ರಾಜ್ಯದಲ್ಲಿ 2500ರೂ ಕೋಟಿ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಎಲ್ಲಾ ಸಚಿವ ಸ್ಥಾನಗಳು ಮಾರಾಟಕ್ಕಿದೆ ಎಂದು ಬಸವನಗೌಡ ಯತ್ನಾಳ್ ಸಾರ್ವಜನಿಕವಾಗಿ ಹೇಳಿದ್ದಾರೆ.
ಗೋಕಾಕ್ ನಲ್ಲಿ ಮಾತನಾಡುತ್ತಾ ಕಿಡಿಕಾರಿರುವ ಯತ್ನಾಳ್ ಅವರು, ಮುರುಗೇಶ್ ನಿರಾಣಿ, ಬಿ.ಸಿ ಪಾಟೀಲ್ ಸೇರಿದಂತೆ ಹಲವು ಜನ ಅಮೌಂಟ್ ಗಿರಾಕಿಗಳು ನಮ್ಮ ಸಂಪುಟದಲ್ಲಿ ಇದ್ದಾರೆ. ಇವರು ದುಡ್ಡುಕೊಟ್ಟು ಮಂತ್ರಿಗಿರಿಯನ್ನು ಖರೀದಿಸಿದ್ದಾರೆ. ಆದರೆ ನನಗೆ ಹಣ ಕೊಟ್ಟು ಮಂತ್ರಿಗಿರಿ ಪಡೆಯುವ ಅಗತ್ಯ ಇಲ್ಲ ಎಂದು ಕಿಡಿಕಾರಿದ್ದಾರೆ.
2500 ಕೋಟಿ ಕೊಟ್ಟರೆ ನಿಮ್ಮನ್ನೆ ಮುಖ್ಯಮಂತ್ರಿ ಮಾಡ್ತೀವಿ ಎಂದು ಬಿಜೆಪಿ ನಾಯಕರು ಕೇಳಿಕೊಂಡರು. ಜೊತೆಗೆ ಸೋನಿಯಾ ಗಾಂಧಿ, ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿಸುತ್ತೇವೆ ಎಂದು ನನ್ನ ಬಳಿ ಬಂದಿದ್ದರು ಎಂದು ನೇರ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ
ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಾತ್ರ ಬಹುದೊಡ್ಡದು. ಆದರೆ ಅವರ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
ನೇರವಾಗಿ ಹೆಸರನ್ನು ಹೇಳದೆ ವಿಜಯೇಂದ್ರ ಅವರನ್ನು ಆರೋಪಿಸಿರುವ ಯತ್ನಾಳ್, ಜಾರಕಿಹೊಳಿ ಯವರ ವಿರುದ್ದ ಬಿಜೆಪಿ ಪಕ್ಷದ ಮಹಾನ್ ನಾಯಕನ ಮಗನೊಬ್ಬನ ಷಡ್ಯಂತ್ರ ಇದೆ. ಆ ಷಡ್ಯಂತ್ರದಿಂದಲೇ ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದರು.
ಚುನಾವಣೆಯ ಸಂದರ್ಭದಲ್ಲಿ ಈ ಬಸವನಗೌಡ ಏಕೆ ಹೀಗೆ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ ಎಂದು ನಮ್ಮ ಪಕ್ಷದವರೇ ಆಶ್ಚರ್ಯ ಪಡಬೇಕಾಗಿಲ್ಲ. ಹಿಂದೆ ಯತ್ನಾಳ್ ಇಂತಹ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ.
ಪಕ್ಷದವರಿಂದ ಶೋಕಾಸ್ ನೋಟಿಸ್ ಸಹ ಪಡೆದಿದ್ದಾರೆ. ಆದರೆ ಈ ಬಾರಿ ಅವರು ಸರ್ಕಾರದ ವಿರುದ್ಧ ಗುರುತರ ಆರೋಪ ಹೊರಿಸಿದ್ದಾರೆ. ಈ ಆರೋಪಕ್ಕೆ ಹೈಕಮಾಂಡ್ ಏನು ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು.