ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಕಾರ್ಪೊರೇಟ್ ಉದ್ಯಮಿಗಳ ಪರ ಹಾಗೂ ರೈತ-ಕಾರ್ಮಿಕ, ಜನವಿರೋಧಿಯಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ದೇವಿ ಆಕ್ರೋಶ ವ್ಯಕ್ತಪಡಿಸಿದರು.
ಮಳವಳ್ಳಿ ಪಟ್ಟಣದ ಶಾದಿ ಮಹಲ್ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಮೇ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಬಿಕ್ಕಟ್ಟು, ಕೋವಿಡ್ ಮಹಾ ಪಿಡುಗು ಮತ್ತು ಲಾಕ್ಡೌನ್ ಪರಿಣಾಮಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಆಪ್ತರಾಗಿರುವ ಕೆಲವೇ ಕಾರ್ಪೋರೇಟ್ ಬಂಡವಾಳಶಾಹಿಗಳ ಶ್ರೀಮಂತಿಕೆಯು ಜಾಗತಿಕ ಮಟ್ಟಕ್ಕೆ ಏರಿಕೆಯಾಗಿದೆ. ಇದಕ್ಕೆ ನರೇಂದ್ರ ಮೋದಿಯವರ ಸರ್ಕಾರ, ಉಳ್ಳವರ ಪರವಾದ ನೀತಿಯನ್ನು ತಂದಿರುವುದೇ ಕಾರಣ ಎಂದರು.
ದೇಶದ ದುಡಿಯುವ ಜನರಾದ ಕಾರ್ಮಿಕರು ರೈತರು, ಕೂಲಿಕಾರರು, ನೌಕರರು, ಸಣ್ಣಪುಟ್ಟ ವ್ಯಾಪಾರಿಗಳು ಮಾತ್ರ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅತ್ಯಂತ ಕಡಿಮೆ ಆದಾಯ ಮತ್ತು ತೀವ್ರ ಬೆಲೆ ಏರಿಕೆಯ ಪರಿಣಾಮವಾಗಿ ಅವರ ಕುಟುಂಬದ ದಿನನಿತ್ಯದ ನಿರ್ವಹಣೆಯೇ ಕಷ್ಟವಾಗಿದೆ ಎಂದರು.
ಕಡಿಮೆ ಆದಾಯದಲ್ಲಿಯೇ ತಮ್ಮ ಕುಟುಂಬದ ಆಹಾರ, ವಸತಿ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತಿತರೆ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದೆ, ಪ್ರತಿಯೊಬ್ಬರೂ ಸಾಲದ ಸುಳಿಯಲ್ಲಿ ಸಿಲುಕುವಂತೆ ಕೇಂದ್ರ ಸರ್ಕಾರದ ನೀತಿಗಳು ಮಾಡಿವೆ ಎಂದು ಆರೋಪಿಸಿದರು.
ಇದನ್ನು ಓದಿ: ಕುಸ್ತಿ ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ : ಕೆ. ಗೋಪಾಲಯ್ಯ
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಕೇಂದ್ರ ಸರ್ಕಾರದ ಹಲವು ಜನವಿರೋದಿ ನೀತಿಗಳು ದೇಶದ ಕಾರ್ಮಿಕರನ್ನು ಬೀದಿಗೆ ತಳ್ಳಿವೆ. ಜನ ವಿರೋಧಿ, ದೇಶ ವಿರೋಧಿ ಮತ್ತು ಸಂವಿಧಾನ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಿಐಟಿಯುನ ತಿಮ್ಮೇಗೌಡ, ಕಾರ್ಮಿಕ ಇಲಾಖೆಯ ನಿರೀಕ್ಷಕಿ ಅನಿತಾ, ಜನವಾದಿ ಮಹಿಳಾ ಸಂಘಟನೆಯ ಸುನೀತಾ, ಸುಶೀಲಾ, ಶಿವಮ್ಮ, ಗೌರಮ್ಮ ಸೇರಿದಂತೆ ಹಲವರು ಇದ್ದರು.