ಕೇಂದ್ರ ಸರ್ಕಾರ ಬಡವರಿಗೆ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯೋಜನೆಗಳನ್ನು ಉಪಯೋಗಿಸಿಕೊಂಡು ಮಹಿಳೆಯರು ಸಶಕ್ತರಾಗಬೇಕು. ಮಹಿಳೆ ಸಶಕ್ತರಾದರೆ ದೇಶ ಸಶಕ್ತವಾದಂತೆ ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ಅವರು ತಿಳಿಸಿದರು.
ಅವರು ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎ.ಪಿ.ಎಂ.ಎಸ್ ಸಭಾಂಗಣದಲ್ಲಿ ಮಾತೃವಂದನಾ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮಾತೃವಂದನಾ ಯೋಜನೆಯಡಿ ಮಹಿಳೆಯರು ಮೊದಲು ಗಭೀರ್ಣಿಯಾದ ಸಂದರ್ಭದಲ್ಲಿ ಅವರಿಗೆ ಪೌಷ್ಠಿಕಾಂಶ ಆಹಾರ ಒದಗಿಸಿ ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಮೂರು ಕಂತುಗಳಲ್ಲಿ ಒಟ್ಟು 5 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದರು.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಮಾತೃವಂದನಾ ಯೋಜನೆಯಡಿ 1019 ಗುರಿ ನಡುವೆ ನಿಗದಿಯಾಗಿತ್ತು. ಆದರೆ 1059 ಜನರಿಗೆ ಯೋಜನೆಯನ್ನು ತಲುಪಿಸಿ ಗುರಿ ಮೀರಿ ಸಾಧನೆ ಮಾಡಿರುತ್ತಾರೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಮಾತೃವಂದನಾ ಯೋಜನೆಯಡಿ 2021-22 ರಲ್ಲಿ 37.50 ಲಕ್ಷ ರೂ ಹಾಗೂ 2022-23 ರಲ್ಲಿ 69.50 ಲಕ್ಷ ರೂ ಮಹಿಳೆಯರಿಗೆ ಪಾವತಿಸಲಾಗಿದೆ. ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಅಂದಾಜು 10 ಕೋಟಿ ರೂ ಪಾವತಿಸಲಾಗಿದೆ ಎಂದರು .
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಜಲ್ ಜೀವನ್ ಮಿಷನ್, ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಸಾಮಾಜಿಕ ಪಿಂಚಣಿ ಯೋಜನೆ, ಸ್ಟಾಂಡ್ ಅಪ್ ಇಂಡಿಯಾ, ಪ್ರಧಾನಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಫಲಾನುಭವಿಗಳಿಗೆ ನೀಡಲಾಗುವ ಸಹಾಯಧನ ವನ್ನು ನೇರವಾಗಿ ಕೇಂದ್ರ ಸರ್ಕಾರ ಅವರ ಖಾತೆಗೆ ಜಮೆ ಮಾಡುತ್ತದೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾತೃವಂದನಾ ಯೋಜನೆಯ ಫಲಾನುಭವಿಗಳಾದ ವೇದವತಿ, ಪುಷ್ಪ, ಸಬಿಯಾ, ಅಯೀಷಾ ಅವರುಗಳು ಯೋಜನೆಯ ಸದುಪಯೋಗ ಪಡಿಸಿಕೊಂಡಿರುವ ಬಗ್ಗೆ ಸಚಿವರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಅಶ್ವಿನಿ, ಕಾರ್ಯನಿರ್ವಾಹಣಾಧಿಕಾರಿ ವೀಣಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.