ನಾನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ನನಗೆ ಸರ್ಕಾರಿ ಶಾಲೆಗೆ ಓದಲು ಬರುವ ಮಕ್ಕಳ ಹಾಗೂ ಪೋಷಕರ ಕಷ್ಟ ಗೊತ್ತಿದೆ ಎಂದು ಉದ್ಯಮಿ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು, ಕೂಳಗೆರೆ ಸೇರಿದಂತೆ ಹಲವು ಗ್ರಾಮಗಳ ಕಿರಿಯ,ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್ ಹಾಗೂ ಪಠ್ಯೇತರ ಪರಿಕರಗಳನ್ನು ತಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ವಿತರಿಸಿ ಅವರು ಮಾತಾನಾಡಿದರು.
ನಾನು ಸರ್ಕಾರಿ ಶಾಲೆಯಲ್ಲೆ ಓದಿದ್ದೇನೆ.ಹಳ್ಳಿಗಳ ಬಡ ರೈತರು,ಕೃಷಿ ಕೂಲಿಕಾರರ ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ನನಗೂ ಸರ್ಕಾರಿ ಶಾಲಾ ಮಕ್ಕಳು ಹಾಗೂ ಅವರ ಕಷ್ಟ ಚೆನ್ನಾಗಿ ಗೊತ್ತು. ಆದ್ದರಿಂದಲೇ ಮದ್ದೂರು ತಾಲ್ಲೂಕಿನ 15,000 ಸಾವಿರ ಮಕ್ಕಳಿಗೆ ಅನೂಕೂಲವಾಗಲೆಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ.
ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಚೆನ್ನಾಗಿ ಓದಿ ವಿದ್ಯಾವಂತರಾಗ ಬೇಕೆಂದರು.ಮಕ್ಕಳು ಮೊಬೈಲ್ ಮೊರೆ ಹೋಗದೆ ಓದಿನ ಕಡೆ ಗಮನ ಕೊಡಬೇಕು. ಉತ್ತಮ ಅಂಕ ಗಳಿಸಿದರೆ ಉತ್ತಮ ಕೆಲಸ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನ ಸಿಗಲಿದೆ ಎಂದು ಕಿವಿ ಮಾತು ಹೇಳಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಸಿಪಾಯಿ ಶ್ರೀನಿವಾಸ ಮಾತನಾಡಿ, ಕದಲೂರು ಉದಯ್ ಅವರು ಸಾಕಷ್ಟು ಸಮಾಜ ಸೇವೆಗಳನ್ನು ಮಾಡುತ್ತ ಬಂದಿದ್ದಾರೆ . ಬಡ ಮಕ್ಕಳಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ತಾಲ್ಲೂಕಿನ ಅಂಗನವಾಡಿ, ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ನೋಟ್ ಬುಕ್, ಬ್ಯಾಗ್ ನೀಡಿದ್ದಾರೆ. ಸರ್ಕಾರಿ ಶಾಲೆಗಳ ಅಧುನೀಕರಣಕ್ಕೂ ಮುಂದಾಗಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಮಾಡಬೇಕೆಂಬ ಇಚ್ಚೆ ಅವರಿಗಿದೆ. ಬಡವರ ನಾಡಿ ಮಿಡಿತ ಅರಿತಿರುವ ಉದಯ್ ಮಕ್ಕಳ ಅನೂಕೂಲಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕದಲೂರು ತಿಮ್ಮೇಗೌಡ, ಗೊರವನಹಳ್ಳಿ ಮಧು,ಅಣ್ಣೂರು ಮನೋಹರ್ ಕರಡಕೆರೆ ಮನು, ಶಿವು, ಯರಗನಹಳ್ಳಿ ಹರೀಶ್, ದಿಗಂತ್, ಶಾಲಾ ಮುಖ್ಯಶಿಕ್ಷಕ ಪ್ರಭಾಕರ್, ಶಿಕ್ಷಕರಾದ ಶಿವಲಿಂಗಯ್ಯ ಸತೀಶ್ ಹಾಜರಿದ್ದರು.