ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಅವರ ಜೀವನ ಚರಿತ್ರೆಯನ್ನು ಮುಂದಿನ ತಲೆಮಾರಿಗೂ ತಲುಪಿಸಲು ಜಾನಪದ ಕಲೆ ಸಹಕಾರಿಯಾಗಿದೆ ಎಂದು ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಹಾಗೂ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧಿಪತಿ ವರ್ಚಸ್ವಿ ಎಂ.ಎಲ್. ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ತಿಳಿಸಿದರು.
ಮಳವಳ್ಳಿ ಕೀರ್ತಿನಗರದ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ ಪುಣ್ಯಕ್ಷೇತ್ರದ ಹೊನ್ನಾಯಕನಹಳ್ಳಿ ಬೋರೆಯಲ್ಲಿ ನಡೆದ ಶ್ರೀ ಗುರುಸಿದ್ದಪ್ಪಾಜಿ ಸೇವೆಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಜಾನಪದ ಸಂಸ್ಕೃತಿ ಸೌರಭ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಟೇಸ್ವಾಮಿ ಸಿದ್ದಪ್ಪಾಜಿ ಅವರು ಸಮಾಜದ ಸುಧಾರಣೆ ಹಾಗೂ ಸಾಮಾಜಿಕ ಜಾಗೃತಿಗಾಗಿ ಹೋರಾಟ ಮಾಡಿ ಸಮ ಸಮಾಜವನ್ನು ಕಟ್ಟುವ ಕನಸು ಕಂಡಿದ್ದರು. ಎಲ್ಲಾ ವರ್ಗದ ಜನರು ಚೆನ್ನಾಗಿ ಬದುಕಬೇಕೆಂಬುವುದು ಈ ಸ್ಥಳದ ಮಹಿಮೆಯಾಗಿದೆ ಎಂದರು.
ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ಅವರ ಇತಿಹಾಸ ಮತ್ತು ಜೀವನ ಚರಿತ್ರೆಯನ್ನು ಜಾನಪದ ಕಥೆಯಲ್ಲಿ ಕೇಳಬಹುದಾಗಿದೆ. ನೀಲಗಾರರ ಬಾಯಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿಯ ಹಾಡುಗಳು ಉತ್ತಮವಾಗಿ ಮೂಡಿ ಬರುತ್ತದೆ. ಬಾಯಿಂದ ಬಾಯಿಗೆ ಬಂದ ಜಾನಪದ ಕಲೆ ಎಂದೆಂದಿಗೂ ಜೀವಂತವಾಗಿರುತ್ತದೆ ಎಂದು ಹೇಳಿದರು.
ಆಧುನಿಕ ಯುಗದ ಪ್ರಸ್ತುತ ಸಂದರ್ಭದಲ್ಲಿ ಜಾನಪದ ಕಲೆ ಮತ್ತು ಕಲಾವಿದರನ್ನು ಸರ್ಕಾರ ಮತ್ತು ಸಾರ್ವಜನಿಕರು ಪೋಷಿಸಿ ಬೆಳೆಸಬೇಕಿದೆ.ಜಾನಪದ ಕಲೆಯಲ್ಲಿ ಮಳವಳ್ಳಿ ಮಹದೇವಸ್ವಾಮಿ ಉತ್ತಮ ಸಾಧನೆ ಮಾಡಿದ್ದಾರೆ, ಜಾನಪದ ಉಳಿವಿಗೆ ತಮ್ಮ ಪ್ರೋತ್ಸಾಹ ಮತ್ತು ಸಹಕಾರ ಸದಾ ಇರುತ್ತದೆ. ಮಹದೇವಸ್ವಾಮಿಯಂತಹ ನೂರಾರು ಕಲಾವಿದರ ಹುಟ್ಟಿಬರಲಿ ಎಂದು ಆಶೀಸಿದರು.
ಪರಿಸರ ಸಂರಕ್ಷಣೆಗಾಗಿ ಪ್ರಾಸ್ಲಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕಿದೆ. ಈಗಾಗಲೇ ಮಠಾಧಿಪತಿಗಳು, ಸಿನಿಮಾ ನಟರು ಸೇರಿದಂತೆ ಹಲವರು ಮಂದಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ, ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ದೇಶವನ್ನು ಪ್ಲಾಸ್ಟಿಕ್ ಮುಕ್ತ ರಾಷ್ಟ್ರವಾಗಿಸಲು ಸಾಧ್ಯವಾಗುತ್ತದೆ ಎಂದರು.
ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಳವಳ್ಳಿ ಮಹದೇವಸ್ವಾಮಿ ಮಾತನಾಡಿ, ಕುಟುಂಬದ ನಿರ್ವಹಣೆಗಾಗಿ ಕಲಿತ ಜಾನಪದ ಕಲೆ ಉತ್ತಮ ಸ್ಥಾನಮಾನ ಕೊಟ್ಟಿದೆ. ಮಹದೇಶ್ವರ, ಮಂಟೇಸ್ವಾಮಿ,ಸಿದ್ದಪ್ಪಾಜಿ ಅವರನ್ನು ನಂಬಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡಿದ್ದಕ್ಕೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಬ್ಯಾಡರಹಳ್ಳಿ ಶಿವಕುಮಾರ್, ಆನಂದ, ಕೈಲಾಸಮೂರ್ತಿ, ಮಂಜುಳ ಸೇರಿದಂತೆ ಹಲವು ಗಾಯಕರು ಜಾನಪದ ಗೀತೆಗನ್ನು ಹಾಡುವುದರ ಮೂಲಕ ಗಮನ ಸೆಳೆದರು.
ಮಂಟೇಸ್ವಾಮಿ ಮಠದ ಅಧ್ಯಕ್ಷರಾದ ಪ್ರಕಾಶ್, ವೆಂಕಟೇಗೌಡ, ಅಂತರಾಷ್ಟೀಯ ತಮಟೆ ಕಲಾವಿದ ಗುಂಡ, ಸೇರಿದಂತೆ ಇತರರು ಇದ್ದರು.