ಹಿರಿಯ ಮುತ್ಸದ್ಧಿ,ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿರುವ ಮಾಜಿ ಶಾಸಕ ಕೆ. ಎನ್. ರಾಜಣ್ಣನವರನ್ನು ಕಾಂಗ್ರೆಸ್ ಪಕ್ಷ ಈ ಕೂಡಲೇ ಉಚ್ಚಾಟನೆ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ನಾಯಕರು ಒತ್ತಾಯಿಸಿದರು.
ಮಂಡ್ಯ ನಗರದ ಜೆ.ಸಿ.ವೃತ್ತದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೆ.ಎನ್. ರಾಜಣ್ಣ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಶಾಸಕ ಎಂ. ಶ್ರೀನಿವಾಸ್ ಮಾತನಾಡಿ, ದಕ್ಷಿಣ ಭಾರತದಿಂದ ಪ್ರಧಾನಿ ಹುದ್ದೆಗೆ ಏರಿದ ಮೇರು ಪರ್ವತ ದೇವೇಗೌಡರು.ಅವರ ಬಗ್ಗೆ ಕೆ.ಎನ್. ರಾಜಣ್ಣ ಆಡಿರುವ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
2004ರಲ್ಲಿ ಜಾ.ದಳದಿಂದ ಕೆ. ಎನ್. ರಾಜಣ್ಣನವರು ಆಯ್ಕೆಯಾಗಲು ದೇವೇಗೌಡರೇ ಕಾರಣ. ರಾಜಣ್ಣನವರನ್ನು ಶಾಸಕರನ್ನಾಗಿ ಮಾಡಿದ ದೇವೇಗೌಡರಿಗೆ ಈ ರೀತಿ ಕೀಳು ಮಾತಿನಿಂದ ನಿಂದಿಸಿರುವುದು ಅವರಿಗೆ ಶೋಭೆ ತರುವುದಿಲ್ಲ.
ದೇವೇಗೌಡರ ಬಗ್ಗೆಯೇ ಹೀಗೆ ಕೆಟ್ಟ ಮಾತನಾಡುತ್ತಾರೆ ಎಂದರೆ ಅವರಲ್ಲಿರುವ ದುಷ್ಟತನ ಏನೆಂಬುದು ಗೊತ್ತಾಗುತ್ತದೆ. ರಾಜಣ್ಣನವರು ಈ ಕೂಡಲೇ ದೇವೇಗೌಡರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು.
ಕಾಂಗ್ರೆಸ್ ವರಿಷ್ಠರು ರಾಜಣ್ಣನವರ ಮಾತುಗಳನ್ನು ಖಂಡಿಸಿ ಕ್ಷಮೆ ಕೇಳುವಂತೆ ಹೇಳಿದ್ದಾರೆ.ಅದರಂತೆ ನಾಯಕರು ರಾಜಣ್ಣನವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ದೇವೇಗೌಡರ ಬಗ್ಗೆ ರಾಜಣ್ಣ ನೀಡಿರುವ ಕೀಳು ಹೇಳಿಕೆಯನ್ನು ಖಂಡಿಸುತ್ತೇನೆ. ನಮ್ಮ ದೇಶಕ್ಕೆ ದೇವೇಗೌಡರು ದೊಡ್ಡ ಆಸ್ತಿ , ಕಾವೇರಿ ಬಗ್ಗೆ ಕಾನೂನು ಹೋರಾಟ ನಡೆಸಿ 15 ಟಿಎಂಸಿ ಹೆಚ್ಚುವರಿ ನೀರು ರಾಜ್ಯಕ್ಕೆ ಸಿಗಲು ಕಾರಣರಾದರು.ಕೂಡಲೇ ರಾಜಣ್ಣನವರು ಸಾರ್ವಜನಿಕ ಬದುಕಿಗೆ ವಿದಾಯ ಹೇಳಬೇಕು.ಕಾಂಗ್ರೆಸ್ ಪಕ್ಷ ಅವರನ್ನು ಪಕ್ಷದಿಂದಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ದೇವೇಗೌಡರು ಅಜಾತಶತ್ರುವಾಗಿದ್ದು ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಅವರಿಗೆ ಗೌರವ ನೀಡುತ್ತಾರೆ.ಆದರೆ ರಾಜಣ್ಣ ಕುಚೋದ್ಯದಿಂದ ಮಾತುಗಳನ್ನು ಆಡಿರುವುದು ಖಂಡನೀಯ.ರಾಜಣ್ಣ ಕ್ಷಮೆ ಕೇಳದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಸರ್ಕಾರ ಮಾನಸಿಕ ಅಸ್ವಸ್ಥನಾಗಿ ಹುಚ್ಚು ಹಿಡಿದಿರುವ ರಾಜಣ್ಣನವರನ್ನು ಕೂಡಲೇ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು. ದೇವೇಗೌಡರು ಬಡವರು, ದೀನ ದಲಿತರಿಗೆ ಕೊಟ್ಟ ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇವೇಗೌಡರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು, ಒಂದು ವೇಳೆ ರಾಜಣ್ಣನವರಿಗೆ ಏನಾದರೂ ಮಾಡುವ ಮೊದಲು ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸುವುದು ಒಳ್ಳೆಯದು ಎಂದು ಕಿಡಿಕಾರಿದರು.
ನಗರಸಭಾ ಅಧ್ಯಕ್ಷ ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮೇಗೌಡ,ಪಿಇಟಿ ಅಧ್ಯಕ್ಷ ವಿಜಯಾನಂದ್, ಜಿ.ಪಂ.ಮಾಜಿ ಸದಸ್ಯ ಯೋಗೇಶ್,ನಗರಾಧ್ಯಕ್ಷ ಗೌರೀಶ್,ನಗರಸಭಾ ಸದಸ್ಯರಾದ ನಾಗೇಶ್, ರವಿಕುಮಾರ್, ಮೀನಾಕ್ಷಿ ಪುಟ್ಟಸ್ವಾಮಿ, ಮಂಜುಳಾ ಉದಯಶಂಕರ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಹಮದ್,ಮುಖಂಡರಾದ ರಮೇಶ್, ವೇಣುಗೋಪಾಲ್, ತುಳಸೀಧರ್, ನಾಗಮ್ಮ, ನಾಗರತ್ನ,ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.