ಸಮಾಜದಲ್ಲಿರುವ ಜಾತಿ ಪದ್ಧತಿ, ಭ್ರಷ್ಟಾಚಾರ, ಅನಿಷ್ಠ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ಬಿಟ್ಟು ಹೋಗುತ್ತಿರುವುದು ದುರಂತದ ಸಂಗತಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ವಿಷಾದ ವ್ಯಕ್ತಪಡಿಸಿದರು.
ಮಂಡ್ಯ ನಗರದ ಕಲಾಮಂದಿರದಲ್ಲಿ ಕಾವೇರಿ ಕಲಾ ಮತ್ತು ಸಮಾಜ ಸೇವಾ ಟ್ರಸ್ಟ್ ಕೆ.ಎಂ. ದೊಡ್ಡಿ ಆಯೋಜಿಸಿದ್ದ ಸಂಘದ ಉದ್ಘಾಟನೆ ಮತ್ತು ಶ್ರೀ ವೀರಭದ್ರೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರ ಅಭಿನಯದ ಕುರುಕ್ಷೇತ್ರ ಅಥವಾ ಗೀತೋಪದೇಶ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆ ಬಹಳಷ್ಟು ಹದಗೆಟ್ಟಿದೆ. ದೇಶದಲ್ಲಿ ಜಾತಿ-ಜಾತಿಗಳ ನಡುವೆ ಘರ್ಷಣೆ, ಭ್ರಷ್ಠಚಾರ, ದುರಾಡಳಿತ, ವಂಶಪಾರಂಪರ್ಯ ರಾಜಕೀಯ ನಡೆಯುತ್ತಿರುವುದು ದುರಂತದ ವಿಷಯ. ಇಂತಹವುಗಳನ್ನು ಜನತೆ ಧಿಕ್ಕರಿಸಬೇಕಿದೆ ಎಂದು ಸಲಹೆ ನೀಡಿದರು.
ಮುಂದಿನ ಪೀಳಿಗೆಗೆ ನಾವೆಲ್ಲರೂ ಸೇರಿ ಜಾತಿವ್ಯವಸ್ಥೆ, ಭ್ರಷ್ಠಚಾರ, ದುರಾಚಾರ, ದುರಾಡಳಿತವನ್ನು ಬಿಟ್ಟು ಹೊಗುವುದು ಸರಿಯೇ? ಸಾಮಾಜಿಕ ಅನಿಷ್ಠ ಪದ್ಧತಿಗಳನ್ನೇ ಮುಂದಿನ ಪೀಳಿಗೆಗೂ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾಟಕ ಕಲೆಗಳು ನಮ್ಮ ಬದುಕನ್ನು ಸುಧಾರಿಸಬೇಕಿದೆ, ಪಾಂಡವರು-ಕೌರವರ ಜೀವನ ಸಂದೇಶಗಳು ನಮಗೆ ಉತ್ತಮ ಪಾಠ ಕಲಿಸುತ್ತವೆ.ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಕೀಲ ಗುರು ಪ್ರಸಾದ್, ಆರ್. ಕೆ. ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್‌ರಾಮಕೃಷ್ಣ, ಕಾಡುಕೊತ್ತನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ. ಎ. ದಯಾನಂದ, ರಾಜೀವ್ ಗಾಂಧಿ ವಿವಿ ರಿಜಿಸ್ಟ್ರಾರ್ ಡಾ.ಮಹದೇವು, ಸಂಘದ ಗೌರವಾಧ್ಯಕ್ಷ ಪುಟ್ಟಮಾದಪ್ಪ, ಕಾರ್ಯದರ್ಶಿ ಚಂದ್ರ ಪ್ರಕಾಶ್, ಉಪಾಧ್ಯಕ್ಷ ಪುಟ್ಟೇಗೌಡ, ಪ್ರವೀಣ್, ನಾಗಣ್ಣ ಹಾಗೂ ಟ್ರಸ್ಟ್ ನ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.