ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು-1 ಕರ್ನಾಟಕದ-1 ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಎಂದು ಅವರು ತಿಳಿಸಿದರು.
ನಗರದ ಡಾ. ಬಿ ಆರ್. ಆಂಬೇಡ್ಕರ್ ಭವನದಲ್ಲಿ ನಡೆದ ಒಂದು ಊರು ಸೇವೆಗಳು ಹಲವಾರು ಗ್ರಾಮ ಒನ್ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಒನ್ ಕೇಂದ್ರಗಳು ಸರ್ಕಾರದ ವಿವಿಧ ಯೋಜನೆಗಳ, ಸಕಾಲ ಹಾಗೂ ಸೇವಾ ಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿಗಳ ಸಲ್ಲಿಕೆಗೆ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಯೋಜನಾ ನಿರ್ದೇಶಕರಾದ ವರಪ್ರಸಾದ್ ರೆಡ್ಡಿ ಮಾತನಾಡಿ,ಗ್ರಾಮ ಒನ್ ಕೇಂದ್ರದ ನಿರ್ವಾಹಕರು ಕೇಂದ್ರದಲ್ಲಿ ಇರುವವರೆಗೆ ಸಮವಸ್ತ್ರ ಧರಿಸುವುದು ಕಡ್ಡಾಯ. ಎಲ್ಲಾ ನಿರ್ವಾಹಕರು ಕಡ್ಡಾಯವಾಗಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು, ಸಾರ್ವಜನಿಕರಿಗೆ ನಗುಮೊಗದ ಮತ್ತು ಒಳ್ಳೆಯ ನಡೆತೆಯಿಂದ ಸೇವೆಯನ್ನು ನೀಡಬೇಕು.
ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೇಂದ್ರಗಳನ್ನು ತೆರೆಯಬೇಕು. ರಜೆ ಬೇಕೆಂದಲ್ಲಿ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ರಜೆ ಮಂಜೂರು ಮಾಡಿಸಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ಸೇವಾ ದರಕ್ಕಿಂತ ಹೆಚ್ಚು ದರ ಅರ್ಜಿದಾರರಿಂದ ಪಡೆಯಬಾರದು. ಹೆಚ್ಚು ದರ ಪಡೆದ ಬಗ್ಗೆ ಮಾಹಿತಿ ಬಂದಲ್ಲಿ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದರು.
ಕೇಂದ್ರಗಳ ಪ್ರಾರಂಭಿಕ ಹಂತದಲ್ಲಿ ಯೋಜನೆಯ, ನಿರ್ದಿಷ್ಟ ಕೇಂದ್ರದ ಮತ್ತು ಸೇವೆಗಳ ಕುರಿತು ಪ್ರಚಾರ ಮಾಡಬೇಕು. ಗ್ರಾಮ ಒನ್ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಮೊಬೈಲ್ ಸಂಖ್ಯೆಗಳನ್ನು ಬಳಸಿ ವಾಟ್ಸ್ ಆಪ್ ಗುಂಪುಗಳನ್ನು ರಚಿಸಿ ಕಾಲಕಾಲಕ್ಕೆ ಸೇವೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಗ್ರಾಮ ಒನ್ ಕೇಂದ್ರಗಳಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಗುಣಾತ್ಮಕ ಸೇವೆಯೊಂದಿಗೆ ಕಾಲಮಿತಿಯನ್ನು ಖಚಿತ ಪಡಿಸಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರಾದ ಸ್ವಾಮಿಗೌಡ, ತಹಶೀಲ್ದಾರ್ ರಾದ ಎನ್.ಶ್ವೇತಾ, ಎಂ. ವಿ.ರೂಪ ಹಾಗೂ ಇತರರು ಉಪಸ್ಥಿತರಿದ್ದರು.