ(ಪ್ರಧಾನ ಕಾರ‌್ಯದರ್ಶಿ), ಗುರುಮೂರ್ತಿ(ಉಪಾಧ್ಯಕ್ಷ), ಮಹದೇವ(ಕಾರ‌್ಯದರ್ಶಿ), ಮಹೇಂದ್ರ(ಜಂಟಿ ಕಾರ‌್ಯದರ್ಶಿ), ನಾಗರಾಜು(ಸಹ ಕಾರ‌್ಯದರ್ಶಿ), ಎಸ್.ಶಿವಕುಮಾರ್(ಖಜಾಂಚಿ), ಮಣಿ, ಓಬಯ್ಯ(ಕಾರ‌್ಯಕಾರಣಿ ಸದಸ್ಯರು) ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಚಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಜಿಲ್ಲಾಧ್ಯಕ್ಷ ಮುಟ್ಟನಹಳ್ಳಿ ಮಹೇಶ್, ಗಣೇಶ್ ಹಾಜರಿದ್ದರು.