Friday, September 27, 2024

ಪ್ರಾಯೋಗಿಕ ಆವೃತ್ತಿ

ಶೋಷಕ ಜಾತಿಯ ಕುಟುಂಬವೊಂದು ದಲಿತ ಕೇರಿಯಲ್ಲಿ ನಿಜವಾಗಿಯೂ ಬದುಕಬಲ್ಲದೇ?

ಚಿತ್ರ: ಎಲ್ವಿಸ್ ( ELVIS – 2022 )
ನಿರ್ದೇಶನ: ಬಾಝ್ ಲುಹ್ರ‍್ಮನ್ನ್
ಭಾಷೆ: ಇಂಗ್ಲಿಷ್, ದೇಶ: ಅಮೇರಿಕಾ

ಇಡೀ ಅಮೇರಿಕಾದಲ್ಲಿ ಮೈಕೆಲ್ ಜಾಕ್ಸನ್‌ನಷ್ಟು ಪ್ರಖ್ಯಾತಿ ಪಡೆದ ಮತ್ತೊಬ್ಬ ಗಾಯಕನಿರಲಿಲ್ಲ ಎಂಬ ನನ್ನ ಅಭಿಪ್ರಾಯವನ್ನು ಸುಳ್ಳು ಮಾಡಿದ್ದು ಎಲ್ವಿಸ್ ಸಿನಿಮಾ. ಕಾರಣಾಂತರಗಳಿಂದ ಕಪ್ಪು ಜನರ ನಡುವೆ ಬೆಳೆದ ಬಿಳಿಯ ವರ್ಣದ ಎಲ್ವಿಸ್ ಪ್ರೆಸ್ಲಿ ಆಫ್ರೋ ಅಮೇರಿಕನ್ ಸಂಸ್ಕೃತಿಯನ್ನು ತನ್ನ ಗಾಯನದಲ್ಲಿ ರೂಢಿಸಿಕೊಂಡು ಇಡೀ ಅಮೇರಿಕಾದ ಫೇವರಿಟ್ ಗಾಯಕನಾಗಿ ಬೆಳೆದು ಅರವತ್ತರ ದಶಕದ ಹೆಣ್ಣು ಮಕ್ಕಳನ್ನು ಸೆಳೆದು, ವರ್ಣಬೇಧವನ್ನು ಮನಸ್ಸಿನಲ್ಲಿ ಜೀವಂತ ಸಾಕಿಕೊಂಡಿದ್ದ ಬಿಳಿ ಚರ್ಮದ ಕೇಡುಗರ ಎದೆಯಲ್ಲಿ ನಡುಕು ಹುಟ್ಟಿಸಿ ತೀವ್ರ ಪ್ರತಿರೋಧ ಎದುರಿಸಿದವನು.

ತನ್ನ ಗಾಯನ ಶೈಲಿ ಮತ್ತು ಕರಿಯರಂತೆ ಕಾಲು ಕುಣಿಸುವ ಕ್ರಮಕ್ಕೆ ಪ್ರಭುತ್ವ ಕಡಿವಾಣ ಹೇರಲು ಬಂದಾಗ ಅದನ್ನು ಒಪ್ಪದೆ ಪ್ರತಿಭಟಿಸಿ ತನ್ನ ಮ್ಯಾನೇಜರನಾದ ಪಾರ್ಕರ್ ಸರ್ಕಾರಕ್ಕೆ ಮಾಡಿಕೊಂಡ ಮನವಿಯ ಭಾಗವಾಗಿ ಜೈಲಿಗೆ ಬದಲಾಗಿ ಸೇನೆಗೆ ಸೇರಿದವನು. ಅಲ್ಲಿ ಅವನಿಗೆ ಸಿಕ್ಕ ಪ್ರಿಸ್ಕಿಲ್ಲಾಲೊಡನೆ ಮದುವೆಯಾಗಿ ಇನ್ನೇನು ಮುಖ್ಯವಾಹಿನಿಯಿಂದ ದೂರವಾಗಿಬಿಟ್ಟನಲ್ಲ ಸಾಕು ಬಿಡು ಎಂದು ಶೋಷಕ ಮನಸ್ಸುಗಳು ಅಂದು ಕೊಳ್ಳುತ್ತಿರುವಾಗಲೇ ಹಾಲಿವುಡ್ ಪ್ರವೇಶಿಸಿ ನಟನಾಗಿಯೂ ಗೆದ್ದವನು. ಅಲ್ಲಿನ ಜನಪ್ರಿಯತೆ ಕ್ಷಣಿಕ ಎಂದು ತಿಳಿಯುತ್ತಿದ್ದಂತೆ ತನ್ನೊಳಗಿನ ಹಾಡುಗಾರನಿಗೆ ಮರುಜೀವ ಕೊಟ್ಟು ಪುನಃ ಹಾಡಲು ನಿಂತವನು.

ಪ್ರಾಯೋಜಕರು ಹಾಕಿದ ಗೆರೆ ದಾಟಿ, ಸರ್ಕಾರಕ್ಕೆ ಎದಿರೇಟು ಕೊಟ್ಟು ತನ್ನ ಹಾಡುಗಾರಿಕೆಯನ್ನು ಮುಂದುವರೆಸಿದ ಪ್ರೆಸ್ಲಿ ತನ್ನ ಮ್ಯಾನೇಜರ್‌ನ ಹಣದಾಸೆ, ಬಿಡುವಿಲ್ಲದೆ ದುಡಿದು ಹೈರಾಣಾಗಿಲ್ಲದಿದ್ದರೆ ಇನ್ನಷ್ಟು ವರುಷ ಬದುಕಿರುತಿದ್ದ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಮತ್ತು ಜಾನ್ ಎಫ್ ಕೆನೆಡಿ ಹತ್ಯೆಯಿಂದ ಖೇದಗೊಂಡ ಪ್ರೆಸ್ಲಿ ಅದನ್ನು ಪ್ರತಿಭಟಿಸಿ ಹಾಡಿದ. ಜನಪ್ರಿಯತೆಯ ಉತ್ತುಂಗದಲ್ಲಿರುವ ಎಷ್ಟೋ ಕಲಾವಿದರು ಎಲ್ಲಿ ತಮ್ಮ ಜನಪ್ರಿಯತೆಗೆ ಕುಂದು ಬಂದೀತೋ, ವರಮಾನಕ್ಕೆ ಪೆಟ್ಟು ಬಿದ್ದೀತೋ ಎಂದು ಆಷಾಢಭೂತಿಗಳಾಗಿ ಎಲ್ಲವನ್ನೂ ಕಂಡು ಕಣ್ಣುಮುಚ್ಚಿಕೊಳ್ಳುವ ಉದಾಹರಣೆ ನಮ್ಮ ಕಣ್ಣ ಮುಂದಿರುವಾಗ ತನ್ನೊಳಗೆ ಸೃಷ್ಟಿಯಾದ ಕಂಪನವನ್ನು ಯಾವುದೇ ಬಿಡೆಯಿಲ್ಲದೆ ಹೊರಹಾಕುವ ಧೈರ್ಯವಿದ್ದ ಪ್ರೆಸ್ಲಿಯಂತಹ ಕಲಾವಿದ ಬಲು ವಿರಳ ಎನಿಸುತ್ತದೆ.

ಮೈಕೆಲ್ ಜಾಕ್ಸನ್, ಬಾಬ್ ಡಿಲನ್, ಮಡೋನಾ, ಬ್ರಿಟ್ನಿ ಸ್ಪಿಯರ್ಸ್, ಜಸ್ಟಿನ್ ಬೈಬರ್, ಸೆಲೆನಾ ಗೊಮೆಜ್ ಟೈಲರ್ ಸ್ವಿಫ್ಟ್’ನಂತಹ ಪಾಪ್ ಗಾಯಕರಂತೆ ಮೂರನೇಯ ಜಗತ್ತಿನ ರಾಷ್ಟ್ರಗಳಲ್ಲಿ ಪ್ರೆಸ್ಲಿ ಮನೆಮಾತಲ್ಲದಿದ್ದರೂ ಆತನ ಹಾಡುಗಳ ಮಾರಾಟ ದಾಖಲೆಯನ್ನು ಯಾರೂ ಮುರಿದಿಲ್ಲ ಎನ್ನುವುದು ವಾಸ್ತವ.

ಇನ್ನು ಎಲ್ವಿಸ್ ಚಿತ್ರ ಹಾಲಿವುಡ್‌ನ ವ್ಯಾಪಾರಿ ಚಿತ್ರ ಸ್ವರೂಪದಲ್ಲಿ ರೂಪುಗೊಂಡಿರುವುದರಿಂದ ಸಿದ್ಧ ವ್ಯಾಪಾರಿ ಮಾದರಿ ತಾಂತ್ರಿಕತೆಯನ್ನು ರೂಢಿಸಿಕೊಂಡಿದೆಯೇ ಹೊರತು ವಿಶೇಷ ಚಿತ್ರ ತಂತ್ರಗಳೇನೂ ಕಾಣಸಿಗುವುದಿಲ್ಲ. ಆಸ್ಟಿನ್ ಬಟ್ಲರ್ ಮತ್ತು ಟಾಮ್ ಹ್ಯಾಂಕ್ಸ್ ನಟನೆ ಕೂಡಾ ಚಿತ್ರಕ್ಕೆ ಪೂರಕವಾಗಿ ಪ್ರಬುದ್ಧತೆಯಿಂದ ಕೂಡಿದೆಯೇ ಹೊರತು ಬೇರಾವ ಹೆಚ್ಚುಗಾರಿಕೆಯೂ ಇಲ್ಲ.

ಆದರೂ ನಾವು ಈ ಚಿತ್ರವನ್ನು ನೋಡಬೇಕಾದ ಮುಖ್ಯ ಉದ್ದೇಶ ಮತ್ತು ಹಿನ್ನಲೆ ಯಾವುದೆಂದರೆ: ಭಾರತದಂತಹ ಜಾತಿ ಪ್ರಧಾನ ದೇಶದಲ್ಲಿ ದಲಿತ ಕೇರಿಯಲ್ಲಿ ಶೋಷಕ ಜಾತಿಯ ಕುಟುಂಬವೊಂದು ನಿಜವಾಗಿ ಬದುಕಬಲ್ಲದೇ? ಒಂದು ವೇಳೆ ಹಾಗೆ ಬದುಕಿ ಆ ಕುಟುಂಬದ ವ್ಯಕ್ತಿಯೊಬ್ಬ ದಲಿತ ಸಂಸ್ಕೃತಿಯ ಅಂಶಗಳನ್ನು ರೂಢಿಸಿಕೊಂಡು ಕಲಾವಿದನಾಗಿ ಮುಖ್ಯವಾಹಿನಿಗೆ ಬಂದರೆ ಈ ದೇಶದಲ್ಲಿ ಏನಾಗಬಹುದು? ಇಲ್ಲಿನ ಸಂಪ್ರದಾಯವಾದಿ ಮನಸ್ಸುಗಳು ಅದನ್ನು ಹೇಗೆ ಗ್ರಹಿಸಬಹುದು ಎಂಬ ಚರ್ಚೆಯೊಂದನ್ನು ರೂಪಿಸುವುದು ಸಾಧ್ಯವಾಗಬೇಕು.

( ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು)

ವಿನಯ್ ಕುಮಾರ್ ಎಂ.ಜಿ.
Copyrights: Author

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!