ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಚಿಕ್ಕಮಂದಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ನಿರ್ದೇಶಕರು ಹಾಗೂ ಶೇರುದಾರರು ತೀರ್ಮಾನ ಕೈಗೊಂಡಿದ್ದರೂ ಸಂಘದ ಕಾರ್ಯದರ್ಶಿ ಮಮತಾ ಎಂಬುವರು ತಮ್ಮ ಕುಟುಂಬಕ್ಕೆ ಸೇರಿದ ಬಾಡಿಗೆ ಕಟ್ಟಡದಲ್ಲೇ ಮುಂದುವರಿಸುವಂತೆ ಅಡ್ಡಿ ಮಾಡುತ್ತಿದ್ದಾರೆಂದು ಆರೋಪಿಸಿ ಸಂಘದ ಶೇರುದಾರರು ಪ್ರತಿಭಟನೆ ನಡೆಸಿದರು.
ಸಂಘದಲ್ಲಿ ಈಗಾಗಲೇ 30 ಲಕ್ಷ ರೂ.ಉಳಿತಾಯವಿದ್ದು ಕಾರ್ಯದರ್ಶಿ ಮಮತಾ ರವರು ತಮ್ಮವರಿಗೆ ಬಾಡಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಧ್ಯಕ್ಷೆ ಇಂದಮ್ಮನ ಜೊತೆಗೊಡಿ ನಾನಾ ಕಾರಣ ಹೇಳಿ ಕಟ್ಟಡ ನಿರ್ಮಾಣ ಮಾಡಲು ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ಪ್ರಶ್ನೆ ಮಾಡಿದ ನಿರ್ದೇಶಕರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೋಲೀಸ್ ಠಾಣೆಗೆ ದೂರು ನೀಡುವುದಾಗಿ ಧಮಕಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಮಾಡಬೇಕು. ಕಾರ್ಯದರ್ಶಿ ಮಮತಾರನ್ನು ವಜಾಗೊಳಿಸಿ ಬೇರೆ ಕಾರ್ಯದರ್ಶಿಯನ್ನು ಮರು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರು ಹಾಗೂ ಶೇರುದಾರರು ಸೇರಿದಂತೆ ನೂರಾರು ಗ್ರಾಮಸ್ಥರುಗಳು ಇದ್ದರು.