ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ ಮಾಜಿ ಶಾಸಕ ರಾಜಣ್ಣ ಕ್ಷಮೆ ಕೇಳಿದರೆ ಸಾಲದು.ಅವರ ವಿರುದ್ಧ ಕಾಂಗ್ರೆಸ್ ಹೈ ಕಮಾಂಡ್ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರಿಂದ ಈ ರೀತಿಯ ವಿಕೃತ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ.
ರಾಜಣ್ಣ ಅವರ ಕೀಳು ಮಟ್ಟದ ಹೇಳಿಕೆಯನ್ನು ನಾವು ಸಹಿಸಲು ಸಾಧ್ಯವಿಲ್ಲ. ದೇವೇಗೌಡರು ನಾನು,ರಾಜಣ್ಣ ಸೇರಿದಂತೆ ನೂರಾರು ರಾಜ್ಯ ,ರಾಷ್ಟ್ರ ನಾಯಕರನ್ನು ಸೃಷ್ಟಿ ಮಾಡಿರುವ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ ಎಂದರು.
ರಾಜಣ್ಣ ದೇವೇಗೌಡರ ಬಗ್ಗೆ ವಿಕೃತಿ ಮಾತುಗಳನ್ನಾಡಿದ್ದಾರೆ.ಈ ರೀತಿಯ ಹೇಳಿಕೆ ನೀಡಿರುವುದು ನಿಜವಾಗಲೂ ನಾಡಿನ ಮಹಾಜನತೆಗೆ ನೋವು ತಂದಿದೆ. ಇದು ಅವರಿಗೆ ಶೋಭೆ ತರುವುದಿಲ್ಲ.ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಇಂತಹವರನ್ನು ಇಟ್ಟು ಕೊಂಡು ಪಕ್ಷಕ್ಕೆ ಧಕ್ಕೆ ತಂದುಕೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ ಎಂದರು.
ಇಂತಹ ಕೀಳುಮಟ್ಟದ ಹೇಳಿಕೆಯಿಂದ ದೇವೇಗೌಡರು ಕುಗ್ಗುವುದಿಲ್ಲ. ಶತಾಯುಷಿಯಾಗಿ ನೂರಾರು ವರ್ಷ ನಮ್ಮೊಡನಿದ್ದು, ನಮಗೆಲ್ಲ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ದೇವೇಗೌಡರ ಮನೆಗೆ ಹೋಗಿ ಕ್ಷಮೆಯಾಚಿಸುವಂತೆ ರಾಜಣ್ಣ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಇಲ್ಲದಿದ್ದರೆ ಜೆಡಿಎಸ್ ಕಾರ್ಯಕರ್ತರೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ರಾಜಣ್ಣ ವಿರುದ್ಧ ಪಾಂಡವಪುರ ಹಾಗೂ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದು, ಜು.3 ರಂದು ಮಂಡ್ಯ, ನಾಗಮಂಗಲ ಹಾಗೂ ಮಳವಳ್ಳಿ ತಾಲ್ಲೂಕುಗಳಲ್ಲಿ ಹಾಗೂ ಜು.೪ ರಂದು ಮದ್ದೂರು ಶ್ರೀರಂಗಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು.
ಜೆಡಿಎಸ್ ಮುಗಿಸಲು ಹುನ್ನಾರ
ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಮುಗಿಸಲು ಮುಂದಾಗಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುತಂತ್ರ ರಾಜಕಾರಣ ನಡೆಯುವುದಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ತಂತ್ರಗಾರಿಕೆ ಮೂಲಕ ಚುನಾವಣೆ ನಡೆಸಿ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನವನ್ನು ಗೆಲ್ಲುವ ಮೂಲಕ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದರು.
ಬಿಜೆಪಿ ಪೆಟ್ರೋಲ್, ಗ್ಯಾಸ್ ಬೆಲೆಗಳನ್ನು ಏರಿಕೆ ಮಾಡಿಕೊಂಡು ಹೋಗುತ್ತಿದೆ. ಇವರ ಯೋಗ್ಯತೆಗೆ ರೈತರ ಸಾಲ ಮನ್ನಾ ಮಾಡಲು ಆಗಲಿಲ್ಲ ಎಂದು ಹರಿಹಾಯ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ, ಕಾಂಗ್ರೆಸ್ ಹಾಗೂ ರೈತ ಸಂಘ ಒಂದಾಗಿ ಕೆಲಸ ಮಾಡಿದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು. ಆದರೂ ನಮ್ಮ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 5.75 ಲಕ್ಷ ಮತಗಳನ್ನು ಪಡೆದಿದ್ದರು ಎಂದರು.
ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಡೇ ಗಳಿಗೆಯಲ್ಲಿ ಬಿಜೆಪಿ ಧಾರೆ ಎರೆದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಯಿತು. 48 ಮತಗಳ ಅತ್ಯಲ್ಪ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಸೋಲಬೇಕಾಯಿತು ಎಂದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಮಾದೇಗೌಡರ ಹೋರಾಟದ ಫಲವಾಗಿ ಮತ್ತು ಅನುಕಂಪದ ಅಲೆಯಿಂದ ಮಧು ಜಿ.ಮಾದೇಗೌಡ ಗೆಲುವು ಸಾಧಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ರಾಷ್ಟ್ರದ ಜ್ವಲಂತ ಸಮಸ್ಯೆಗಳು ಬಂದಾಗ ನಾಯಕತ್ವ ವಹಿಸಿ ಹೋರಾಟ ಮಾಡುತ್ತಾರೆ. ರಾಜ್ಯದಲ್ಲಿ ಅಜಾತಶತ್ರು ನಡವಳಿಕೆ ಇಟ್ಟುಕೊಂಡ ನಾಯಕರು ಯಾರಾದರೂ ಇದ್ದರೆ ಅದು ದೇವೇಗೌಡಜೀ ಎಂದು ಹೇಳಿದರು.
ದೇವೇಗೌಡರ 6 ದಶಕಗಳ ರಾಜಕಾರಣದಲ್ಲಿ ಕೇವಲ 6-7 ವರ್ಷ ಅಧಿಕಾರ ಮಾಡಿದ್ದಾರೆ. ನೀರಾವರಿ ಯೋಜನೆಗಾಗಿ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಇಂತಹ ಧೀಮಂತ ಹೋರಾಟಗಾರರ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ರಾಜಣ್ಣ ಸಾರ್ವಜನಿಕ ಜೀವನದಿಂದಲೇ ದೂರವಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಹಾಗೂ ಚಿನಕುರಳಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಸಿದ್ದಲಿಂಗೇಗೌಡ ಹಾಜರಿದ್ದರು.