ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ.ಮಹಿಳೆಗೆ ಮೀಸಲಾಗಿದ್ದು, ಹಿಂದುಳಿದ ವರ್ಗ ಬಿ.ಮಹಿಳಾ ಮೀಸಲಾತಿ ಕ್ಷೇತ್ರದಿಂದ ಗೆದ್ದಿರುವ ಏಕೈಕ ಅಭ್ಯರ್ಥಿಯಾದ ನನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸದಸ್ಯೆ ರಾಜೇಶ್ವರಿ ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 2020ರ ಡಿಸೆಂಬರ್ ತಿಂಗಳಲ್ಲಿ ನಡೆದ ಬೂಕನಕೆರೆ ಗ್ರಾ.ಪಂ.ಚುನಾವಣೆಯಲ್ಲಿ ರಾಜೇಶ್ವರಿಯಾದ ನಾನು ಬೂಕನಕೆರೆ ಮೊದಲನೇ ಬ್ಲಾಕ್ ನಲ್ಲಿ ಹಿಂದುಳಿದ ವರ್ಗ ಬಿ ಮಹಿಳೆ (ಮೀಸಲಾತಿ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವಿರೋಧವಾಗಿ ಅಯ್ಕೆಯಾಗಿರುತ್ತೇನೆ.
ಪಂಚಾಯತಿಯ ಒಟ್ಟು ಸದಸ್ಯರ ಬಲ 19 ಆಗಿರುತ್ತದೆ. ಕಳೆದ 15 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾತಿ ಇದ್ದರೂ ಸಹ ಅಧ್ಯಕ್ಷ ಸ್ಥಾನಕ್ಕೆ ನನ್ನ ಜೊತೆಗೆ ನಾಮಪತ್ರ ಸಲ್ಲಿಸಿದ ಸಾಮಾನ್ಯ ಮಹಿಳೆಯ ನಾಮಪತ್ರವನ್ನು ತಿರಸ್ಕರಿಸಿ ಏಕೈಕ ಹಿಂದುಳಿದ ವರ್ಗ.ಬಿ. ಮಹಿಳೆಯಾದ ನನ್ನ ನಾಮಪತ್ರವನ್ನು ಅಂಗೀಕರಿಸಿ ಅವಿರೋಧವಾಗಿ ಅಧ್ಯಕ್ಷ ಸ್ಥಾನವನ್ನು ನೀಡಬೇಕಾಗಿತ್ತು.
ಚುನಾವಣಾಧಿಕಾರಿಗಳು ಹಿಂದುಳಿದ ವರ್ಗ ಬಿ. ಮಹಿಳೆ ಇಲ್ಲದ ಸಮಯದಲ್ಲಿ ಮಾತ್ರ ಸಾಮಾನ್ಯ ವರ್ಗದ ನಾಮಪತ್ರವನ್ನು ಅಂದರೆ 3ಎ ವರ್ಗದ ನಾಮಪತ್ರ ಅಂಗೀಕರಿಸಲು ಅವಕಾಶವಿದೆ. ಆದರೆ ಚುನಾವಣಾಧಿಕಾರಿಗಳು ಮೀಸಲಾತಿ ಇರುವ ಏಕೈಕ ಅಭ್ಯರ್ಥಿಯಾದ ನಾನಿದ್ದರೂ ಸಹ, 3ಎ ವರ್ಗದ ಅಭ್ಯರ್ಥಿಗಳಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಸಂವಿಧಾನ ಬದ್ದವಾದ ಮೀಸಲಾತಿಗೆ ಅನ್ಯಾಯ ಮಾಡಿದ್ದಾರೆ.
ಈ ಅನ್ಯಾಯವನ್ನು ಪ್ರಶ್ನಿಸಿ ಕೃಷ್ಣರಾಜಪೇಟೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಪ್ರಕರಣವು ವಿಚಾರಣೆ ಹಂತದಲ್ಲಿದೆ. ಆದರೆ ಕಳೆದ ಸಲ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ಅವರು ಈಗ ರಾಜೀನಾಮೆ ಸಲ್ಲಿಸಿರುವ ಕಾರಣ ಇದೇ ಜೂನ್.27ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ನನ್ನ ಮೀಸಲಾತಿ ಪ್ರಕಾರ ಬೂಕನಕೆರೆ ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಬೇಕು ಎಂದು ಚುನಾವಣಾಧಿಕಾರಿಗಳನ್ನು ಒತ್ತಾಯ ಮಾಡಿದರು.