ಸರ್ಕಾರವು ರಂಗ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಐತಿಹಾಸಿಕ ರಂಗಕಲೆಯನ್ನು ಉಳಿಸಬಹುದು ಎಂದು ನಾಡಪ್ರಭು ಕೆಂಪೇಗೌಡ ಸಂಘದ ಅಧ್ಯಕ್ಷ ಜೇಡರಹಳ್ಳಿ ಕೃಷ್ಣಪ್ಪ ಒತ್ತಾಯಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ನಾಡಪ್ರಭು ಕೆಂಪೇಗೌಡ ರಂಗಭೂಮಿ ಕಲಾವಿದರ ಸೇವಾ ಟ್ರಸ್ಟ್ ವತಿಯಿಂದ 513 ನೇ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಮತ್ತು ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಟಕ ಕಲಾವಿದರು ಹಣ ಮಾಡಲು ಸಾಧ್ಯವಿಲ್ಲ, ಸಂಸ್ಕೃತಿ ಉಳಿಸಿ ಬೆಳೆಸಬಹುದಷ್ಟೆ. ಇಂದು ನಾಟಕ ಕಲೆಗಳು ನಶಿಸುತ್ತಿರುವ ವೇಳೆಯಲ್ಲಿ ಕೆಂಪೇಗೌಡರ ಜಯಂತಿ ಅಂಗವಾಗಿ ವಾರ ಪೂರ್ತಿ ನಾಟಕಗಳನ್ನು ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾಟಕ ಕಲೆ ಗಂಡು ಕಲೆ, ನೈಜ ಕಲೆಯಾಗಿದೆ. ಸಾಮರ್ಥ್ಯ ಇದ್ದವರಿಗೆ ಮಾತ್ರ ನಾಟಕ ಕಲೆ ಒಲಿಯುತ್ತದೆ. ಸಿನಿಮಾ ಮತ್ತು ಧಾರವಾಹಿಗಳಲ್ಲಿ ಯಾರು ಬೇಕಾದರೂ ನಟಿಸಬಹುದು. ಸಿನಿಮಾದ ಕೆಲವು ದೃಶ್ಯಗಳಲ್ಲಿ ಸ್ಟಂಟ್ ಆ್ಯಕ್ಷನ್ ಗಳನ್ನ ತೋರಿಸಿ ಪ್ರೇಕ್ಷರನ್ನು ರಂಜಿಸಲು ಮುಂದಾಗುತ್ತಾರೆ. ಆದರೆ ನಾಟಕ ಕಲೆಗಳಲ್ಲೇ ನೈಜ ಕಲೆಯಾಗಿದೆ. ಇಂತಹ ರಂಗ ಕಲೆಗಳಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದರು.
ನಾಡಪ್ರಭು ಕೆಂಪೇಗೌಡರ ರಂಗಭೂಮಿ ಕಲಾವಿದರ ಸೇವಾಟ್ರಸ್ಟ್ ಅಧ್ಯಕ್ಷ ಶೆಟ್ಟಹಳ್ಳಿ ದ್ಯಾಪೇಗೌಡ, ಟ್ರಸ್ಟ್ ಸಂಚಾಲಕ ಲೋಕೇಶ್, ಚಿಕ್ಕತಿಮ್ಮೇಗೌಡ, ದೇವರಹಳ್ಳಿ ವೆಂಕಟೇಶ್ ಅಣ್ಣೂರು ಯೋಗೇಂದ್ರ ಟ್ರಸ್ಟ್ ಕಾರ್ಯದರ್ಶಿ ಎಚ್. ಶ್ರೀನಿವಾಸ್ ಗೌಡ ತೊರೆಚಾಕನಹಳ್ಳಿ ಶಂಕರೇಗೌಡ, ಯಾಲಕ್ಕಿಗೌಡ, ನಾಗರಾಜು, ಕೆ.ಪಿ.ದೊಡ್ಡಿ ದೇವರಾಜು, ಪಿ.ಕೆ.ಜಯರಾಮು, ರವಿ, ಸ್ವಾಮಿ, ತಮ್ಮಯ್ಯ, ಅಮರ್ ಸೇರಿದಂತೆ ಇತರರಿದ್ದರು.