Friday, September 27, 2024

ಪ್ರಾಯೋಗಿಕ ಆವೃತ್ತಿ

ಜನರ ಮನೆ ಬಾಗಿಲಿಗೆ ಬಂದು ಸೌಲಭ್ಯ ನೀಡುವುದು ಉತ್ತಮ ಕಾರ್ಯ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸೌಲಭ್ಯ ನೀಡುವುದು ಉತ್ತಮ ಕಾರ್ಯವಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಸಿ.ಎಸ್. ಪುಟ್ಟರಾಜು ಸಲಹೆ ನೀಡಿದರು.

ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಗಲಗುಪ್ಪೆ ಹಾಗೂ ಟಿ.ಎಸ್.ಛತ್ರ ಎರಡು ಅವಳಿ ಗ್ರಾಮಗಳ ರೀತಿ ಇದ್ದು, ಇಲ್ಲಿಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.ಜನರಿಂದ ಸ್ವೀಕೃತವಾಗಿರುವ ಕುಂದುಕೊರತೆ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದ್ದೇನೆ ಎಂದರು.

ನ್ಯಾಯಧೀಶರಾದ ವೆಂಕಟರಾಮಯ್ಯ ಅವರ ಸವಿನೆನಪಿನಲ್ಲಿ 1.75 ಕೋಟಿ ರೂ‌ ವೆಚ್ಚದಲ್ಲಿ ಶಾಲೆ ನಿರ್ಮಾಣವಾಗಬೇಕು. ಈ ಕುರಿತಂತೆ ಶಿಕ್ಷಣ ಸಚಿವರೊಂದಿಗೆ ಸಹ ಚರ್ಚಿಸಲಾಗಿದೆ. ಜನರಿಂದ ದೇಣಿಗೆಯನ್ನು‌ ಸಹ ಸಂಗ್ರಹಿಸಿ ಉತ್ತಮ‌ ರೀತಿಯಲ್ಲಿ ಶಾಲಾ ಕಟ್ಟಡ ನಿರ್ಮಿಸಿ ಶಾಲೆಗೆ ನ್ಯಾಯಾಧೀಶರಾದ ವೆಂಕಟರಾಮಯ್ಯ ಅವರ ಹೆಸರಿಡಬೇಕು ಎಂದರು.

ಕೋವಿಡ್ ಹಿನ್ನಲೆಯಲ್ಲಿ‌ ಟಿ.ಎಸ್ ಛತ್ರ ಹಾಗೂ ಇದರ ಸುತ್ತಲಿನ ಕೆಲವು ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಇದೆ ವೇಳೆ ಜಿಲ್ಲಾಧಿಕಾರಿ ಎಸ್.ಅಶ್ವತಿ‌ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ಒಂದು ವರ್ಷದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದು ದಿನ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಲಾಗುವುದು ಎಂದರು.

ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆಯಿಂದ 3 ಜನರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವುದು ಗ್ರಾಮಕ್ಕೆ ಕೀರ್ತಿ ತರುವ ವಿಚಾರ ಎಂದರು.

ಗ್ರಾಮಸ್ಥರು ರಸ್ತೆ, ಚರಂಡಿ ನಿರ್ಮಾಣ, ಬಸ್ ಸಮಸ್ಯೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜಿಲ್ಲಾ ಹಂತದಲ್ಲಿ ಪರಿಹಾರವಾಗುವ ಕುಂದುಕೊರತೆಗಳನ್ನು ತುರ್ತಾಗಿ ಪರಿಹರಿಸಲು ಸಂಬಂಧಿಸಿದ ‌ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೆಲವು ದೂರುಗಳನ್ನು ರಾಜ್ಯ ಮಟ್ಟಕ್ಜೆ ಕಳುಹಿಸಬೇಕಿದ್ದು, ಅದಕ್ಕೂ ಸಹ ಕ್ರಮ ವಹಿಸಲಾಗುವುದು ಎಂದರು.

ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ 3000 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಅವರಿಗೆ ಸವಲತ್ತು ವಿತರಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಕೃಷಿಕ್ಷೇತ್ರ ಪ್ರಶಸ್ತಿ, ಶಿಕ್ಷಣ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಬಹುಮಾನ, ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ, ಗರ್ಬಿಣಿ ಮಹಿಳೆಯರಿಗೆ ಸೀಮಂತ, ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವನಂದಮೂರ್ತಿ ತಹಶೀಲ್ದಾರ್ ನಯನ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂಜಾ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!