ತಂಬಾಕು ಸೇವನೆ ಮನುಷ್ಯನ ಜೀವನವನ್ನು ನಾಶಮಾಡುತ್ತದೆ.ಈ ಅಭ್ಯಾಸವನ್ನು ಬಿಡಬೇಕು ಒಳ್ಳೆಯದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಒಳ್ಳೆಯ ಆಲೋಚನೆಯನ್ನು ಮಾಡೋಣ ಸಮಾಜದಲ್ಲಿ ತಂಬಾಕು ಮುಕ್ತರಾಗಿ ಜೀವಿಸೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎ.ಎಂ ನಳಿನಿಕುಮಾರಿ ಅವರು ತಿಳಿಸಿದರು.
ನಗರದ ಪಿ.ಇ.ಎಸ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮನೆಯಲ್ಲಿ ಒಬ್ಬರು ತಂಬಾಕಿನ ಚಟಕ್ಕೆಬಲಿಯಾದರೆ ಉಳಿದವರು ಸಹ ಒಂದಲ್ಲಾ ಒಂದು ರೀತಿ ತಂಬಾಕು ಸೇವನೆ ಆರಂಭಿಸುತ್ತಾರೆ ಅದೊಂದು ಆಕರ್ಷಣೆಯ ಸಂಕೇತವಾಗಿದೆ ಆಗಾಗಿ ತಂಬಾಕಿನಿಂದ ದೂರ ಉಳಿಯೋಣ ಎಂದರು.
ಮಿಮ್ಸ್ ನ ಸಹಾಯಕ ಪ್ರಾಧ್ಯಾಪಕರಾದ ಡಾ.ಸಿದ್ದಲಿಂಗಪ್ಪ ಎಸ್.ಹೂಗಾರ್ ಮಾತನಾಡಿ ತಂಬಾಕಿನ ದುಷ್ಪರಿಣಾಮ ಬಗ್ಗೆ ತಿಳಿದುಕೊಂಡು ಅದರಿಂದ ದೂರ ಉಳಿಯಬೇಕು. ಮನುಷ್ಯನ ದೇಹದ ಪ್ರತಿ ಅಂಗಾಂಗವನ್ನು ನಾಶಮಾಡುವಂತಹ ಶಕ್ತಿ ತಂಬಾಕಿಗೆ ಇದೆ. ತಂಬಾಕು ಸೇವನೆಯಿಂದ ಸುತ್ತಮುತ್ತಲಿನ ಪರಿಸರದ ಮೇಲೂ ಸಹ ದುಷ್ಪರಿಣಾಮ ಉಂಟಾಗುತ್ತದೆ ಎಂದರು.
ತಂಬಾಕು ಒಂದು ಬಾರಿ ದೇಹಕ್ಕೆ ಆವರಿಸಿಕೊಂಡರೆ ಅದು ನಮಗೆ ಗೊತ್ತಿಲ್ಲದ ರೀತಿಯಲ್ಲಿ ಅನೇಕ ಬದಲಾವಣೆಗಳನ್ನು ಸೃಷ್ಟಿಸುತ್ತದೆ.ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಆಹ್ವಾನಿಸಿದಂತಾಗುತ್ತದೆ ಎಂದರು.
ಸಿಗರೇಟ್ ಸೇದುವುದರಿಂದ ದೇಹಕ್ಕೆ ಕಾರ್ಬನ್ ಮಾನಾಕ್ಸೈಡ್ ಬಿಡುಗಡೆಯಾಗುತ್ತದೆ ಇದು ಆಮ್ಲಜನಕದೊಂದಿಗೆ ಸೇರಿ ಅನೇಕ ತೊಂದರೆ ಉಂಟಾಗುತ್ತದೆ ಎಂದರು.
ತಂಬಾಕು ಸೇವನೆಯಿಂದ ರಕ್ತ ಪರಿಚಲನೆಗೆ ತೊಂದರೆ ಉಂಟಾಗಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಸಾವು ಸಂಭವಿಸಬಹುದು. ತಂಬಾಕು ಕೇವಲ ಮನುಷ್ಯನಿಗೆ ಮಾತ್ರ ಹಾನಿ ಮಾಡುವುದಿಲ್ಲ. ಮನೆಯಲ್ಲಿ ಸಾಕಿರುವಂತಹ ಪ್ರಾಣಿಗಳಿಗೂ ಸಹ ತೊಂದರೆ ಉಂಟಾಗುತ್ತದೆ.
ಪರಿಸರದ ಮೇಲೆ ತಂಬಾಕಿನಿಂದ ಯಾವುದೇ ಪರಿಣಾಮ ಬೀರದೆ ಇರಬೇಕಾದರೆ ತಂಬಾಕು ಸೇವನೆಯನ್ನು ಬಿಡಬೇಕು.ತಂಬಾಕಿನ ಸೇವನೆಯ ನಿಷೇಧಿಸುವ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವ ಸಂದೇಶವನ್ನು ಸಾರಬೇಕು ಎಲ್ಲರೂ ಆರೋಗ್ಯವಾಗಿ ತಂಬಾಕು ಮುಕ್ತವಾಗಿ ಜೀವಿಸೋಣ ಎಂದರು.
1987 ಮೇ 31 ರಿಂದ ವಿಶ್ವ ಸಂಸ್ಥೆ ವತಿಯಿಂದ ಪ್ರತಿ ವರ್ಷ ಒಂದು ಘೋಷವಾಕ್ಯದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಮಾಡಲಾಗುತ್ತಿದೆ. ತಂಬಾಕು ಪರಿಸರಕ್ಕೆ ಮಾರಕ ಎಂಬುವುದು ಈ ವರ್ಷ ಧೇಯವಾಕ್ಯ ವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಡಿ
ಸಂಜಯ್ ತಿಳಿಸಿದರು.
14 ರಿಂದ 18ವರ್ಷದ ಯುವಕರು ಆರಂಭದಲ್ಲಿ ತಂಬಾಕನ್ನು ಪ್ರಾರಂಭಿಸುತ್ತಾರೆ.ಮುಂದೆ ಅದನ್ನೇ ಒಂದು ಚಟವಾಗಿ ದುರಾಭ್ಯಾಸಕ್ಕೆ ತುತ್ತಾಗುತ್ತಾರೆ ಇದನ್ನು ಮೊದಲು ನಿಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿ ಪ್ರತಿ ವರ್ಷವೂ ಸಹ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗುವುದು. ಮುಂದಿನ ದಿನದಲ್ಲಿ ಮಂಡ್ಯದ 7 ತಾಲ್ಲೂಕನ್ನು ತಂಬಾಕು ಮುಕ್ತ ತಾಲ್ಲೂಕುಗಳಲ್ಲಿ ಪ್ರಯತ್ನಿಸಲು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ 1800 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿ ಘೋಷಣೆ ಮಾಡಲಾಗಿದೆ. ಮುಂದೆ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.
ತಂಬಾಕು ರಹಿತ ದಿನಾಚರಣೆಯಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸುವ ಕುರಿತು ಜಾಗೃತಿ ಮೂಡಿಸುವ ಜಾಥಾ ಮೆರವಣಿಗೆಗೆ ಮಂಡ್ಯ ಉಪವಿಭಾಗಾಧಿಕಾರಿಗಳಾದ ಐಶ್ವರ್ಯ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಟಿ.ಎನ್ ಧನಂಜಯ ಅವರು ಚಾಲನೆ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲಿ ತಂಬಾಕು ಸೇವನೆಯನ್ನು ನಿಯಂತ್ರಿಸಲು ನಿರಂತರ ಸೇವೆ ಸಲ್ಲಿಸಿದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ.ಜಿ.ಭವಾನಿಶಂಕರ್, ಪಿ.ಇ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ. ಮಹದೇವು, ಡಾ.ಕೆ.ಆರ್.ಶಶಿಧರ್,ಡಾ.ಅನಿಲ್ ಕುಮಾರ್, ಡಾ.ಮರಿಗೌಡ, ಡಾ.ಕೆ.ಪಿ ಅಶ್ವಥ್, ಡಾ.ಆಶಾಲತಾ, ಡಾ. ಉದಯ್, ಡಾ.ಶಶಾಂಕ್, ಡಾ. ಕೆ.ಬಿ.ಜವರೇಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್ ತಂಬಾಕು ನಿಯಂತ್ರಣ ಸಲಹೆಗಾರರಾದ ತಿಮ್ಮರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.