ವಾಣಿಜ್ಯ ಪರವಾನಿಗೆ ಪಡೆಯದೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಪುರಸಭೆ ಅಧಿಕಾರಿಗಳು ಅಂಗಡಿಗಳಿಗೆ ಬೀಗ ಜಡಿದರು.
ಸೋಮವಾರ ಸಂಜೆ ಬೆಳಿಗ್ಗೆ ಪುರಸಭೆ ಮುಖ್ಯಾಧಿಕಾರಿ ಜಿ. ಅಮೃತ ಅವರ ನೇತೃತ್ವದಲ್ಲಿ ತೆರಳಿದ್ದ ಅಧಿಕಾರಿಗಳು ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿಯಲ್ಲಿ ವಾಣಿಜ್ಯ ಪರವಾನಗಿ ಪಡೆಯದೆ ವ್ಯಾಪಾರ ನಡೆಸುತ್ತಿದ್ದ ಮಳಿಗೆಗಳಿಗೆ ಬೀಗ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಅಮೃತರವರು, ನಾಗಮಂಗಲ ಪುರಸಭೆ ವ್ಯಾಪ್ತಿಗೆ ಸೇರಿದ ಚೌಡೇನಹಳ್ಳಿಯಲ್ಲಿ ವ್ಯವಸಾಯದ ಭೂಮಿಯನ್ನು ಅನ್ಯಕ್ರಾಂತ ಮಾಡಿಸದೆ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ. ವಾಣಿಜ್ಯ ಪರವಾನಗಿ ಪಡೆಯಬೇಕೆಂದು ನಾಲ್ಕೈದು ಬಾರಿ ನೋಟಿಸ್ ನೀಡಿದ್ದರೂ ಅಂಗಡಿ ಮಾಲೀಕರು ವಾಣಿಜ್ಯ ಪರವಾನಗಿ ಪಡೆಯದ ಕಾರಣ ಬೀಗ ಹಾಕಿದ್ದೇವೆ ಎಂದರು.
ಇನ್ನುಳಿದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಕಾನೂನು ರೀತಿ ಪರವಾನಿಗೆ ಪಡೆಯಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಮೂರು-ನಾಲ್ಕು ವರ್ಷದಿಂದ ಅನ್ಯಕ್ರಾಂತ ಮಾಡಿಸದೆ ಇದುವರೆಗೆ ಅಂಗಡಿ ನಡೆಸಿರುವುದೇ ತಪ್ಪು. ಭೂಮಿ ನೀಡಿರುವುದು ವ್ಯವಸಾಯಕ್ಕೆ ಹೊರತು ಅಂಗಡಿಗಳನ್ನು ಮಾಡಿಕೊಳ್ಳುವುದಕ್ಕಲ್ಲ ಎಂದರು.
ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಶಾಸಕರ ನೇತೃತ್ವದ ಸಭೆಯಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ತುಂಬಾ ಕಡಿಮೆ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಇನ್ನು ಮುಂದೆ ವಾಣಿಜ್ಯ ಪರವಾನಿಗೆ ಪಡೆಯದೆ ವ್ಯಾಪಾರ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಪುರಸಭೆ ಆರೋಗ್ಯ ನಿರೀಕ್ಷಕರಾದ ಎಸ್. ಮೂರ್ತಿ, ನಿಂಗೇಗೌಡ ಮತ್ತಿತರರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.