Saturday, June 15, 2024

ಪ್ರಾಯೋಗಿಕ ಆವೃತ್ತಿ

ಬಡಜನರ ಆರ್ಥಿಕ ಸದೃಢತೆಗೆ ಕೇಂದ್ರದ ಯೋಜನೆಗಳು ಸಹಕಾರಿ

ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರದ ಯೋಜನೆಗಳು ಸಹಕಾರಿಯಾಗಿದೆ ಎಂದು ಕೇಂದ್ರದ ಇಂಧನ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಖಾತೆ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಯಗಳ ಫಲಾನುಭವಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ 11 ಕೋಟಿಗಿಂತ ಹೆಚ್ಚು ರೈತರಿಗೆ ವಾರ್ಷಿಕವಾಗಿ ರೂ.6,000 ಸಹಾಯಧನ ನೀಡಲಾಗುತ್ತಿದೆ. ಇದು ನೇರವಾಗಿ ರೈತರ ಖಾತೆಗೆ ಪಾವತಿಯಾಗುತ್ತಿದೆ. ಇದಕ್ಕಾಗಿ ರೈತರು ಯಾವುದೇ ಕಚೇರಿ ಅಥವಾ ದಲ್ಲಾಳಿಗಳ ಬಳಿ ಅಲೆದಾಡಬೇಕಿಲ್ಲ. ಪ್ರಧಾನ ಮಂತ್ರಿ ಅವರು ಕೋಟ್ಯಾಂತರ ಜನರಿಗೆ ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ತೆರೆಯುವಂತೆ ಮಾಡಿ ಆರ್ಥಿಕವಾಗಿ ಸದೃಢರಾಗಲು ಕಾರಣರಾಗಿದ್ದಾರೆ ಎಂದರು.

ಪ್ರಧಾನಿಯವರು ಸಾರ್ವಜನಿಕರಿಂದ ಖಾತೆ ತೆರೆಯುವಂತೆ ಪ್ರೇರೆಪಿಸಿದಾಗ ಯಾರಿಗೂ ಇದರ ಉಪಯುಕ್ತತತೆ ಬಗ್ಗೆ ತಿಳಿದಿರಲಿಲ್ಲ. ಈ ಖಾತೆ ತೆರೆಯುವುದು ಮೋದಿ ಅವರ ದೂರದೃಷ್ಠಿಯಾಗಿತ್ತು. ಸಾರ್ವಜನಿಕರಿಗೆ ನೀಡಲಾಗುವ ಸಹಾಯಧನ ಅಥವಾ ಯಾವುದೇ ಯೋಜನೆಯ ಲಾಭವಾಗಲಿ ನೇರವಾಗಿ ಶೇ. 100 ರಷ್ಟು ಫಲಾನುಭವಿಗೆ ತಲುಪಬೇಕು ಎಂಬುದು ಅವರ ಉದ್ದೇಶವಾಗಿತ್ತು.
ಇಂದು ನಡೆದ ಸಂವಾದದಲ್ಲಿ ಫಲಾನುಭವಿಗಳು ಸಹ ತಮಗೆ ಸಿಕ್ಕಿರುವ ಯೋಜನೆಯ ಶೇ. 100 ರಷ್ಟು ಸಹಾಯಧನ ದೊರಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಮಾನ್ಯ ಪ್ರಧಾನ ಮಂತ್ರಿಗಳು ತೋರಿಸಿದ್ದಾರೆ ಎಂದರು.

ಕೋವಿಡ್‌ನಂತಹ ಪರಿಸ್ಥಿತಿಯಲ್ಲಿ ದೇಶದ 20 ಕೋಟಿ ಮಹಿಳೆಯರಿಗೆ 3 ತಿಂಗಳು ಕಾಲ ನೀಡಲಾದ ರೂ.500 ಅವರ ಖಾತೆಗೆ ಸರಿಯಾದ ಸಮಯದಲ್ಲಿ ಒಂದು ರೂಪಾಯಿ ಕೂಡ ಕಡಿಮೆಯಾಗದಂತೆ ತಲುಪಿದೆ.ಇದು ಜನ್ ಧನ್ ಯೋಜನೆಯಡಿ ಖಾತೆ ತೆರೆದ ಅನುಕೂಲತೆ ಎಂದರು.

ಗಭೀರ್ಣಿ ಸ್ತ್ರೀಯರು ತಮ್ಮ ಮಕ್ಕಳ ಭವಿಷ್ಯ ಹಾಗೂ ಬೆಳವಣಿಗೆಯ ಬಗ್ಗೆ ಯೋಚಿಸುತ್ತಾರೆ. ಇದಕ್ಕಾಗಿ ಪ್ರಧಾನ ಮಂತ್ರಿಗಳು ಮಾತೃ ವಂದನಾ ಯೋಜನೆಯನ್ನು ಜಾರಿಗೆ ತಂದು ಗಭೀರ್ಣಿ ಸ್ತ್ರೀಯರಿಗೆ ಸಹಾಯಧನ ಒದಗಿಸಿ ತಾಯಿಯ ಗರ್ಭದಲ್ಲೇ ಮಗು ಇರುವಾಗಲೇ ಪೌಷ್ಟಿಕ ಆಹಾರ ಪಡೆಯುವಂತೆ ಮಾಡಿದರು ಎಂದು ಹೇಳಿದರು.

ಆಯುಷ್ಮಾನ ಭಾರತ್ ಯೋಜನೆಯಡಿ 10 ಕೋಟಿ ಕುಟುಂಬದವರಿಗೆ 5 ಲಕ್ಷ ದವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬಡವರು ಉನ್ನತ ರೀತಿಯ ಚಿಕಿತ್ಸೆ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ 9 ಕೋಟಿ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ನೀಡಲಾಗಿದೆ.2024 ರ ವೇಳೆಗೆ ಎಲ್ಲಾ ಗ್ರಾಮಗಳಲ್ಲಿ ಮನೆಗಳಿಗೆ ಜಲ್ ಜೀವನ್ ಮಿಷನ್ ಯೋಜನೆಯಡಿ ನಲ್ಲಿ ಒದಗಿಸಲಾಗುವುದು.ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿಗೂ ಹೆಚ್ಚಿನ ಬಡವರಿಗೆ ಸೂರು ಕಲ್ಪಿಸಲಾಗಿದೆ ಎಂದರು.

ಫಸಲ್ ಭೀಮಾ ಯೋಜನೆಯಡಿ ಮೊದಲು ವಿಮೆಯ 6 ರಿಂದ 8 % ಪ್ರೀಮಿಯಂ ಹಣವನ್ನು ರೈತರು ಪಾವತಿಸಬೇಕಿತ್ತು. ಪ್ರಧಾನಮಂತ್ರಿಗಳು ಇದು ರೈತರಿಗೆ ಕಷ್ಟಕರವಾಗುತ್ತದೆ ಎಂದು ವಿಮೆಯ ಪ್ರೀಮಿಯಂ ಮೊತ್ತವನ್ನು ಇಳಿಕೆ ಮಾಡಿದ್ದಾರೆ. ಇದರಿಂದ ವಿಮೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಒಂದು ದೇಶ ಒಂದು ಪಡಿತರ ಚೀಟಿ ಈ ಯೋಜನೆಯಿಂದ ವಲಸೆ ಹೋಗುವ ಕಾರ್ಮಿಕರಿಗೆ ಹೆಚ್ಚು ಉಪಯುಕ್ತವಾಗಿದೆ. ಜನರು ಒಂದು ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋದರೆ ಅಲ್ಲಿ ಹೊಸ ಪಡಿತರ ಚೀಟಿ ಪಡೆಯುಲು ಅಲೆದಾಡಬೇಕಿಲ್ಲ. ತಮ್ಮಲ್ಲಿರುವ ಪಡಿತರ ಚೀಟಿಯಲ್ಲೇ ಆಹಾರ ಧಾನ್ಯ ಪಡೆದುಕೊಳ್ಳಬಹುದು ಎಂದರು.

ಕೋವಿಡ್ ನಿಂದ ಇಡೀ ವಿಶ್ವವೇ ತತ್ತರಿಸಿದ ಸಂದರ್ಭದಲ್ಲಿ ಮುಂದುವರೆದ ದೇಶಗಳೊಂದಿಗೆ ಭಾರತ ದೇಶವು ಕಡಿಮೆ ಇಲ್ಲ ಎನ್ನುವ ಹಾಗೆ ಎರಡು ವ್ಯಾಕ್ಸಿನ್ ಗಳನ್ನು ತಯಾರಿಸಿ 130 ಕೋಟಿ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಿದೆ. ಮಾಸ್ಕ್ ಇಲ್ಲದೆ ಬಹಳಷ್ಟು ಜನರು ಇಂದು ಓಡಾಡುತ್ತಾರೆ ಅದಕ್ಕೆ ಕಾರಣ ನಮ್ಮ ವ್ಯಾಕ್ಸಿನ್. ಪ್ರಧಾನ ಮಂತ್ರಿಗಳು ದೇಶದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ ಎಂದರು.

ಲತಾ ಇಂದು ಉದ್ಧೋಗದಾತೆ

ಮಂಡ್ಯ ತಾಲ್ಲೂಕಿನ ಲತಾ ಎಂಬ ಮಹಿಳೆ ಟೈಲರಿಂಗ್ ತರಬೇತಿ ಪಡೆದು ಕೆಲಸ ಮಾಡುತ್ತಿದ್ದು ಇಂದು ಸ್ಟಾಂಡ್ ಅಪ್ ಇಂಡಿಯಾ ಮೂಲಕ 1 ಕೋಟಿ ಸಾಲವನ್ನು ಲೀಡ್ ಬ್ಯಾಂಕ್‌ ನಿಂದ ಪಡೆದು ಗಾರ್ಮೆಂಟ್ ಪ್ರಾರಂಭಿಸುತ್ತಿದ್ದಾರೆ.ಸ್ವಾವಲಂಬಿಯಾಗಿ ಜೀವನ ನಡೆಸುತ್ತ ಹಲವು ಮಹಿಳೆಯರಿಗೆ ಉದ್ಯೋಗ ನೀಡಿದ್ದೇನೆ ಎಂದು ತಮ್ಮ ಅನಿಸಿಕೆಯನ್ನು ಲತಾ ಹಂಚಿಕೊಂಡರು.

ತೆಲಂಗಾಣದ ಪಡಿತರ ಚೀಟಿಗೆ ಮಂಡ್ಯದಲ್ಲಿ ಆಹಾರ ಧಾನ್ಯ

ತೆಲಂಗಾಣದ ನಿವಾಸಿ ಅನೀಫ್ ಅವರು ಚಿಕ್ಕ ಮಂಡ್ಯದಲ್ಲಿ ಈಗ ವಾಸವಾಗಿದ್ದು,ಯಾವುದೇ ತೊಂದರೆ ಇಲ್ಲದೇ ತೆಲಂಗಾಣದ ಪಡಿತರ ಚೀಟಿಯನ್ನು ಉಪಯೋಗಿಸಿಕೊಂಡು ಚಿಕ್ಕ ಮಂಡ್ಯದಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆಯುತ್ತಿರುವುದಾಗಿ ತಿಳಿಸಿದರು.

ವಿಕಲಚೇತನ ಮಗುವಿಗೆ ಶಸ್ತ್ರಚಕಿತ್ಸೆ

ಆಯುಷ್ಮಾನ್ ಆರೋಗ್ಯ ಕಾರ್ಡ್ ಇರುವ ಹಿನ್ನಲೆಯಲ್ಲಿ ಕಿವುಡತನದಿಂದ ಬಳಲುತ್ತಿದ್ದ ತೇಜಸ್ ಎಂಬ ಆರು ವರ್ಷದ ಬಾಲಕ 10-12 ಲಕ್ಷ ರೂ ವೆಚ್ಚವಾಗುತ್ತಿದ್ದ ಶಸ್ತ್ರಚಕಿತ್ಸೆಯನ್ನು ಉಚಿತವಾಗಿ ಪಡೆದು ಇಂದು ಆರೋಗ್ಯಕರವಾಗಿ ಮಾತನಾಡಬಲ್ಲ ಹಾಗೂ ಎಲ್ಲವನ್ನೂ ಕೇಳಿಸಿಕೊಳ್ಳಬಲ್ಲ ಮಗುವಾಗಿದ್ದಾನೆ. ಇದಕ್ಕೆ ಅವರ ತಾಯಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಂದನೆಗಳನ್ನು ಸಲ್ಲಿಸಿದರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಮಾತನಾಡಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ನೀಡಿರುವ ಅನೇಕ ಯೋಜನೆಗಳು ಜನರಿಗೆ ತಲುಪಿದೆಯೋ ಇಲ್ಲವೂ ಎಂಬುವುದನ್ನು ತಿಳಿಯಲು ಮಂಡ್ಯ ಜಿಲ್ಲೆಯಲ್ಲಿ 3ದಿನಗಳ ಕಾಲ ಕಾರ್ಯಕ್ರಮ ಮಾಡುತ್ತಿದ್ದೇವೆ. ಫಲಾನುಭವಿಗಳ ಜೊತೆ ಸಂವಾದ ಮಾಡಿ ಅವರ ಸಮಸ್ಯೆಗಳನ್ನು ತಿಳಿಯುವುದೇ ಈ ಕಾರ್ಯ ಕ್ರಮದ ಉದ್ದೇಶ ಎಂದರು.

ದೇಶವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು, ಕಡುಬಡವರಿಗೆ ಸಹಾಯ ಮಾಡಬೇಕು. ಎಂಬ ಉದ್ದೇಶದಿಂದ 18-20 ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ರೇಷ್ಮ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ. ಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿ.ಪಂ. ಮುಖ್ಯಕಾರ್ಯನಿರ್ವಾಹಕಾಧಿಕಾರಿ ದಿವ್ಯಾಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!