ಜೆಡಿಎಸ್ ಪಕ್ಷದ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಮರಿತಿಬ್ಬೇಗೌಡ ತನ್ನ ಪಕ್ಷದ ಅಭ್ಯರ್ಥಿ ಕೈ ಬಿಟ್ಟು ಮಧು ಮಾದೇಗೌಡರ ಕೈ ಹಿಡಿದದ್ದು ಅವರ ಗೆಲುವಿಗೆ ಒಂದು ಕಾರಣ ಎಂದರೆ ತಪ್ಪಾಗಲಾರದು.
ಅತ್ಯುತ್ತಮ ಸಂಘಟನಾಕಾರ, ಕಳೆದ 3 ದಶಕಗಳ ಅವಧಿಯಲ್ಲಿ ಶಿಕ್ಷಣ ಹಾಗೂ ಪದವೀಧರ ಕ್ಷೇತ್ರದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮರಿತಿಬ್ಬೇಗೌಡರು ಈ ಬಾರಿ ತಮ್ಮ ಬೆಂಬಲಿಗ
ಕೀಲಾರ ಜಯರಾಮುಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡಿದ್ದರು. ಅದರೆ ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಹಾಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡರ ಮಾತು ಕೇಳಿ ಹೆಚ್.ಕೆ.ರಾಮುಗೆ ಟಿಕೆಟ್ ಘೋಷಣೆ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಇಬ್ಬರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಮಾದೇಗೌಡರ ಪರ ಬಹಿರಂಗವಾಗಿ ಕೆಲಸ ಮಾಡಿ ವರಿಷ್ಠರಿಗೆ ತಮ್ಮ ಶಕ್ತಿ ಏನೆಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.
ಅಧಿಕಾರದ ಅಹಂ ಇಲ್ಲದೆ ಜನರೊಟ್ಟಿಗೆ ಬೆರೆಯುವ ಮರಿತಿಬ್ಬೇಗೌಡ ಅಪ್ಪಟ ಗ್ರಾಮೀಣ ಸೊಗಡಿನ ಮಾತುಗಾರ. ಸದನದ ಹೊರಗೆ ಹಾಗೂ ಒಳಗೆ ಜನಸಾಮಾನ್ಯರ ಹಾಗೂ ಶಿಕ್ಷಕರ ಪ್ರತಿನಿಧಿಯಾಗಿ ಧ್ವನಿಯೆತ್ತಿದ್ದಾರೆ.
ಪ್ರಥಮ ಚುನಾವಣೆಯಲ್ಲಿ ಪಕ್ಷೇತರರಾಗಿ, ದ್ವಿತೀಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ತೃತೀಯ ಹಾಗೂ ಚತುರ್ಥ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಪರಿಷತ್ ಸದಸ್ಯರಾಗಿರುವ ಮರಿತಿಬ್ಬೇಗೌಡರು ಪ್ರಸ್ತುತ ಚುನಾವಣೆಯಲ್ಲಿ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡದೆ ಮಧು ಮಾದೇಗೌಡರ ಗೆಲುವಿಗೆ ಕೈ ಜೋಡಿಸಿರುವುದು ಮುಂಬರುವ ಚುನಾವಣೆ ವೇಳೆಗೆ ಅವರು ಕಾಂಗ್ರೆಸ್ ಪಕ್ಷದಿಂದ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗುವ ಸುಳಿವು ನೀಡಿದೆ.