ಮಂಡ್ಯ ನಗರದ ಗುತ್ತಲು ಬಡಾವಣೆ ನಿವಾಸಿ, ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ವಿದ್ಯುತ್ ಶಾಕ್‌ನಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪಿಇಎಸ್ ಕಾಲೇಜಿನಲ್ಲಿ ಓದುತ್ತಿರುವ ವಿಶ್ವಾಸ್ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ಮಗನಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಸ್ನೇಹಿತನಿಗಾಗಿ ವಿದ್ಯಾರ್ಥಿಗಳು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿ ಮಗ ವಿಶ್ವಾಸ್, ನಗರದ ಪಿಇಎಸ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಓದಿನ ಜತೆಗೆ ಫುಟ್ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದಾನೆ.
ಜು.1ರಂದು ಸ್ವರ್ಣ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್ಬಾಲ್ ಕ್ರೀಡೆಯಲ್ಲಿ ತೊಡಗಬೇಕಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್ ಜು.1ರಂದು ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ.
ಇದರಿಂದಾಗಿ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಿದ್ಯುತ್ ದುರಂತಕ್ಕೆ ಒಳಗಾಗಿರುವ ವಿಶ್ವಾಸ್ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿದ್ದು, ಕೋಮಾ ಸ್ಥಿತಿಯಲ್ಲಿದ್ದಾನೆ. ವಿಶ್ವಾಸ್ ಚಿಕಿತ್ಸೆಗೆ ದಿನವೊಂದಕ್ಕೆ ಸಾವಿರಾರು ರೂ. ವೆಚ್ಚ ತಗುಲುತ್ತಿದೆ. ಇತ್ತ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಗ್ರಹಿಸಿ ಚಿಕಿತ್ಸೆಗೆಂದು ನೀಡುತ್ತಿದ್ದಾರೆ.
ಅಂತೆಯೇ ಪುಟ್ಬಾಲ್ ಕ್ಲಬ್‌ಗಳು ಕೂಡ ಆರ್ಥಿಕ ನೆರವು ಕೊಡುತ್ತಿವೆ. ಆದರೂ ಇನ್ನಷ್ಟು ಹಣದ ಅವಶ್ಯಕತೆ ಇದೆ. ಆದ್ದರಿಂದ ಸಹಾಯ ಮಾಡುವವರು ಬ್ಯಾಂಕ್ ಖಾತೆ ಸಂಖ್ಯೆ-17202610002717(ಐಎಫ್‌ಎಸ್‌ಸಿ ಕೋಡ್-SYNB೦೦೦1720), ಫೋನ್ ಪೇ ಅಥವಾ ಗೂಗಲ್ ಪೇ ಸಂಖ್ಯೆ – 9900201307 (ಅಶ್ವಿನಿ) ಹಣ ಕಳುಹಿಸಬಹುದು.
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪ್ರತಿಭಾವಂತ ಯುವ ಪ್ರತಿಭೆ ವಿಶ್ವಾಸ್ ಚಿಕಿತ್ಸೆಗೆ ನೆರವಾಗಬೇಕೆಂದು ಕುಟುಂಬದವರು ಹಾಗೂ ಸ್ನೇಹಿತರು ಮನವಿ ಮಾಡಿದ್ದಾರೆ.