ಸುಸಜ್ಜಿತವಾದ ಹಂಪೆಯನ್ನು ನೋಡಿದ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿದರು ಎಂದು ಜಿ.ಪಂ.ಸಿಇಓ ದಿವ್ಯಾಪ್ರಭು ತಿಳಿಸಿದರು.
ಮಂಡ್ಯ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ನಗರವನ್ನು ನಿರ್ಮಾಣ ಮಾಡುವುದು ಸಾಧಾರಣ ವಿಷಯ ಅಲ್ಲ. ತಮ್ಮ ತಂದೆ ಕೆಂಪನಂಜೇಗೌಡರ ಜೊತೆ ಆಗಾಗ ವಿಜಯನಗರ ಸಾಮ್ರಾಜ್ಯ ನೋಡಲು ಹೋಗುತ್ತಿದ್ದ ಕೆಂಪೇಗೌಡರು ಹಂಪೆಯನ್ನು ಕಂಡು ಒಂದು ಸುಸಜ್ಜಿತ ನಗರವನ್ನು ನಿರ್ಮಾಣ ಮಾಡುವ ಕನಸು ಕಂಡಿದ್ದರು.
ಅದರಂತೆ ವಿಜಯನಗರದ ಅರಸರ ಸಹಕಾರ ಪಡೆದು ತಮ್ಮ ಕನಸಿನ ಬೆಂಗಳೂರು ನಗರ ನಿರ್ಮಾಣ ಮಾಡಿದರು ಎಂದು ತಿಳಿಸಿದರು.
ಕೆಂಪೇಗೌಡರು ಇಲ್ಲದಿದ್ದರೆ ಬೇರೊಬ್ಬರು ಬೆಂಗಳೂರು ನಿರ್ಮಾಣ ಮಾಡಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಅವರಿಗಿದ್ದ ಹಂಪೆ ನಗರಿಯ ಕನಸನ್ನು ಬೇರೆಯವರು ಕಾಣಲು ಖಂಡಿತಾ ಸಾಧ್ಯವಿರಲಿಲ್ಲ.
ಕೆಂಪೇಗೌಡರು ಕುಶಲಕರ್ಮಿಗಳು, ವಾಸ್ತುಶಿಲ್ಪಗಾರರು,ತಜ್ಞರನ್ನು ಜೊತೆಗಿಟ್ಟುಕೊಂಡು ಕೆರೆ-ಕಟ್ಟೆಗಳು, ಕೋಟೆಗಳು, ಉದ್ಯಾನವನಗಳು ಎಲ್ಲವನ್ನು ಒಳಗೊಂಡ ದೂರದೃಷ್ಟಿಯ ಸುಸಜ್ಜಿತವಾದ ನಗರದ ನೀಲನಕ್ಷೆ ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು ಎಂದರು.
ಇಂದು ಬೆಂಗಳೂರು ದೇಶ-ವಿದೇಶದಲ್ಲಿ ಪ್ರಸಿದ್ಧವಾಗಿದೆ. ಐಟಿ-ಬಿಟಿ ಕಂಪನಿಗಳು,ದೊಡ್ಡ ಕೈಗಾರಿಕೆಗಳ ನಗರವಾಗಿ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು ತಲೆಯೆತ್ತಲು ಬೀಜ ಬಿತ್ತಿದವರು ಕೆಂಪೇಗೌಡರು ಎನ್ನುವುದನ್ನು ಎಂದಿಗೂ ಮರೆಯಬಾರದು.
ಅವರ ಬಗ್ಗೆ ಅಭಿಮಾನ, ಗೌರವ ಇಟ್ಟುಕೊಂಡು ಅವರು ನಡೆದ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಎಸ್. ಅಶ್ವತಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಉಪವಿಭಾಗಾಧಿಕಾರಿ ಐಶ್ವರ್ಯ,ನಗರಸಭೆ ಅಧ್ಯಕ್ಷ ಮಂಜು, ಆಯುಕ್ತ ಮಂಜುನಾಥ್, ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಒಕ್ಕಲಿಗರ ಸೇವಾ ಟ್ರಸ್ಟ್ ನ ಬಾಣಸವಾಡಿ ನಾಗಣ್ಣ,ಎಲ್. ಕೃಷ್ಣ,ಕೆ.ಸಿ.ನಾಗಮ್ಮ, ಕೆ.ಸಿ.ರವೀಂದ್ರ, ವಿಶಾಲ್ ರಘು ಮತ್ತಿತರರಿದ್ದರು.