ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜಣ್ಣ,ನೀನು ದೇವೇಗೌಡರ ಮನೆಗೆ ಹೋಗಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳದಿದ್ದರೆ,ರಾಜ್ಯದ ಜನರೇ ಸೂಕ್ತ ಬುದ್ಧಿ ಕಲಿಸುತ್ತಾರೆಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ಲ್ರುಲ್ಲಾ ಖಾನ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತ ವಿಡಿಯೋ ಮೂಲಕ ಮಾತನಾಡಿರುವ ಅವರು, ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಎಲ್ಲಾ ಸಮುದಾಯಗಳಿಗೂ ಸಮನಾದ ಗೌರವ ನೀಡಿ ಸೌಲಭ್ಯಗಳನ್ನು ಕೊಟ್ಟಿದ್ದಾರೆ. ಈ ದೇಶದ ಪ್ರಧಾನಿಯಾಗಿ ಕೀರ್ತಿ ತಂದಿರುವ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿರುವ ನಿನ್ನ ಯೋಗ್ಯತೆ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಿದೆ.
ದೇವೇಗೌಡರು ಈ ಇಳಿ ವಯಸ್ಸಿನಲ್ಲಿಯೂ ರಾಜ್ಯದ ರೈತರು, ಜನಸಾಮಾನ್ಯರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಒಂದು ಬಾರಿ ಶಾಸಕನಾಗಿರುವ ನಿನಗೆ ಇನ್ನೊಂದು ಬಾರಿ ಗೆಲ್ಲುವ ಯೋಗ್ಯತೆ ಇದೆಯಾ? ದೇವೇಗೌಡರು ಆಕಾಶ ಇದ್ದ ಹಾಗೆ, ಆಕಾಶದ ಕಡೆ ಮುಖ ಮಾಡಿ ಉಗುಳಿದರೆ ನಿನ್ನ ಮುಖಕ್ಕೆ ಬೀಳೋದು. ದೇವೇಗೌಡರ ಬಗ್ಗೆ ಮಾತನಾಡಲು ನಿನಗೆ ಯಾವ ಯೋಗ್ಯತೆಯೂ ಇಲ್ಲ.
ದೇವೇಗೌಡರ ಕೊಡುಗೆ ಈ ದೇಶಕ್ಕೆ, ರಾಜ್ಯಕ್ಕೆ ಸಾಕಷ್ಟಿದೆ. ನಿನ್ನ ಕೊಡುಗೆ ಏನಿದೆ ಎಂಬುದನ್ನು ಮೊದಲು ತಿಳಿದುಕೊಂಡು ಮಾತನಾಡು. ಹಿರಿಯರು, ಕಿರಿಯರು ಎನ್ನದೆ ದುರಹಂಕಾರದಿಂದ ಮಾತನಾಡುವ ನಿನಗೆ ಜನರೇ ಸೂಕ್ತ ದಾರಿ ತೋರಿಸುತ್ತಾರೆ.
ದೇವೇಗೌಡರ ಬಗ್ಗೆ ಹತ್ತು ವರ್ಷಗಳಿಂದ ಜೊತೆ ಇದ್ದು ತಿಳಿದುಕೊಂಡಿದ್ದೇನೆ.ದಿನಾ ಬೆಳಿಗ್ಗೆ ಎದ್ದು ನೀರು ಕುಡಿಯದೆ ದೇವರ ಮುಂದೆ ಕೂತು ಹದಿನೇಳು ಗ್ರಂಥ ಪಠಣ ಮಾಡುತ್ತಾರೆ.ಗುರು ಸಮಾನರಾದ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ.
ಅವರ ಬಗ್ಗೆ ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಳ ಅಷ್ಟೇ ಏಕೆ,ಓಮನ್,ಮಸ್ಕಟ್,ದುಬೈಗೆ ಹೋಗಿ ಕೇಳು ಗೊತ್ತಾಗುತ್ತದೆ. ಬಾವಿಯಲ್ಲಿರುವ ಕಪ್ಪೆ ರಾಜಣ್ಣ ನೀನು, ಸಮುದ್ರದಲ್ಲಿರುವ ದೇವೇಗೌಡರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿರುವ ಅವರು ಹೋಗಿ ದೇವೇಗೌಡರ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಎಚ್ಚರಿಕೆ ನೀಡಿದ್ದಾರೆ.