Friday, September 13, 2024

ಪ್ರಾಯೋಗಿಕ ಆವೃತ್ತಿ

ಇಬ್ಬರು ಮಹಿಳೆಯರ ಅರ್ಧ ದೇಹಗಳು ಪತ್ತೆ: ಬೆಚ್ಚಿ ಬಿದ್ದ ಜಿಲ್ಲೆಯ ಜನತೆ

ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಬೀಭತ್ಸವಾಗಿ ಕೊಲೆ ಮಾಡಿ ರುಂಡ ಮುಂಡ ಬೇರೆ ಮಾಡಲಾಗಿದ್ದು, ಮುಂಡ ಮಾತ್ರ ಸಿಕ್ಕಿರುವ ಘಟನೆಯಿಂದ ಜಿಲ್ಲೆಯ ಜನರು ಬೆಚ್ವಿಬಿದ್ದಿದ್ದಾರೆ.

ಪಾಂಡವಪುರ ಟೌನ್ ಪೊಲೀಸ್ ಠಾಣೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಹೊಟ್ಟೆಯ ಕೆಳಗಿನ ಅರ್ಧಭಾಗ ಸಿಕ್ಕಿದ್ದು, ಹೊಟ್ಟೆಯ ಮೇಲ್ಬಾಗ ತಲೆಯ ಭಾಗ ಸಿಕ್ಕಿಲ್ಲ. ಈ ಪ್ರಕರಣದ ಬಗ್ಗೆ ಜನ ಭಯಗೊಂಡಿದ್ದಾರೆ.

ಪಾಂಡವಪುರ ತಾಲೂಕಿನ ಬೇಬಿಕೆರೆ ಹಾಗೂ ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ಬಳಿ 35 ವರ್ಷದ ಮಹಿಳೆಯ ಹೊಟ್ಟೆಯಿಂದ ಕೆಳಭಾಗದ ಶವ ಅರ್ಧ ಕತ್ತರಿಸಿರುವ ರೂಪದಲ್ಲಿ ಸಿಕ್ಕಿದೆ. ಅದೇ ರೀತಿ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದಿರುವ 40 ವರ್ಷದ ಮಹಿಳೆಯ ಅರ್ಧ ಭಾಗದ ದೇಹ ರೈತನ ಜಮೀನಿನಲ್ಲಿ ಸಿಕ್ಕಿದೆ.

ಎರಡು ಪ್ರಕರಣಗಳಲ್ಲಿ ಮಹಿಳೆಯರ ಹೊಟ್ಟೆಯ ಕೆಳಭಾಗದ ದೇಹದ ಕತ್ತರಿಸಿದ ಭಾಗಗಳು ದೊರೆತಿದೆ. ಎರಡೂ ಶವಗಳ ಕಾಲುಗಳನ್ನು ಕಟ್ಟಿ ದೇಹದ ಅರ್ಧಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ದುಷ್ಕರ್ಮಿಗಳು ನೀರಿಗೆ ಎಸೆದು ಹೋಗಿದ್ದಾರೆ.

ಇನ್ನು ಎರಡು ಕಡೆ ಪ್ರತ್ಯೇಕವಾಗಿ ದೇಹದ ಅರ್ಧಭಾಗ ಪತ್ತೆಯಾಗಿರುವ ಮಾಹಿತಿ ಪಡೆದ ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಿಕ್ಕಿರುವ ಎರಡೂ ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದ್ದು, ಬೇರೆಲ್ಲೋ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.ಅಲ್ಲದೆ ಈ ಎರಡು ಶವಗಳ ಉಳಿದರ್ಧ ದೇಹದ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ವಿಶೇಷ ತಂಡ ರಚನೆ

ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಕತ್ತರಿಸಿದ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಎರಡು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಅಲ್ಲದೆ, ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!