Friday, June 21, 2024

ಪ್ರಾಯೋಗಿಕ ಆವೃತ್ತಿ

ವೀರಶೈವ- ಲಿಂಗಾಯತರಿಗೆ ಮುಖ್ಯಮಂತ್ರಿ ಹುದ್ದೆ ವಂಚಿಸಿದ HDK : ಎಂ.ಬಿ ಪಾಟೀಲ್

ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಗಬೇಕಾದ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸುವ ಮೂಲಕ ದೊಡ್ಡ ಅನ್ಯಾಯವೆಸಗಿದ್ದನ್ನು ಸಮುದಾಯದ ಜನತೆ ಮರೆತಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.

ಮಂಡ್ಯನಗರದ ಕನಕ ಭವನದಲ್ಲಿ ನಡೆದ  ಆಯೋಜನೆಗೊಂಡಿದ್ದ ವೀರಶೈವ – ಲಿಂಗಾಯಿತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 2008 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದವು. ಮೊದಲ ಅವಧಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಧಿಕಾರ ಅನುಭವಿಸಿದರು, ಒಪ್ಪಂದದಂತೆ ಇನ್ನುಳಿದ 20 ತಿಂಗಳ ಅವಧಿಗೆ ಲಿಂಗಾಯಿತ ಸಮುದಾಯದ ಬಿ.ಎಸ್ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿತ್ತು, ಆದರೆ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನಮಾನ ಕಲ್ಪಿಸದೆ ಸಮುದಾಯಕ್ಕೆ ದೊಡ್ಡ ಅನ್ಯಾಯವೆಸಗಿದ್ದಾರೆ, ಈ ರಾಜಕೀಯ ವಂಚನೆಯನ್ನು ಸಮುದಾಯದವರೆಲ್ಲ ಅರಿತುಕೊಳ್ಳಬೇಕೆಂದರು.

ಬಸವಣ್ಣನವರ ತತ್ವ ಸಿದ್ಧಾಂತದಲ್ಲಿ ನಂಬಿಕೆ

ಬಿಜೆಪಿ ಪಕ್ಷ ಸಮಾನತೆಯ ಹರಿಕಾರ ಬಸವಣ್ಣನವರ ತತ್ವ ಸಿದ್ಧಾಂತವನ್ನು ಹಾಗೂ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬುವುದನ್ನು ಒಪ್ಪುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಬಸವಣ್ಣನವರ ಸಿದ್ಧಾಂತದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎಂದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಬಿ.ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರರನ್ನ ಪಕ್ಷದ ರಾಜ್ಯಾಧ್ಯಕ್ಷ ರನ್ನಾಗಿ ಮಾಡಲಾಗಿದ್ದು, ಸಮುದಾಯ ಓಲೈಕೆ ಮಾಡಲು ಇಂತಹ ತಂತ್ರ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ವರಿಷ್ಠರು 3 ವರ್ಷದ ಕಾಲ ಮಾತ್ರ ರಾಜ್ಯಾಧ್ಯಕ್ಷ ಎಂದು ವಿಜಯೇಂದ್ರ ಅವರಿಗೆ ನಿಗದಿ ಮಾಡಿದ್ದು, ಅಷ್ಟರೊಳಗೆ ಎಲ್ಲಾ ಚುನಾವಣೆ ಮುಗಿಯುತ್ತದೆ, ಇನ್ನೇಕೆ ಇವರು ಎಂಬ ಭಾವನೆ ಇಟ್ಟುಕೊಂಡಿದೆ, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷದ ಅಧ್ಯಕ್ಷ ಸ್ಥಾನವು ಲಿಂಗಾಯತ ಸಮುದಾಯದ ಕೈ ತಪ್ಪಲಿದ್ದು ಆದರೆ ಕಾಂಗ್ರೆಸ್ ಪಕ್ಷ ಸಮುದಾಯದ ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್, ಎಸ್.ಆರ್.ಕಂಠಿಯವರನ್ನು  ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿದೆ ಎಂದರು.

ಜನರ ಭಾವನೆ ಕೆರಳಿಸುವ ಕೆಲಸ

ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಪಕ್ಷ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ, ನಿಜವಾಗಲೂ ದೇಶ ಕಟ್ಟಿದ್ದು ಕಾಂಗ್ರೆಸ್ ನಾಯಕರು, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟದ್ದು ಕಾಂಗ್ರೆಸ್, ದೇಶವನ್ನಾಳಿದ ಕಾಂಗ್ರೆಸ್ ಸಾವಿರಾರು ಅಣೆಕಟ್ಟು, ಕೈಗಾರಿಕೆ ನಿರ್ಮಾಣ ಮಾಡಿದೆ, ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿತು. ಒಂದು ಅಣೆಕಟ್ಟು ನಿರ್ಮಾಣ ಮಾಡದ ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ ಎಂದು ದೂರಿದರು

ನರೇಂದ್ರ ಮೋದಿ ನೇತೃತ್ವದ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ, ಉದ್ಯೋಗ ಸೃಷ್ಟಿ ಇಲ್ಲದೆ ನಿರುದ್ಯೋಗ ತಾಂಡವವಾಡುತ್ತಿದೆ, ನೋಟ್ ಬ್ಯಾನ್ ಮಾಡಿ ತಪ್ಪು ಮಾಡಿದೆ, ಇದೀಗ ಚುನಾವಣಾ ಬಾಂಡ್ ಹಗರಣ ದೊಡ್ಡಮಟ್ಟದ್ದಾಗಿದ್ದು, ಕೇಂದ್ರ ತನಿಕಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೆದರಿಸಿ ಬೆದರಿಸಿ ಚುನಾವಣಾ ಬಾಂಡ್ ನೆಪದಲ್ಲಿ ಸುಲಿಗೆ ಮಾಡಲಾಗಿದೆ ಈ ಬಗ್ಗೆ ತನಿಖೆ ನಡೆದರೆ ನರೇಂದ್ರ ಮೋದಿ ಕಥೆ ಏನಾಗಲಿದೆ ಆದರೂ ಸಹ ನರೇಂದ್ರ ಮೋದಿಯವರ ಸುಳ್ಳಿನ ನಾಟಕ ವಿಶ್ವಕ್ಕೆ ತಿಳಿಯಲಿದೆ ಎಂದರು.

ಹೆಚ್ಚಿನ ಸವಲತ್ತು ದೊರಕಿದೆ

ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ, ಮಹಿಳೆಯರಿಗೆ ಹೆಚ್ಚಿನ ಸವಲತ್ತು ದೊರಕಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಹೆಚ್ಚಿನ ಗ್ಯಾರಂಟಿ ಲಾಭ ಮಹಿಳೆಯರು, ರೈತರು, ಕಾರ್ಮಿಕರಿಗೆ ಸಿಗಲಿದೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರಿಗೆ ಮತ ನೀಡುವ ಮೂಲಕ ಸಮುದಾಯದ ಜನತೆ ಜಯಗಳಿಸಿ ಕೊಡಬೇಕು. ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನತೆಗೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಬದ್ಧನಾಗಿರುವುದಾಗಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯ ಜನತೆ ಅವಕಾಶಕೊಟ್ಟಾಗ ಏನು ಮಾಡದೆ ಸಂಸದರಾಗಿ ಎಚ್ ಡಿ ಕುಮಾರಸ್ವಾಮಿ ಏನು ಮಾಡಲು ಸಾಧ್ಯ, ಅವರ ತಂದೆಗಿಂತಲೂ ದೊಡ್ಡ ನಾಯಕರಾಗಲು ಸಾಧ್ಯವೇ, ಕಾವೇರಿ ವಿಚಾರದಲ್ಲಿ ಎಚ್ ಡಿ ದೇವೇಗೌಡ ಪ್ರಧಾನಿಯಾಗಿದ್ದಾಗ ಏನು ಮಾಡಲಿಲ್ಲ, ಈಗ ಕುಮಾರಸ್ವಾಮಿ ಏನು ಮಾಡಲಿದ್ದಾರೆ, ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.

ಜೈಲಿಗೆ ಕಳುಹಿಸಲು ಹೋರಾಟ

ಬಿ.ಎಸ್ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ತಪ್ಪಿಸಿದ ಎಚ್ ಡಿ ಕುಮಾರಸ್ವಾಮಿ ಅನಂತರ ಸಹ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ, ಯಡಿಯೂರಪ್ಪರನ್ನ ಜೈಲಿಗೆ ಕಳುಹಿಸಲು ಹೋರಾಟ ನಡೆಸಿದರು. ಯಡಿಯೂರಪ್ಪರಿಗೆ ಕಿರುಕುಳ ನೀಡಿದ್ದನ್ನು ಜನತೆ ಮರೆಯುವುದಿಲ್ಲ ಎಂದರು.

ಮಂಡ್ಯ ಜಿಲ್ಲೆಗೆ ಶಾಶ್ವತ ಕೊಡುಗೆಯನ್ನು ಎಚ್ ಡಿ ಕುಮಾರಸ್ವಾಮಿ ನೀಡಿದ್ದಾರಾ ? ನಿಜವಾಗಲೂ ಅವರ ಕೊಡುಗೆ ಬಿಗ್ ಝೀರೋ ಎಂದ ಅವರು ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ ಅವಕಾಶ ಕೊಡಿ ಎಂದು ಮನವಿ ಮಾಡಬೇಕು. ಆದರೆ ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ಹೇಳಿದರೆ ಜನರು ನಂಬಲು ಸಾಧ್ಯವಿಲ್ಲಎಂದು ತಿಳಿಸಿದರು.

ವೀರಶೈವ – ಲಿಂಗಾಯಿತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಪ್ರಾಮುಖ್ಯತೆ ನೀಡಿದ್ದು, ಸಮುದಾಯದ ಜನರ ಮೇಲೆ ವಿಶ್ವಾಸದಿಂದ ಮುನ್ನಡೆಯುತ್ತಿದೆ ನಿಮ್ಮಗಳ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ ಸಮುದಾಯದ ಜಗದಾಂಬ, ಎಂ ಎಸ್ ಮಂಜುನಾಥ್ ಬೆಟ್ಟಹಳ್ಳಿ, ನಾಗರಾಜ್, ಸುಂಡಹಳ್ಳಿ ಸೋಮಶೇಖರ್, ವಕೀಲ ಗುರುಪ್ರಸಾದ್, ಗೀತಾ, ಸುಗುಣ, ಶೀಲಾ, ಆಶಾ, ರೇಣುಕಾ ಶಿವಣ್ಣ ಸೇರಿದಂತೆ ಹಲವರು ಬಿಜೆಪಿ -ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಾಬು ಬಂಡಿ ಸಿದ್ದೇಗೌಡ, ರವಿಕುಮಾರ್ ಗಣಿಗ, ಮಾಜಿ ಶಾಸಕ ಎಂ.ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಲಿಂಗಾಯತ ಮುಖಂಡರಾದ ಮಲ್ಲಿಕಾರ್ಜುನ, ರುದ್ರಪ್ಪ  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!