ಪಾಂಡವಪುರ ತಾಲ್ಲೂಕಿನ ಬಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಕಡಿಮೆ ಬೆಲೆ ನೀಡಿ ವಶಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು ಇದಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದು ಮೇಲುಕೋಟೆಯ ಕದಲಗೆರೆ ಗ್ರಾಮಸ್ಥರು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕದಲಗೆರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕದಲಗೆರೆ ಗ್ರಾಮಸ್ಥ ಬೆಟ್ಟಸ್ವಾಮಿ ಗೌಡ ಮಾತನಾಡಿ,ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಲೆ ನಿರ್ಧಾರಣಾ ಸಭೆ ನಿಗದಿಪಡಿಸಲಾಗಿತ್ತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಹಾಗೂ ಉಪವಿಭಾಗಾಧಿಕಾರಿಗಳು ದರ ನಿಗದಿಪಡಿಸುವ ಬಗ್ಗೆ ಸರಿಯಾಗಿ ನಮ್ಮೊಡನೆ ಮಾತನಾಡಲಿಲ್ಲ. ನಮಗೆ ಕಡಿಮೆ ಬೆಲೆಗೆ ಜಮೀನು ನೀಡುವಂತೆ ಆಗ್ರಹ ಮಾಡುತ್ತಿದ್ದಾರೆ. ಈ ಜಮೀನನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ನಾವು ನಾಳೆ ದಿನ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಉಪವಿಭಾಗಾಧಿಕಾರಿಗಳು ಕುಂಟೆಗೆ 4 ಸಾವಿರದಿಂದ 1.25 ಲಕ್ಷದವರೆಗೆ ದರ ನೀಡಲು ಬಂದಿದ್ದಾರೆ.ಆದರೆ ಜಿಲ್ಲಾಡಳಿತ 20ರಿಂದ 30 ಸಾವಿರ ಕೊಡುವುದಾಗಿ ಹೇಳುತ್ತಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ರೈತರು ಅರ್ಧ ಎಕರೆ, ಒಂದು ಎಕರೆ ಜಮೀನು ಹೊಂದಿದ್ದಾರೆ.ಇದೇ ಅವರ ಜೀವನಾಧಾರವಾಗಿದ್ದು ಕಡಿಮೆ ಬೆಲೆಗೆ ಕೊಡುವಂತೆ ಜಿಲ್ಲಾಡಳಿತ ಕೇಳುತ್ತಿದೆ ಎಂದರು.
ಜಮೀನಿನಲ್ಲಿ ತೆಂಗು ಸೇರಿದಂತೆ ಇನ್ನಿತರ ಬೆಲೆಬಾಳುವ ಮರಗಳು ಇದ್ದು ಕಳೆದ ವರ್ಷ 1 ಗುಂಟೆ ಜಮೀನು ರೂ. 3,08,000 ಕ್ಕೆ ಶುದ್ಧ ಕ್ರಯ ಪತ್ರವಾಗಿದೆ.ಆ ಪ್ರಕಾರ ಮೂರರಿಂದ ನಾಲ್ಕು ಪಟ್ಟು ಹಣವನ್ನು ರೈತರಿಗೆ ನೀಡಬೇಕು. ಇಲ್ಲದಿದ್ದರೆ ನಾವು ಜಮೀನು ಕೊಡುವುದಿಲ್ಲ. ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶಾಸಕ ಸಿ.ಎಸ್. ಪುಟ್ಟರಾಜುರವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಪಕ್ಕದ ಜಮೀನು ಎಷ್ಟು ಬೆಲೆಗೆ ಮಾರಾಟವಾಗಿದೆ ಎಂಬ ಪತ್ರ ಇದ್ದರೆ ತನ್ನಿ, ಅದನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡೋಣ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿ ಮಾತನಾಡುತ್ತೇವೆ. ನಮಗೆ ನ್ಯಾಯ ಸಿಗಬೇಕು ಎಂದರು.ಕದಲಗೆರೆ ಸಿಂಗೇಗೌಡ, ಕುಮಾರ್, ನರಸಿಂಹ, ಲಿಂಗೇಗೌಡ, ಕೆ. ರಾಮೇಗೌಡ, ಸ್ವಾಮಿಗೌಡ, ವಿಜಯಕುಮಾರ್, ಯೋಗ ಮತ್ತಿತರರಿದ್ದರು.