Wednesday, September 11, 2024

ಪ್ರಾಯೋಗಿಕ ಆವೃತ್ತಿ

”ಕುಮಾರಣ್ಣ ಖಾಲಿ ಮಾತು ಬೇಡ, ಕೊಟ್ಟ ಮಾತು ಉಳಿಸಿಕೊಳ್ಳಿ”: ಡಿ.ಕೆ ಶಿವಕುಮಾರ್ ಟಾಂಗ್

“ಕುಮಾರಣ್ಣ ಮಂಡ್ಯ ಸಂಸದರಾಗಿ ಈಗ ಕೇಂದ್ರ ಮಂತ್ರಿಯಾಗಿದ್ದೀರಿ. ಮಂಡ್ಯದ 10 ಸಾವಿರ ಜನರಿಗೆ ಉದ್ಯೋಗ ಕೊಡಿಸಲು ಕಾರ್ಖಾನೆ ಮಾಡುವುದಾಗಿ ಹೇಳಿದ್ದೀರಿ, ಹಾಸನದಲ್ಲೂ ಕಾರ್ಖಾನೆ ಮಾಡುವುದಾಗಿ ಹೇಳಿದ್ದೀರಿ. ನಿಮ್ಮ ಈ ಕಾರ್ಯಕ್ಕೆ ಸಹಕಾರ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನೀವು ಖಾಲಿ ಮಾತು ಆಡಬೇಡಿ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, “ಚನ್ನಪಟ್ಟಣದಲ್ಲಿ ನಾನು ಕಾರ್ಯಕ್ರಮ ಮಾಡಿದಾಗ 22 ಸಾವಿರ ಜನ ಅವರ ಕಷ್ಟಗಳ ಬಗ್ಗೆ ಅರ್ಜಿ ಹಾಕಿದ್ದಾರೆ. ಈ ಕ್ಷೇತ್ರದಲ್ಲಿ 20 ವರ್ಷಗಳಿಂದ ಬಡವರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ನಮ್ಮ ಅವಧಿಯಲ್ಲಿ ಈ ಕಾರ್ಯ ಆಗಬೇಕು ಎಂದು ಇಕ್ಬಾಲ್ ಹುಸೇನ್ ಅವರಿಗೆ ನಾನು ಹಾಗೂ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದೇವೆ. ಇದಕ್ಕೆ ಸಿದ್ಧತೆ ನಡೆಯುತ್ತಿವೆ. ಅಭಿವೃದ್ಧಿ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿಯವರು ಕೊಟ್ಟಿದ್ದರಾ? ಕಾಂಗ್ರೆಸ್ ಪಕ್ಷಕ್ಕೆ ಜನರ ಬದುಕೇ ನಮ್ಮ ಉಸಿರು” ಎಂದು ತಿಳಿಸಿದರು.

ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ

“ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಹರಿತ ಮಾತುಗಳಿಂದ ಕುಟುಕಿದರು.

“ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ ವಿಚಾರಗಳನ್ನು ಅನಾವರಣಗೊಳಿಸುವುದರ ಜತೆಗೆ ನಮ್ಮ ಪಕ್ಷ ಸಂಘಟನೆಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ನನ್ನ ನಾಯಕತ್ವಕ್ಕೆ 135 ಸೀಟು, ಕುಮಾರಸ್ವಾಮಿ ನಾಯಕತ್ವಕ್ಕೆ 19 ಸೀಟು ಕೊಟ್ಟಿದ್ದಾರೆ

“ನಾನು ಶುಕ್ರವಾರದಂದು ಬಿಡದಿಯಲ್ಲಿ ಬೇಕಂತಲೇ ಕುಮಾರಸ್ವಾಮಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ನನ್ನನ್ನು ಜೈಲಿಗೆ ಹಾಕಲು ಮಿಲಿಟರಿ ಬಂದು ಕರೆದುಕೊಂಡು ಹೋಗಲಿದೆ ಎಂದು ಕುಮಾರಸ್ವಾಮಿ ಅವರು ಹಿಂದೆ ಹೇಳಿಕೆ ನೀಡಿದ್ದರು. ನಾನು ಕೇಂದ್ರ ಮಂತ್ರಿಯಾಗಿದ್ದು, ನಿಮ್ಮನ್ನು ತಿಹಾರ್ ಜೈಲಿಗೆ ಕಳಿಸುತ್ತೇನೆ ಎಂಬ ಅರ್ಥದಲ್ಲಿ ಆ ಮಾತು ಹೇಳಿದ್ದರು” ಎಂದರು.

“ಮಿಸ್ಟರ್ ಕುಮಾರಸ್ವಾಮಿ, ನಾನು ತಿಹಾರ್ ಜೈಲನ್ನೂ ನೋಡಿ ಆಗಿದೆ, ನೀವು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಾಕಿರುವ ಕೇಸ್ ಗಳನ್ನು ನೋಡಿ ಆಯಿತು. ಇದಾದ ನಂತರವೇ ಜನ ಈ ಡಿ.ಕೆ. ಶಿವಕುಮಾರ್ ನಾಯಕತ್ವಕ್ಕೆ 135 ಸೀಟುಗಳನ್ನು ಕೊಟ್ಟು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ನಿನ್ನ ನಾಯಕತ್ವಕ್ಕೆ ಜನ ಬರೀ 19 ಸೀಟು ಕೊಟ್ಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಪೆನ್ ಡ್ರೈವ್ ಪ್ರಕರಣದಲ್ಲಿ ಬಿಜೆಪಿ ನಾಯಕನ ಕೈವಾಡ: ಬಿಜೆಪಿ ಮೌನವೇಕೆ ?

“ಕುಮಾರಸ್ವಾಮಿ ಅವರು ನಾನು ಪೆನ್ ಡ್ರೈವ್ ಬಿಡುಗಡೆ ಮಾಡಿದೆ ಎಂದು ಸುಳ್ಳು ಆರೋಪ ಮಾದಿದ್ದರು. ಈ ಡಿ.ಕೆ. ಶಿವಕುಮಾರ್ ಅಂತಹ ನೀಚ ರಾಜಕಾರಣ ಮಾಡುವುದಿಲ್ಲ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಈಗ ಕುಮಾರಸ್ವಾಮಿ ಅವರೇ ಈ ಪೆನ್ ಡ್ರೈವ್ ಗಳನ್ನು ಬಿಟ್ಟಿರುವುದು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಎಂದು ಹೇಳಿದ್ದಾರೆ. ಪ್ರೀತಂ ಗೌಡನನ್ನು ವೇದಿಕೆಯಲ್ಲಿಟ್ಟುಕೊಂಡು ನನ್ನನ್ನು ಪಾದಯಾತ್ರೆ, ಸಭೆಗೆ ಕರೆಯುತ್ತಾರೆ. ಹೀಗಾಗಿ ನಾನು ಭಾಗವಹಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಹೋಗಿದ್ದಾರೆ. ಅವರ ಮಾತಿಗೂ ಕೃತಿಗೂ ಸಂಬಂಧವೇ ಇರುವುದಿಲ್ಲ. “

ಪೆನ್ ಡ್ರೈವ್ ಪ್ರಕರಣ ಹೊರ ಬಂದಾಗ, ನನಗೂ ಪ್ರಜ್ವಲ್ ರೇವಣ್ಣಗೂ ಸಂಬಂಧವಿಲ್ಲ, ನನಗೂ ರೇವಣ್ಣ ಕುಟುಂಬಕ್ಕೂ ಸಂಬಂಧವಿಲ್ಲ. ಅವರ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ ಎಂದು ಹೇಳಿದ್ದರು. ಈಗ ನಿಮ್ಮ ಮಾತು ಎಲ್ಲಿ ಹೋಯ್ತು? ನೀವು ಒಂದಾಗಿಯೇ ಇರಿ. ನಿಮ್ಮನ್ನು ಬೇರೆ ಮಾಡುವ ಉದ್ದೇಶ ನನ್ನದಲ್ಲ. ಆದರೆ ನಿಮ್ಮ ಮಾತು ಕಾಲಕ್ಕೆ ತಕ್ಕಂತೆ ಬದಲಾಗದಿರಲಿ.

ನಾನು ಬಿಜೆಪಿ ನಾಯಕರನ್ನು ಕೆಲವು ಪ್ರಶ್ನೆ ಮಾಡಲು ಬಯಸುತ್ತೇನೆ. ಪೆನ್ ಡ್ರೈವ್ ಅನ್ನು ಪ್ರೀತಂ ಗೌಡ ಹಂಚಿದ್ದಾನೆ ಎಂದು ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ನಾಯಕರೇಕೆ ಚರ್ಚೆ ಮಾಡುತ್ತಿಲ್ಲ. ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುವ ದೇಶದ ಪ್ರಧಾನಮಂತ್ರಿಗಳು ಈ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಬಿಜೆಪಿ ನಾಯಕರು ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ? ಈ ಬಗ್ಗೆ ಚರ್ಚೆ ಮಾಡಿ ಎಂದು ಆಗ್ರಹಿಸುತ್ತೇನೆ” ಎಂದರು.

ಮಿಸ್ಟರ್ ವಿಜಯೇಂದ್ರ, ನಿಮ್ಮ ತಂದೆ ಕಣ್ಣೀರಾಕುತ್ತಾ ರಾಜೀನಾಮೆ ಕೊಟ್ಟಿದ್ದೇಕೆ?

“ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿನ್ನೆ ನನ್ನನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿದ್ದಾರೆ. ಮಿಸ್ಟರ್ ವಿಜಯೇಂದ್ರ, ನಿಮ್ಮ ತಂದೆ ಏನು ತಪ್ಪು ಮಾಡಿದ್ದರು? ಅವರು ಯಾಕೆ ರಾಜೀನಾಮೆ ಕೊಟ್ಟರು? ನಿಮ್ಮ ತಂದೆ ವಿಧಾನಸೌಧದಲ್ಲಿ ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದು ಏಕೆ? ಈ ಬಗ್ಗೆ ನೀವು ಉತ್ತರ ನೀಡಬೇಕು. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದೇಕೆ? ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದೇಕೆ? ವಿಜಯೇಂದ್ರ ಪಾದಯಾತ್ರೆ ಮಾಡುವ ಬದಲು, ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಜೆಡಿಎಸ್ ಕಾರಣವಾಗಿದ್ದರ ಬಗ್ಗೆಯೂ ಉತ್ತರ ನೀಡಬೇಕು” ಎಂದು ಸವಾಲು ಹಾಕಿದರು.

ದೇವೇಗೌಡರ ಕುಟುಂಬದ ಭೂಕಬಳಿಕೆ ಬಗ್ಗೆ ಬಿಜೆಪಿ ಜಾಹೀರಾತು

“ವಿಧಾನಸಭೆ ಚುನಾವಣೆ ಮುನ್ನ ಬಿಜೆಪಿಯವರು ‘ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭೂಕಬಳಿಕೆಯ ಪಕ್ಷಿನೋಟ’ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಮುಡಾದಲ್ಲಿ ಆ ಕುಟುಂಬ ಮಾಡಿದ ಅಕ್ರಮ ನಿವೇಶನಗಳ ಬಗ್ಗೆ ಕುಮಾರಸ್ವಾಮಿ ಅವರ ಅರ್ಜಿ ಸಮೇತ ಪ್ರಕಟಣೆ ಮಾಡಿದ್ದಿರಿ. ಈ ಬಗ್ಗೆ ಉತ್ತರ ನೀಡುವಿರಾ ಯಡಿಯೂರಪ್ಪನವರೇ? ಅಶೋಕಣ್ಣ, ಸಿ.ಟಿ ರವಿ ಇದಕ್ಕೆ ಉತ್ತರ ಕೊಡ್ರಪ್ಪ? ನಿಮ್ಮ ಪಕ್ಷ ನೀಡಿರುವ ಪ್ರಕಟಣೆ ಬಗ್ಗೆ ಚರ್ಚೆ ಮಾಡಿ” ಎಂದು ಆಗ್ರಹಿಸಿದರು.

ಸಿದ್ದರಾಮಯ್ಯನವರ ಪತ್ನಿ ಅವರಿಗೆ ಮುಡಾ ನಿವೇಶನ ಕೊಟ್ಟಾಗ ಸಿಎಂ ಆಗಿದ್ದವರು ಯಾರು?

“ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಸಹೋದರ ಅರಿಶಿನ ಕುಂಕುಮಕ್ಕೆ ದಾನವಾಗಿ ನೀಡಿದ ಜಮೀನಿನ ವಿಚಾರದಲ್ಲಿ ಅಕ್ರಮ ನಡೆದಿದೆಯಾ? ಅವರು ಸರ್ಕಾರಿ ಜಮೀನು ಕಬಳಿಸಿದ್ದಾರಾ? ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿಕೊಂಡಿದ್ದಾರಾ? ಅವರ ಜಮೀನನ್ನು ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕಾರಣಕ್ಕೆ ಪರಿಹಾರವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ?” ಎಂದು ಕೇಳಿದರು.

“ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ಬೊಮ್ಮಾಯಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ನೀಡಿದ್ದೀರಿ. ಈ ನಿವೇಶನಗಳನ್ನು ಈಗ ಸಚಿವರಾಗಿರುವ ಭೈರತಿ ಸುರೇಶ್ ಕೊಟ್ಟಿದ್ದಾರಾ? ಸಿದ್ದರಾಮಯ್ಯ ಈ ನಿವೇಶನ ನೀಡಲು ಸಹಿ ಹಾಕಿದ್ದಾರಾ? ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಜೆಪಿಯವರು ಮುಡಾದಲ್ಲಿ ಅಧಿಕಾರ ಹೊಂದಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಮುಡಾದವರು ತಮ್ಮ ತಪ್ಪಿಗೆ ಪರಿಹಾರವಾಗಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ನೀಡಿದ್ದಾರೆ. ಈ ವಿಚಾರ ಚರ್ಚೆ ಮಾಡುವ ಮುನ್ನ ನೀವು ಜೆಡಿಎಸ್ ನಾಯಕರ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಚರ್ಚೆ ಮಾಡಿ” ಎಂದರು.

ಕುಮಾರಸ್ವಾಮಿ ಅವರ ಉತ್ತರಕ್ಕೆ ಕಾಯುತ್ತಿದ್ದೇನೆ

“ನನ್ನ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅವರ ಉತ್ತರಕ್ಕಾಗಿ ಬಹಳ ನಮ್ರತೆಯಿಂದ ಕಾಯುತ್ತಿದ್ದೇನೆ. ಕುಮಾರಸ್ವಾಮಿ ಅವರು ಬಾಲಕೃಷ್ಣ ಗೌಡ ಆಸ್ತಿಯಿಂದ ಆರಂಭಿಸಿ ಎಲ್ಲವನ್ನು ಹೇಳಬೇಕು. ಮೊದಲು ಎಷ್ಟಿತ್ತು, ಆನಂತರ ಎಷ್ಟಾಗಿದೆ, ಈಗ ಅದು ಎಷ್ಟಕ್ಕೆ ಏರಿಕೆಯಾಗಿದೆ ಹೇಳಬೇಕು. ಅವರು ಪ್ರತಿನಿತ್ಯ ತಮ್ಮ ಕುಟುಂಬದ ಒಬ್ಬೊಬ್ಬರ ಆಸ್ತಿ ಸಂಪಾದನೆ ಎಷ್ಟು ಎಂದು ಹೇಳಲಿ. ಬೆಂಗಳೂರಿನಲ್ಲೇ ನೂರಾರು ಎಕರೆ ಆಸ್ತಿ ಇರುವುದನ್ನು ಬಹಿರಂಗಪಡಿಸಲಿ. ಕನಕಪುರ ರಸ್ತೆ, ಕುಂಬಳಗೋಡು, ದೊಡ್ಡಗುಬ್ಬಿ, ಚಿಕ್ಕಗುಬ್ಬಿ, ನೆಲಮಂಗಲ, ಯಲಹಂಕ ಬಳಿ ಸೇರಿದಂತೆ ಎಲ್ಲೆಲ್ಲಿ ಎಷ್ಟಿದೆ? ಎಂದು ಹೇಳಲಿ. ಇದರಲ್ಲಿ ಎಷ್ಟು ದಾಖಲೆಗಳಿವೆ, ಎಷ್ಟು ಆಸ್ತಿಗಳ ಮೂಲ ಯಾರದ್ದು, ಎಷ್ಟು ಆಸ್ತಿಗಳ ದಾಖಲೆ ಇಲ್ಲ ಎಲ್ಲವನ್ನು ಹೇಳಬೇಕು.

ಅವರ ಗಣಿಗಾರಿಕೆ ಬಗ್ಗೆ ನಾನು ಮಾತನಾಡುವುದಿಲ್ಲ, ಲೋಕಾಯುಕ್ತ ತನಿಖೆ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಪಾಲರ ಬಳಿ ಇರುವ ಫೈಲ್ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಕುಟುಂಬದ ಆಸ್ತಿ ಹಾಗೂ ಅವುಗಳ ಹಿನ್ನೆಲೆ ಬಗ್ಗೆ ಮಾತ್ರ ಉತ್ತರ ಕೊಡಲಿ. ಬಿಜೆಪಿ ಮಾಜಿ ಮಂತ್ರಿ ಬಿ.ಜೆ ಪುಟ್ಟಸ್ವಾಮಿ ಅವರು ವಿಧಾನ ಪರಿಷತ್ ನಲ್ಲಿ ದಾಖಲೆ ಮಂಡಿಸಿ ಕೇಳಿದ್ದರು” ಎಂದು ಪ್ರಶ್ನಿಸಿದರು.

ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುತ್ತಿದ್ದಾರೆ

“ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಗಾಜಿನಮನೆಯಲ್ಲಿದ್ದುಕೊಂಡು ಬೇರೆಯವರ ಮನೆಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರು ಬಿಜೆಪಿಯವರೇ ಹೊರತು, ಕಾಂಗ್ರೆಸ್ ಪಕ್ಷದವರಲ್ಲ. ಪಿಎಸ್ಐ ಹಗರಣ ಆದಾಗ ಮುಖ್ಯಮಂತ್ರಿಗಳು, ಗೃಹಮಂತ್ರಿಗಳಾಗಿದ್ದವರು ಯಾರು? ಈ ಹಗರಣ ನಡೆದಿದ್ದು ಸತ್ಯವಲ್ಲವೇ? ಯುವಕರ ಭವಿಷ್ಯ ನಾಶವಾಗಿದ್ದು ಸತ್ಯವಲ್ಲವೇ. ನಮ್ಮ ಜಿಲ್ಲೆಯ ಮೂವರು ಯವಕರು ಕೂಡ ಈ ಹಗರಣಕ್ಕೆ ಸಿಲುಕಿದ್ದು ಸತ್ಯವಲ್ಲವೇ? ಆಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದವರು ಗಂಡಸು ಅಲ್ಲವೇ?” ಎಂದು ಕಿಡಿಕಾರಿದರು.

“ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವವರು, ಪಿಎಸ್ಐ ಹಗರಣವಾದಾಗ, ಯುವಕರಿಗೆ ಅನ್ಯಾಯವಾದಾಗ ಸಚಿವರಿಂದ ರಾಜೀನಾಮೆ ಯಾಕೆ ಪಡೆಯಲಿಲ್ಲ? ಆಗಿನ ಗೃಹ ಸಚಿವರು, ಮುಖ್ಯಮಂತ್ರಿಗಳು ಏಕೆ ರಾಜೀನಾಮೆ ನೀಡಲಿಲ್ಲ?” ಎಂದು ವಾಗ್ದಾಳಿ ನಡೆಸಿದರು.

ಒಡೆದು ಹೋಗಲು ನಮ್ಮ ಸರ್ಕಾರ ಮಡಕೆಯಲ್ಲ

“ನವೆಂಬರ್, ಡಿಸೆಂಬರ್ ವೇಳೆಗೆ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೊರಟಿದ್ದಾರೆ. ಈ ಸರ್ಕಾರ ಒಡೆದುಹೋಗಲು ಮಡಕೆಯೇ? ನಮ್ಮ ಒಬ್ಬ ಶಾಸಕರನ್ನು ಅಲ್ಲಾಡಿಸಲು ನಿಮ್ಮಿಂದ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಡಿ.ಕೆ. ಶಿವಕುಮಾರ್ ನೇತೃತ್ವದ ಪಕ್ಷದ ಸರ್ಕಾರವನ್ನು ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಇದು ನಿಮ್ಮ ಭ್ರಮೆ, ತಿರುಕನ ಕನಸು” ಎಂದು ಗುಡುಗಿದರು.

ಬಿಜೆಪಿ ನಾಯಕರು ಯತ್ನಾಳ್ ಆರೋಪಕ್ಕೆ ಉತ್ತರ ನೀಡಲಿ

“ಬಿಜೆಪಿಯವರು ನಮ್ಮ ಪ್ರಶ್ನೆಗೆ ಉತ್ತರ ನೀಡದಿದ್ದರೂ ನಿಮ್ಮದೇ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರೂ.2,500 ಕೋಟಿ ಕೊಡಬೇಕು, ಮಂತ್ರಿ ಸ್ಥಾನಕ್ಕೆ ರೂ.100 ಕೋಟಿ ಕೊಡಬೇಕು. ಕೋವಿಡ್ ಸಮಯದ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ. ಮಾರಿಷಸ್ ಖಾತೆಗೆ 10 ಸಾವಿರ ಕೋಟಿ ಹೋಗಿದೆ ಎಂದು ಹೇಳಿದರಲ್ಲಾ. ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಉತ್ತರ ನೀಡುತ್ತಿಲ್ಲ? ವಿಜಯೇಂದ್ರ, ಐಟಿ ಅಧಿಕಾರಿಗಳು ನಿಮ್ಮ ಮನೆ, ನಿಮ್ಮ ಆಪ್ತರ ಮನೆ ಮೇಲೆ ದಾಳಿ ಮಾಡಿ ದಾಖಲೆ ತೆಗೆದುಕೊಂಡು ಹೋದರಲ್ಲ ಅವು ಏನಾದವು? ಇದು ಯಾಕಾಯ್ತು? ವಿಜಯೇಂದ್ರ ಅವರೇ ನೀವು ಪಾದಯಾತ್ರೆ ಮಾಡುವ ಮುನ್ನ ನಿಮ್ಮ ಪಕ್ಷದವರೇ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದರು.

“ನೀವು ಯಾವುದೇ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲರ ಮೇಲೂ ಪ್ರಕರಣ ದಾಖಲಿಸುತ್ತಿದ್ದೀರಿ. ನೀವು ಒಂದು ಮಾತು ನೆನಪಿನಲ್ಲಿ ಇಟ್ಟುಕೊಳ್ಳಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ ಕೊಟ್ಟಿರುವ ಇತಿಹಾಸವಿದೆ. ಈ ದೇಶದಲ್ಲಿ ಮತ್ತೆ ಕಾಂಗ್ರೆಸ್ ಶಕ್ತಿ ಉದಯಿಸಲಿದೆ” ಎಂದು ತಿಳಿಸಿದರು.

2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ

“ಈ ರಾಜ್ಯದಲ್ಲಿ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ವಿರುದ್ಧ ಯಾರು ಎಷ್ಟಾದರೂ ಟೀಕೆ ಮಾಡಲಿ, ನನ್ನ ಪ್ರಶ್ನೆಗೆ ಉತ್ತರ ನೀಡಲಿ. ಈ ಜಿಲ್ಲೆಯ ಜನ ನನಗೆ, ಇಕ್ಬಾಲ್ ಹುಸೇನ್, ಬಾಲಕೃಷ್ಣ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟದ ವಿಚಾರ ನಾಳೆ ಮಾತನಾಡುತ್ತೇನೆ. ಬಿಜೆಪಿ ಪಾದಯಾತ್ರೆ ಸಾಗುತ್ತಿರುವ ಮದ್ದೂರು, ಶ್ರೀರಂಗಪಟ್ಟಣ, ಪಾಡವಪುರ, ಮೈಸೂರುವರೆಗೂ ಕಾಂಗ್ರೆಸ್ ಶಾಸಕರೇ ಇದ್ದಾರೆ. ನಿನ್ನೆವರೆಗೂ ಪಾದಯಾತ್ರೆ ವಿಚಾರದಲ್ಲಿ ಕೇವಲ ಬಿಜೆಪಿ ಬಾವುಟವಿತ್ತು. ನಾನು ಹಾಗೂ ಪರಮೇಶ್ವರ್ ಅವರು ಪ್ರಶ್ನೆ ಮಾಡಿದ ತಕ್ಷಣ ರಾತ್ರೋರಾತ್ರಿ ಪಾದಯಾತ್ರೆಗೆ ಜೆಡಿಎಸ್ ಬಾವುಟ ಬಂದಿದೆ” ಎಂದು ತಿಳಿಸಿದರು.

“ಅವರದ್ದು ಬೆಳಗ್ಗೆ ಒಂದು ಮಾತು, ಸಂಜೆ ಒಂದು ಮಾತು. ಅವರದು ಕೇವಲ ಹಿಟ್ ಅಂಡ್ ರನ್ ಮಾಡುವುದಷ್ಟೇ ಕೆಲಸ. ಬಿಜೆಪಿ ನಾಯಕರು ತಮ್ಮ ಮೈಸೂರು ಘಟಕದಿಂದ ನೀಡಿರುವ ಜಾಹೀರಾತು, ನಿಮ್ಮ ಶಾಸಕ ಯತ್ನಾಳ್ ಅವರು ಮಾಡಿರುವ ಆರೋಪ, ಪಿಎಸ್ಐ ಹಗರಣದ ಬಗ್ಗೆ ಉತ್ತರ ನೀಡಲಿ. ಆಮೇಲೆ ಪಾದಯಾತ್ರೆ ಮಾಡಲಿ. ಬಿಜೆಪಿಯವರು ಕಾವೇರಿ ನೀರಿಗೆ, ಮೇಕೆದಾಟು ಯೋಜನೆಗೆ ಹೆಜ್ಜೆ ಹಾಕಲಿಲ್ಲ. ರೈತರ ಬದುಕು ರಕ್ಷಣೆ ಮಾಡಲಿಲ್ಲ, ಯುವಕರಿಗೆ ಉದ್ಯೋಗ ನೀಡಲಿಲ್ಲ” ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!