ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಯಾವುದೇ ಖಾಯಿಲೆ ಬರದೆ, ಉತ್ತಮ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ತಿಳಿಸಿದರು.
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾರತ ಸರ್ಕಾರ, ಆಯುಷ್ ಸಚಿವಾಲಯ, ಕರ್ನಾಟಕ ಸರ್ಕಾರ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಯೋಗ ನಿರತ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಯೋಗಿಗಳು, ಋಷಿ ಮುನಿಗಳು ಯೋಗವನ್ನು ಹೆಚ್ಚಾಗಿ ಅಳವಡಿಸಿಕೊಂಡು 125ಕ್ಕೂ ಹೆಚ್ಚು ವರ್ಷಗಳು ಬದುಕಿದ್ದಾರೆ. ಅದಕ್ಕೆ ಯೋಗವೇ ಕಾರಣ. ಹಾಗಾಗಿ ನಾವೆಲ್ಲರೂ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿ ಶಕ್ತಿ ತುಂಬಬೇಕಿದೆ ಎಂದರು.
ಶ್ರೀರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ 8ನೇ ಅಂತರಾಷ್ಟ್ರೀಯ ಯೋಗ ಆಯೋಜನೆಗೊಂಡಿರುವುದು ಅತ್ಯಂತ ಸಂತೋಷ ತಂದಿದೆ. ಜನರು ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು.ಹಾಗಾಗಿ ನಿರಂತರವಾಗಿ ಯೋಗಾಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ,ಜಿ.ಪಂ.ದಿವ್ಯಾಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ತಹಶೀಲ್ದಾರ್ ಗಳಾದ ಶ್ವೇತ ಎನ್.ರವೀಂದ್ರ, ನಯನ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ,ಯೋಗ ಶಿಕ್ಷಕರಾದ ಶಂಕರ ನಾರಾಯಣ ಶಾಸ್ತ್ರಿ, ಪುರಸಭೆ ಉಪಾಧ್ಯಕ್ಷರಾದ ಎಂ.ಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಋತ್ರನ್, ಹಿರಿಯ ಮುಖಂಡರಾದ ಡಾ.ಸಿದ್ದರಾಮಯ್ಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಯೋಗ ಮಾಡಿದರು.