ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಸಮೀಪ ಅಶೋಕ್ ಗೌಡ ಪಟೇಲ್ ಅವರಿಗೆ ಸೇರಿದ ಕಲ್ಲು ಗಣಿಗಾರಿಕೆಯನ್ನು ಪ್ರಾರಂಭ ಮಾಡಲು ಮುಂದಾದಾಗ ರೊಚ್ಚಿಗೆದ್ದ ಕನಗನಮರಡಿ ಗ್ರಾಮದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಕ್ರಷರ್ ಒಳಗೆ ನುಗ್ಗಿ, ತೀವ್ರವಾಗಿ ವಿರೋಧಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಮಹಿಳೆಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ರೊಚ್ಚಿಗೆದ್ದ ಮಹಿಳೆಯರು ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಧರಣಿ ನಡೆಸಿ, ತೀವ್ರ ವಿರೋಧ ವ್ಯಕ್ತಪಡಿಸಿದರು. ಕಲ್ಲು ಗಣಿಗಾರಿಕೆಯಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದರೂ ಕೇಳದೆ ಗಣಿಗಾರಿಕೆ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಪ್ರಕಾರ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದಕ್ಕೆ ಅಡ್ಡಿ ಮಾಡಬೇಡಿ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಹಾಗೂ ಹಲವು ರೈತರನ್ನು ಪೊಲೀಸರು ಬಂಧಿಸಿದ್ದರು.
ಅಂದಿನಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಇಂದು ಗಣಿಗಾರಿಕೆ ಪ್ರಾರಂಭಿಸಲು ಅಶೋಕ್ ಗೌಡ ಪಾಟೀಲ್ ಮುಂದಾದಾಗ ಕನಗನಮರಡಿ ಗ್ರಾಮಸ್ಥರು ಹಾಗೂ ಮಹಿಳೆಯರು ಗಣಿಗಾರಿಕೆ ನಡೆಸದಂತೆ ಧರಣಿ ನಡೆಸಿದ್ದಾರೆ.
ಆರೋಪ: ಕನಗನಮರಡಿ ಕಲ್ಲು ಗಣಿಗಾರಿಕೆಗೆ ನಯನ ತಹಶೀಲ್ದಾರ್ ರವರೂ ಶಾಮೀಲಾಗಿದ್ದಾರೆ ಎಂದು ಅನೇಕರು ದೂರಿದ್ದಾರೆ. ಕಲ್ಲು ಗಣಿಗಾರಿಕೆ ವಿರುದ್ದ ನೆಡೆಸುತ್ತಿರುವ ತೀವ್ರ ಧರಣಿ ಮತ್ತು ಹೋರಾಟವನ್ನು ಲೆಕ್ಕಿಸದೇ ಗಣಿಗಾರಿಕೆಯ ಪರವಾಗಿ ಇರುವುದು ಸರಿಯಾದ ಕ್ರಮವಲ್ಲ ಎಂದು ಡಾ. ರವೀಂದ್ರ ಆರೋಪಿಸಿದ್ದರು.
ಇವರಿಗೆ ಪರಿಸರದ ಬಗ್ಗೆ ಮತ್ತು ಗ್ರಾಮಸ್ಥರ ಹೋರಾಟದಪರ ಕಾಳಜಿ ಇಲ್ಲ ಎಂದು ಅನೇಕರು ಟೀಕಿಸಿದ್ದಾರೆ.